ಮಂಗಳೂರು: ಮಂಜನಾಡಿ ಗ್ರಾಮದ ಮೊಂಟೆಪದವು ಕೋಡಿಯಲ್ಲಿ ಗುಡ್ಡ ಜರಿದ ಪರಿಣಾಮ ಮಣ್ಣಿನಡಿ ಸಿಲುಕಿದ್ದ ಕಾಂತಪ್ಪ ಪೂಜಾರಿ ಅವರ ಪತ್ನಿ ಪ್ರೇಮ ಮೃತಪಟ್ಟಿದ್ದಾರೆ.
ಕಾಂತಪ್ಪ ಪೂಜಾರಿ ಅವರ ಕುಟುಂಬ ಮಲಗಿದ್ದ ಕೊರಡಿಯ ಭಾಗಕ್ಕೆ ಗುಡ್ಡ ಜರಿದು ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಕಾಂತಪ್ಪ ಪೂಜಾರಿ ಕಾಲು ಮುರಿದಿದ್ದು ಗಂಭೀರ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಡೆದ ವೇಳೆ ಮನೆ ಯಜಮಾನ ಕಾಂತಪ್ಪ ಪೂಜಾರಿ ಅವರ ಪತ್ನಿ ಪ್ರೇಮ, ಪುತ್ರ ಸೀತಾರಾಮ ಮತ್ತು ಅವರ ಪತ್ನಿ ಅಶ್ವಿನಿ ಮಕ್ಕಳಾದ ಅರುಣ್, ಆರ್ಯನ್ ಮಲಗಿದ್ದರು. ಸೀತಾರಾಮ ಅವರು ಮನೆಯಿಂದ ಹೊರಬರಲು ಯಶಸ್ವಿಯಾಗಿದ್ದಾರೆ.
ಪ್ರೇಮ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಅವರ ಮೃತದೇಹವೂ ಮಣ್ಣಿನಡಿಯಲ್ಲೇ ಇದೆ. ಕಾಂತಪ್ಪ ಪೂಜಾರಿ ಅವರನ್ನು ರಕ್ಷಿಸಲಾಗಿದ್ದು, ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

