ಮಂಡ್ಯ: ಶಾಸಕ ಹೆಚ್.ಟಿ.ಮಂಜು ಜಾನಪದ ಜಾತ್ರೆಯನ್ನು ಎತ್ತಿನ ಗಾಡಿಯನ್ನು ಚಾಲನೆ ಮಾಡಿ ನಡೆಸುವ ಮೂಲಕ ಉದ್ಘಾಟನೆ ಮಾಡಿ ವಿದ್ಯಾರ್ಥಿನಿಯರೊಂದಿಗೆ ಕುಣಿದು ಕುಪ್ಪಳಿಸಿ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.
ನಮ್ಮ ಪೂರ್ವಜರು ಬೇಸಾಯ ಮಾಡುವಾಗ ಮಾಡುತ್ತಿದ್ದ ನೃತ್ಯಗಳು, ಜಾನಪದ ಹಾಡುಗಳು ಇಂದಿಗೂ ಜನಪದರ ಬಾಯಿಂದ ಬಾಯಿಗೆ ಹರಿದಾಡುತ್ತಿವೆ. ಸುಗ್ಗಿಯ ಸಂಭ್ರಮದಲ್ಲಿ ಹಾಡುವ ಹಾಡುಗಳು ಇಂದಿಗೂ ನಮ್ಮ ಬದುಕಿನ ಜೀವ ಸೆಲೆಯಾಗಿವೆ. ಮೌಢ್ಯವಿಲ್ಲದ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಲು, ಪಾಶ್ಚಾತ್ಯ ಸಂಸ್ಕೃತಿಗೆ ಆಕರ್ಷಿತವಾಗುತ್ತಿರುವ ಇಂದಿನ ದಿನಮಾನದಲ್ಲಿ ಮರಳಿ ಜಾನಪದ ಸಂಸ್ಕೃತಿಗೆ ಕರೆತರಲು ಇಂತಹ ಗ್ರಾಮೀಣ ಸೊಗಡಿನ ಕಾರ್ಯಕ್ರಮಗಳು ಸಹಾಯವಾಗಲಿವೆ ಎಂದು ಶಾಸಕ ಮಂಜು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಸುಮಾರಾಣಿ ಮಾತನಾಡಿ ಹೆಣ್ಣು ಮಕ್ಕಳು ರಾಷ್ಟ್ರದ ಶಕ್ತಿಯಾಗಿದ್ದಾರೆ. ಜಾನಪದದ ಮೂಲ ಬೇರೆ ಹೆಣ್ಣಾ ಗಿರುವುದರಿಂದ ಹೆಣ್ಣಿಗೂ ಜಾನಪದಕ್ಕೂ ಅವಿನಾಭಾವ ಸಂಬಂಧವಿದೆ. ಹೆಣ್ಣು ಮಕ್ಕಳು ಆಯಾ ಸಂದರ್ಭಕ್ಕೆ ಅನುಗುಣವಾಗಿ ಹಾಡುವ ಹಾಡುಗಳು ಹಾಗೂ ನೃತ್ಯಗಳು ಜಾನಪದ ಕ್ಷೇತ್ರದ ಶಕ್ತಿಯನ್ನು ಇಮ್ಮಡಿಗೊಳಿಸಿವೆ ಎಂದು ಹೇಳಿದರು.
ಮಹಿಳಾ ಸರ್ಕಾರಿ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕೆ.ಬಿ.ಪ್ರತಿಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಲೇಜಿನಲ್ಲಿ ಇಂದು ವಿಶೇಷವಾಗಿ ಜಾನಪದ ಜಾತ್ರೆ ಹಾಗೂ ಗ್ರಾಮೀಣ ಸೊಗಡಿನ ಆಹಾರ ಮೇಳವನ್ನು ಆಯೋಜಿಸಲಾಗಿದೆ. ನಮ್ಮ ಸಂಸ್ಕೃತಿಯ ಪ್ರತಿಬಿಂಬವಾದ ಜಾನಪದಕ್ಕೆ ಶಕ್ತಿ ತುಂಬುವ ರೀತಿಯಲ್ಲಿ ಇಂದು ವಿದ್ಯಾರ್ಥಿನಿಯರು ರೇಷ್ಮೆ ಸೀರೆಯನ್ನು ಉಟ್ಟುಕೊಂಡು ಮದುಮಗಳ ರೀತಿಯಲ್ಲಿ ಅಲಂಕಾರ ಮಾಡಿಕೊಂಡು ಬಂದಿದ್ದಾರೆ.
ದನಕರುಗಳು ಹಾಗೂ ಪ್ರಕೃತಿಯೇ ಜನಪದರ ಜೀವಾಳವಾಗಿದೆ. ಮೋಸ, ವಂಚನೆಯ ಬಗ್ಗೆ ತಿಳಿಯದ, ಪ್ರಕೃತಿಯನ್ನೇ ದೇವರೆಂದು ಆರಾಧಿಸುವ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಯುವ ಸಮುದಾಯವನ್ನು ಜಾಗೃತಿಗೊಳಿಸಿ ಮುನ್ನಡೆಸಲು ಇಂತಹ ಕಾರ್ಯಕ್ರಮಗಳು ವರದಾನವಾಗಿವೆ ಎಂದು ಪ್ರತಿಮಾ ಹೇಳಿದರು.
ಪುರಸಭೆ ಸದಸ್ಯ ಗಿರೀಶ್, ಶಾಮಿಯಾನ ತಿಮ್ಮೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಹರಳಹಳ್ಳಿ ಗ್ರಾಮ ಪಂಚಾಯಿತಿ ಮಾಜಿಅಧ್ಯಕ್ಷ ಹರೀಶ್, ಹೊಸಹೊಳಲು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿಅಧ್ಯಕ್ಷ ಕಾಂತರಾಜು, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಹಿರಿಯ ಪತ್ರಾಂಕಿತ ವ್ಯವಸ್ಥಾಪಕ ಬಳ್ಳೇಕೆರೆ ಮಂಜುನಾಥ್ ಸೇರಿದಂತೆ ಕಾಲೇಜಿನ ಅಧ್ಯಾಪಕ ವರ್ಗ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಚೇತನ್‌ಕುಮಾರ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

