ಮಂಡ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾನು ಮಾಡಿರುವ ತಪ್ಪಿನ ಅರಿವಾಗಿಲ್ಲ. ಸರ್ಕಾರಿ ಭೂಮಿ ಲಪಟಾಯಿಸಿ ಈಗ ಟಾರ್ಚ್ ಬಿಟ್ಕೊಂಡು ನೋಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ದಿಶಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮೂಡಾ ಜಾಗ ಯಾರದ್ದು?. ಅವರ ಪತ್ನಿದಾ ಅಥವಾ ಬಾಮೈದನದ್ದ. ಮೊದಲು ಜಾಗ ಯಾರದ್ದು ಎಂದು ಹೇಳಲಿ. ಸುಳ್ಳು ದಾಖಲೆ ಸೃಷ್ಟಿ ಮಾಡಿ ಸರ್ಕಾರಿ ಜಾಗ ಲಪಟಾಯಿಸಿದ್ದಾರೆ ಎಂದು ದೂರಿದರು. ಮುಖ್ಯಮಂತ್ರಿಗಳು ಸರ್ಕಾರಿ ಜಾಗವನ್ನು ನನ್ನ ಜಾಗ ಅಂತ ಹೇಳಿ ಪಡೆದು 62 ಕೋಟಿ ರು.ಲೂಟಿ ಮಾಡಿದ್ದಾರೆ. ಸೈಟ್ ತಗೋಂಡು ಈಗ ಬ್ಯಾಟರಿ ಬಿಟ್ಕೊಂಡು ನೋಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಅವರಿಗೆ ಬೇಕಿತ್ತಾ ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಮುಖ್ಯಮಂತ್ರಿಗಳಿಗೆ ಇಲ್ಲ. ನಾನು ಎಂದಿಗೂ ದ್ವೇಷ ರಾಜಕಾರಣ ಮಾಡಿಲ್ಲ. ಆದರೆ, ಅವರು ಮಾಡಿದ್ದಾರೆ. ನನ್ನ ವಿರುದ್ಧ ಅದೇನು ಮಾಡುತ್ತಾರೋ ಮಾಡಲಿ ಅದಕ್ಕೆ ನಾನು ಸಿದ್ಧವಾಗಿದ್ದೀನಿ ಎಂದು ತಿರುಗೇಟು ನೀಡಿದರು. ನಾನು ಜೈಲಿಗೆ ಹೋಗುವಂಥದ್ದು ಏನೂ ಮಾಡಿಲ್ಲ. ನೂರು ಜನ್ಮ ಎತ್ತಿ ಬಂದರೂ ನನ್ನನ್ನು ಏನು ಮಾಡಲು ಆಗಲ್ಲ. ನನ್ನ ವಿರುದ್ಧದ ಷಡ್ಯಂತರಕ್ಕೆ ಭಗವಂತ ತೀರ್ಪು ಕೊಡುತ್ತಾನೆ. ನನ್ನ ವಿರುದ್ಧ ದಾಖಲೆಗಳನ್ನು ಕಾರಲ್ಲೆ ಇಟ್ಟುಕೊಂಡಿದ್ದಾರೆ. ಏನೇ ದಾಖಲೆ ಇದ್ದರೆ ಧಾರಾಳವಾಗಿ ಜನಗಳ ಮುಂದೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.