ಮಂಗಳೂರು : ದೈವದ ಭಂಡಾರ ಮೆರವಣಿಗೆ ವೇಳೆ ಕಾಲು ಸಂಕ ಮುರಿದು ಬಿದ್ದು ಅವಘಡ ದ.ಕ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಪುಚ್ಚೆಮೊಗರು ಬಾವದಬೈಲು ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ದೈವದ ಭಂಡಾರವನ್ನು ತಾಕೋಡೆ ಬರ್ಕೆ ಧರ್ಮನೇಮಕ್ಕೆ ಕೊಂಡೊಯ್ಯುತ್ತಿದ್ದರು. ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ಸಾಗುತ್ತಿದ್ದಾಗ ಘಟನೆ ನಡೆದಿದ್ದು, ಕಾಲು ಸಂಕ (ಸಣ್ಣ ಸೇತುವೆ) ಏಕಾಏಕಿ ಮುರಿದು ಪಲ್ಲಕ್ಕಿ ಉರುಳಿ ಬಿದ್ದ ಪರಿಣಾಮ ದುರ್ಘಟನೆ ಸಂಭವಿಸಿದೆ.
ಕೊಂಬು ಮತ್ತು ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆ ನಡೆಯುತ್ತಿತ್ತು. ಅವಘಡದಲ್ಲಿ ಸುನಿಲ್ ಶೆಟ್ಟಿ ಮುಕಾಲ್ದಿ (ಮಾರೂರು), ಲೋಕೇಶ್ ಭಂಡಾರಿ ಸೇರಿದಂತೆ ಪಲ್ಲಕ್ಕಿ ಹೊತ್ತವರನ್ನೂ ಒಳಗೊಂಡು ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ.
ಸಂಕ ಮುರಿದು ಬೀಮ್ ಪಲ್ಲಕ್ಕಿ ಹೊತ್ತವರ ಮೇಲೆ ಬಿದ್ದ ಪರಿಣಾಮ ಗಾಯವಾಗಿದೆ. ಪಲ್ಲಕ್ಕಿಯಲ್ಲಿದ್ದ ಮೊಗಮೂರ್ತಿ ಹಾಗೂ ಇತರ ಧಾರ್ಮಿಕ ಪರಿಕರಗಳಿಗೆ ಹಾನಿಯಾಗಿದೆ.

