ಮಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ಮೃತದೇಹ ಪತ್ತೆಯಾಗಿರುವ ಘಟನೆ ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ನಡೆದಿದೆ. ಯುವಕನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಗುರುವಾಯನಕೆರೆ ಖಾಸಗಿ ವಿದ್ಯುತ್ ಸಬ್ ಸ್ಟೇಷನ್ ಜಾಗದಲ್ಲಿ ಮೃತದೇಹ ಪತ್ತೆಯಾಗಿದೆ.
ತಾಲೂಕಿನ ಕುವೆಟ್ಟು ಗ್ರಾಮದ ಶಕ್ತಿನಗರ ಸಮೀಪವಿರುವ ಯನೋಪೊಯೋ ವಿದ್ಯುತ್ ಸಬ್ ಸ್ಟೇಷನ್ ಜಾಗದಲ್ಲಿ ಮೃತದೇಹ ಪತ್ತೆಯಾಗಿದ್ದು, ತಣ್ಣೀರುಪಂತ ಗ್ರಾಮದ ಕಲ್ಲೇರಿ ಜನತಾ ಕಾಲೋನಿ ನಿವಾಸಿ ಶರೀಫ್ ಕೆ ಎಂಬವರ ಪುತ್ರ ಮುಸ್ತಾಕ್ (27) ಮೃತ ಯುವಕ ಎಂಬ ಮಾಹಿತಿ ತಿಳಿದು ಬಂದಿದೆ.
ಲಾರಿ ಚಾಲಕ ವೃತ್ತಿಯಲ್ಲಿದ್ದ ಮುಸ್ತಾಕ್ ಕೆಲಸ ಮಾಡುತ್ತಿದ್ದರು. ಮಗನನ್ನು ಕೊಲೆ ಮಾಡಲಾಗಿದೆ ಎಂದು ಮೃತ ಮುಸ್ತಾಕ್ ತಂದೆ ಶರೀಫ್ ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಕೂಲಂಕುಶ ತನಿಖೆ ಮಾಡಬೇಕೆಂದು ಆಗ್ರಹಿಸಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆಯನ್ನು ಬೆಳ್ತಂಗಡಿ ಠಾಣೆಯ ಪೊಲೀಸರು ಆರಂಭಿಸಿದ್ದಾರೆ.

