ಮಂಡ್ಯ: ರೈತನೊಬ್ಬ ಕಷ್ಟಪಟ್ಟು ಬೆಳೆದ ಟೊಮ್ಯಾಟೋ ಬೆಳೆಗೆ ಕಿಡಿಗೇಡಿಗಳು ಕಳೆನಾಶಕ ರಾಸಾಯನಿಕ ದ್ರಾವಣವನ್ನು ಸಿಂಪಡಿಸಿ 1ಎಕರೆ ಭೂ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಯನ್ನು ನಾಶಪಡಿಸಿರುವ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಮೊಸಳೇಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕಿನ ಕಸಬಾ ಹೋಬಳಿಯ ಮೊಸಳೇಕೊಪ್ಪಲು ಗ್ರಾಮದ ಶಿವಣ್ಣ ಅವರ ಮಗ ಸಂತೋಷ ಎಂಬ ರೈತ ಬೆಳೆದಿದ್ದ ಟೊಮ್ಯಾಟೊ ಬೆಳೆ ನಾಶವಾಗಿದ್ದು ಸುಮಾರು 4ಲಕ್ಷ ರೂ ನಷ್ಟವಾಗಿದೆ. ಸಂತೋಷ್ ಮತ್ತು ಅವರ ಕುಟುಂಬದವರು ಲಕ್ಷಾಂತರ ರೂ ಖರ್ಚು ಮಾಡಿ ಕಷ್ಟಪಟ್ಟು ಟೊಮ್ಯಾಟೋ ಬೆಳೆಯನ್ನು ಬೆಳೆದಿದ್ದರು.

ಬೆಳೆಯು ಸಮೃದ್ಧಿಯಾಗಿ ಬೆಳೆದಿತ್ತು. ಇನ್ನು ಕೆಲವೇ ದಿನಗಳಲ್ಲಿ ಬೆಳೆಯನ್ನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಬೇಕಾಗಿತ್ತು. ಆದರೆ ಕಿಡಿಗೇಡಿಗಳು ರಾತ್ರಿ ವೇಳೆ ಟೊಮ್ಯಾಟೋ ಬೆಳೆಗೆ ಕಳೆನಾಶಕ ರಾಸಾಯನಿಕ ದ್ರಾವಣವನ್ನು ಸಿಂಪಡಿಸಿದ್ದು ಬೆಳೆಯು ಸಂಪೂರ್ಣ ಸುಟ್ಟು ಹೋಗಿರುತ್ತದೆ. ಇದರಿಂದ ಕಷ್ಟಪಟ್ಟು ಬೆಳೆದ ಕೈಗೆ ಬಂದ ತುತ್ತು ಬಾಯಿಗೆ ಸಿಗದಂತಾಗಿದೆ.

ಘಟನಾ ಸ್ಥಳಕ್ಕೆ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್‌ಕುಮಾರ್, ತೋಟಗಾರಿಕಾ ಸಹಾಯಕ ನಿರ್ದೇಶಕ ಡಾ.ಲೋಕೇಶ್, ಬೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತು ರೈತ ಸಂತೋಷ್ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಗೂ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳಿಗೆ ದೂರು ನೀಡಿದ್ದಾರೆ.