ಮಂಡ್ಯ: ಪತ್ನಿ, ಮಗನನ್ನು ಉಸಿರುಗಟ್ಟಿಸಿ ಕೊಂದು ಗಂಡನು ನೇಣಿಗೆ ಶರಣಾದ ಘಟನೆ ಇಲ್ಲಿನ ನೆಹರು ನಗರದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ. ಒಂದೇ ಕುಟುಂಬದ ಮೂವರು ಸಾವು ಪ್ರಕರಣ ಆತಂಕಕ್ಕೆ ಕಾರಣವಾಗಿದೆ.

ತಂದೆ ಪ್ರಭಾಕರ್ (65), ಪತ್ನಿ ಜ್ಯೋತಿ (55), ಮಗ ಸಂತೋಷ್ (30) ಮೃತರು. ರಾತ್ರಿ 3:30ರ ಸಮಯದಲ್ಲಿ ಪತ್ನಿ, ಮಗನನ್ನು ಕೊಲೆಗೈದ ಪ್ರಭಾಕರ್‌ ಬಳಿಕ ತನ್ನ ಬಟ್ಟೆ ಅಂಗಡಿಗೆ ತೆರಳಿ ನೇಣಿಗೆ ಶರಣಾಗಿದ್ದಾರೆ.

ಪ್ರಭಾಕರ್ ಪತ್ನಿ ಜ್ಯೋತಿಯನ್ನು ವೇಲ್‌ನಿಂದ ಉಸಿರುಗಟ್ಟಿಸಿದ ಸಾಯಿಸಿದ್ದರು. ಈ ವೇಳೆ ಬಂದ ಮಗ ಸಂತೋಷನನ್ನೂ ಕೂಡಾ ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಸಂತೋಷ್‌ ಅವರು ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು.

ಆದರೆ ಸ್ವಂತ ಮಾವನಿಂದಲೇ ಗಂಡ ಮತ್ತು ಅತ್ತೆಯ ಕೊಲೆಯಾದರೂ ಸೊಸೆಗೆ ಮಾತ್ರ ವಿಚಾರ ಗೊತ್ತಾಗಲೇ ಇಲ್ಲ. ಬೆಳಗಿನ ಜಾವ 3:30ರಲ್ಲಿ ಘಟನೆ ನಡೆದಿದ್ದರಿಂದ ಅವರು ಗಾಢವಾದ ನಿದ್ರೆಯಲ್ಲಿದ್ದರು. ಬೆಳಿಗ್ಗೆ ತಿಂಡಿ ಸಿದ್ದ ಮಾಡಿ, ಅತ್ತೆಯನ್ನು ಎಬ್ಬಿಸಲು ಕೋಣೆಗೆ ತೆರಳಿದ ವೇಳೆ ಘಟನೆ ಬೆಳಕಿಗೆ ಬಂದಿದೆ.

ಸ್ಥಳದಲ್ಲಿ ಡೆತ್‌ ನೋಟ್‌ ಸಿಕ್ಕಿದ್ದು, ಸಾಲದ ಒತ್ತಡಕ್ಕೆ ಸಿಲುಕಿ ಪತ್ನಿ, ಮಗನನ್ನು ಸಾಯಿಸಿರುವುದಾಗಿ ಪ್ರಭಾಕರ್ ಬರೆದುಕೊಂಡಿದ್ದಾರೆ. ಕುಟುಂಬ ಬಟ್ಟೆ ವ್ಯಾಪಾರ ಮಾಡಿ ಬದುಕು ಸಾಗಿಸುತ್ತಿತ್ತು. ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಮನನೊಂದಿದ್ದ ಪ್ರಭಾಕರ್, ಸರ್ಕಾರ ಫ್ರೀ ಬಸ್ ಸೌಲಭ್ಯ ನೀಡಿರುವುದರಿಂದ ವ್ಯಾಪಾರ ಕಮ್ಮಿಯಾಗಿತ್ತೆಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.