ಮಂಗಳೂರು: ಕರಾವಳಿ ಪ್ರದೇಶದ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಮಹತ್ವದ ಮೈಲುಗಲ್ಲಾಗಿ, ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಾ ತಂಡವು ಯಶಸ್ವಿಯಾಗಿ ಸಣ್ಣ ರಂಧ್ರದ ಹೃದಯ ಶಸ್ತ್ರಚಿಕಿತ್ಸೆ ಮೂಲಕ ಮೈಟ್ರಲ್ ಕವಾಟದ ದುರಸ್ತಿ ನಡೆಸಿದೆ.
ಮಂಗಳೂರಿನಲ್ಲಿ ಮಾತ್ರವಲ್ಲದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಆಧುನಿಕ “ಕೀಹೋಲ್ ಹೃದಯ ಶಸ್ತ್ರಚಿಕಿತ್ಸೆಯನ್ನು ”ಮೊದಲ ಬಾರಿಗೆ ನಡೆಸಲಾಗಿದೆ. ವೃದ್ಧ ರೋಗಿಯು ಮೈಟ್ರಲ್ ಕವಾಟದ ದೋಷದ ಜೊತೆಗೆ ಹೃದಯದ ಮೈಟ್ರಲ್ ಕವಾಟವನ್ನು ಸ್ನಾಯುಗಳಿಗೆ ಜೋಡಿಸುವ ಸಣ್ಣ ನಾರಿನಂತಿರುವ ದಾರಗಳ ತುಂಡಾಗುವಿಕೆ ಆಗಿ ಮೈಟ್ರಲ್ ಹೃದಯದ ಕವಾಟಗಳು ಸರಿಯಾಗಿ ಮುಚ್ಚದಿದ್ದಾಗ ರಕ್ತವು ಹಿಮ್ಮುಖವಾಗಿ ಚಲಿಸಿ ತೀವ್ರ ಶ್ವಾಸಕೋಶದ ರಕ್ತದೊತ್ತಡ ಮತ್ತು ಉಸಿರಾಟದ ತೊಂದರೆ, ಆಯಾಸದಿಂದ ಬಳಲುತ್ತಿದ್ದು ತುರ್ತು ಶಸ್ತ್ರ ಚಿಕಿತ್ಸೆಯು ಅಗತ್ಯವಾಗಿತ್ತು.
ವಯಸ್ಸಿನ ಹಿನ್ನೆಲೆಯಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಇರುವ ಹೆಚ್ಚಿನ ಅಪಾಯಗಳನ್ನು ಪರಿಗಣಿಸಿ ಶಸ್ತ್ರಚಿಕಿತ್ಸಾ ತಂಡವು ಕೀಹೋಲ್ (ಸಣ್ಣ ರಂಧ್ರ) ವಿಧಾನವನ್ನು ಆಯ್ಕೆ ಮಾಡಿತು. ಇದರಿಂದ ಶಸ್ತ್ರಚಿಕಿತ್ಸಾ ಗಾಯವು ಗಮನಾರ್ಹವಾಗಿ ಕಡಿಮೆಯಾಯಿತು.

ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ.ಕೆ.ಶಕ್ತಿವೇಲು ಅವರ ನೇತೃತ್ವದಲ್ಲಿ ಸಹ ಶಸ್ತ್ರಚಿಕಿತ್ಸಕ ಡಾ.ಅರ್ಜುನ್ ಹಾಗೂ ಹೃದಯ ಅರವಳಿಕೆ ತಜ್ಞರ ತಂಡದ ಡಾ.ಕೃಷ್ಣಪ್ರಸಾದ್, ಡಾ.ಮೋಹನ್ ದಾಸ್, ಡಾ.ವಿನಾಯಕ್ ಇವರ ನೆರವಿನಿಂದ ನಡೆಸಲಾಯಿತು. ಫರ್ಪ್ಯೂಷನಿಸ್ಟ್ ತಂಡವನ್ನು ಅನ್ಸು ಸನ್ನಿ ನೇತೃತ್ವ ವಹಿಸಿದ್ದರು. ಶಸ್ತ್ರಚಿಕಿತ್ಸೆಯನ್ನು ಎದೆಯ ಮೂಳೆಯನ್ನು ಕತ್ತರಿಸುವ ಅಗತ್ಯವಿಲ್ಲದೆ ಸಣ್ಣ ರಂಧ್ರದ ಮೂಲಕ ನಡೆಸಲಾಗಿದ್ದು, ಇದು ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಮಹತ್ತರ ಪ್ರಗತಿಯನ್ನು ಸೂಚಿಸುತ್ತದೆ.
ಎದೆಯ ಮೂಳೆ ಕತ್ತರಿಸದೇ ಈ ಹೃದಯ ಶಸ್ತ್ರಚಿಕಿತ್ಸೆ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ವಿಶೇಷವಾಗಿ ನೋವು ಕಡಿಮೆ ಉತ್ತಮ ಶ್ವಾಸಕೋಶ ಮತ್ತು ಹೃದಯದ ಕಾರ್ಯಕ್ಷಮತೆ, ಶೀಘ್ರಚೇತರಿಕೆ ಮತ್ತು ಸಾಮಾನ್ಯ ಜೀವನಕ್ಕೆ ಬೇಗ ಮರಳುವುದು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ರೋಗಿ ಈಗ ಸ್ಥಿರ ಹೃದಯ ಕಾರ್ಯಕ್ಷಮತೆಯೊಂದಿಗೆ ಚೆನ್ನಾಗಿ ಚೇತರಿಸಿಕೊಂಡಿದ್ದಾರೆ.
ವೈದ್ಯಕೀಯ ಅಧೀಕ್ಷಕ ಡಾ.ಹಬೀಬ್ ರೆಹಮಾನ್.ಎ.ಎ ಅವರು ರೋಗಿಯ ಚೇತರಿಕೆ ಅತ್ಯಂತ ವೇಗವಾಗಿತ್ತು ಮತ್ತು ಸಾಮಾನ್ಯ ಶಸ್ತ್ರಚಿಕಿತ್ಸೆಯಲ್ಲಿ ಎದೆಮೂಳೆ ಸೇರಿಕೊಳ್ಳಲು ವಾರಗಳ ಕಾಲ ಬೇಕಾಗುತ್ತದೆ. ಆದರೆ ಈ ರೋಗಿ ಶಸ್ತ್ರಚಿಕಿತ್ಸೆಯ ಮೊದಲ ದಿನವೇ ನಡೆಯಲು ಸಾಧ್ಯವಾಯಿತು ಮತ್ತು ಕೇವಲ ಐದು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದರಲ್ಲದೆ ದಕ್ಷಿಣ ಕನ್ನಡಕ್ಕೆ ವಿಶ್ವಮಟ್ಟದ ವೈದ್ಯಕೀಯ ತಂತ್ರಜ್ಞಾನವನ್ನು ತರುವುದೇ ಯೆನೆಪೋಯದ ಧ್ಯೇಯ ಎಂದು ಹೇಳಿದರು.

