ಮಂಗಳೂರು: ದಸರಾ ಹುಲಿ ವೇಷ ಎಂದರೆ ಕಲೆ, ಸಂಭ್ರಮ, ಸಂಪ್ರದಾಯ. ಆದರೆ ಈ ಬಾರಿ ಕದ್ರಿಯಲ್ಲಿ ಆ ಸಂಪ್ರದಾಯಕ್ಕೆ ಕರುಣೆ ಮತ್ತು ಅಕ್ಕರೆ ಬೆರೆತಿದೆ ಎಂದರೆ ತಪ್ಪಾಗಲಾರದು. ಮೂರುವರೆ ವರ್ಷದ ಪುಟ್ಟ ಬಾಲಕ ಹುಲಿ ವೇಷ ತೊಟ್ಟು ಬಂದ ನೋಟಿನ ಹಾರವನ್ನು ಸಮಾಜ ಸೇವೆಗೆ ಸಮರ್ಪಿಸಲು ಮುಂದಾಗಿದ್ದು, ಎಲ್ಲರ ಹೃದಯ ಗೆದ್ದಿದ್ದಾನೆ.

ದಸರಾ ಬಂದರೆ ಎಲ್ಲೆಡೆ ಸಂಭ್ರಮ. ಮಂಗಳೂರಿನಲ್ಲಿ ವಿಶೇಷವಾಗಿ ಹುಲಿ ವೇಷದ ಕುಣಿತಕ್ಕೆ ಭಾರೀ ಕಾವು. ಈ ಬಾರಿ ಕದ್ರಿಯಲ್ಲಿ ಅದಕ್ಕೆ ಹೊಸ ಅರ್ಥ ಸಿಕ್ಕಿದೆ. ಕದ್ರಿ ನಿವಾಸಿ ಗೌರವ್ ಜೆ ಕದ್ರಿ – ಅಕಿಲ ಗೌರವ್ ದಂಪತಿಗಳ ಪುತ್ರ ಆರವ್ ಜಿ‌ ಕದ್ರಿ, ತನ್ನ ಮೊದಲ ಹುಲಿ ವೇಷ ಸೇವೆಯಲ್ಲಿ ಬಂದ ನೋಟಿನ ಹಾರವನ್ನು ತಮಗಾಗಿ ಉಪಯೋಗಿಸದೆ, ಸಮಾಜದ ಅಸಕ್ತ ಕುಟುಂಬಗಳಿಗೆ ನೆರವಾಗಲು ತೀರ್ಮಾನಿಸಿದ್ದಾನೆ. ಇದರಿಂದ ಕದ್ರಿ ನಿವಾಸಿಗಳ ಮನ ಗೆದ್ದ ಪುಟ್ಟ ಬಾಲಕ ಸಮಾಜಮುಖಿ ಸಂದೇಶವನ್ನೇ ನೀಡಿದ್ದಾನೆ.

ಕಳೆದ ಹಲವು ವರ್ಷಗಳಿಂದ ಕದ್ರಿ ಕ್ರಿಕೆಟರ್ಸ್ ಕ್ಲಬ್ ರಿ ಮತ್ತು ಆಸರೆ ಫ್ರೆಂಡ್ಸ್ ಕದ್ರಿ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿವೆ. ಕಳೆದ ಎರಡು ವರ್ಷ ದಸರಾ ಸಂಧರ್ಭ ಆಸರೆ ಫ್ರೆಂಡ್ಸ್ ಕದ್ರಿ ಅಧ್ಯಕ್ಷ ದಿನೇಶ್ ಕದ್ರಿ, ಕುದ್ರೋಳಿ ಯುವ ಸಂಗಮ್ ಹುಲಿ ತಂಡದೊಂದಿಗೆ ವೇಷಧರಿಸಿ ಬಂದ ೨.೫೦ ಲಕ್ಷ ರೂಪಾಯಿಯನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದರು.

ಆದರೆ ಈ ಬಾರಿ ವೈಯಕ್ತಿಕ ಕಾರಣದಿಂದ ದಿನೇಶ್ ಕದ್ರಿ ಹುಲಿ ವೇಷ ತೊಡಲಾಗಿಲ್ಲ, ಆದ್ರೆ ಕದ್ರಿ ಕ್ರಿಕೆಟರ್ಸ್ ಕ್ಲಬ್ ಅಧ್ಯಕ್ಷ ಗೌರವ್ ಜೆ ಕದ್ರಿ, ತಮ್ಮ ಮಗ ಆರವ್ ಮೂಲಕವೇ ಈ ಸೇವಾ ಕಾರ್ಯವನ್ನು ಮುಂದುವರಿಸಲು ನಿರ್ಧರಿಸಿದರು.ಅದ್ರಂತೆ ಈ ಬಾರಿ ಆರವ್ ಜಿ ಕದ್ರಿ, ಕುದ್ರೋಳಿ ಯುವ ಸಂಗಮ್ ತಂಡದೊಂದಿಗೆ ಹುಲಿ ವೇಷ ತೊಟ್ಟು, ಬಂದ ನೋಟಿನ ಹಾರವನ್ನು ಸಮಾಜ ಸೇವೆಗೆ ನೀಡಲು ಮುಂದಾಗಿದ್ದೇವೆ ಎನ್ನುತ್ತಾರೆ ಕದ್ರಿ ಕ್ರಿಕೆಟರ್ಸ್ ಕ್ಲಬ್ ರಿ ಅಧ್ಯಕ್ಷ ಗೌರವ್ ಜೆ ಕದ್ರಿ.

ಒಟ್ಟಿನಲ್ಲಿ ಹುಲಿ ವೇಷ ಎಂದರೆ ಕೇವಲ ಕುಣಿತ – ಕೇವಲ ಸಂಭ್ರಮ ಅಲ್ಲ, ಅದು ಸಮಾಜಮುಖಿ ಕಾರ್ಯಕ್ಕೂ ಒಂದು ಮಾರ್ಗವಾಗಬಹುದು ಎಂಬುದನ್ನು ಮೂರುವರೆ ವರ್ಷದ ಪುಟ್ಟ ಆರವ್ ತೋರಿಸಿಕೊಟ್ಟಿದ್ದಾರೆ. ಆರವ್ ಅವರ ಈ ಸೇವೆ ಸಮಾಜ ಮಾದರಿಯಾಗಲಿ ಎಂಬುದು ನಮ್ಮ ಹಾರೈಕೆ.