ಮಂಡ್ಯ: ಇದೀಗ ಚಿರತೆ ಕಾಟ ಶುರುವಾಗಿದ್ದು, ರೈತರು ಇದರಿಂದ ಭಯಭೀತಗಿದ್ದಾರೆ. ಅದರಲ್ಲೂ ಮಂಡ್ಯದಲ್ಲಿ ಒಂದೆಡೆ ಭತ್ತ ಮತ್ತೊಂದೆಡೆ ಕಬ್ಬು ಕಟಾವಿಗೆ ಬಂದಿದ್ದು, ಈ ಬೆಳೆಗಳ ನಡುವೆ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ರೈತರು ಕೆಲಸಕ್ಕೆ ಜಮೀನಿನತ್ತ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಬಹಳಷ್ಟು ಸಲ ಕಬ್ಬಿನ ಗದ್ದೆಯಲ್ಲಿ ಕಟಾವು ಮಾಡುವಾಗ ಚಿರತೆ ಕಾಣಿಸಿದ್ದಲ್ಲದೆ, ಮರಿಗಳು ಸಿಕ್ಕಿದ ನಿದರ್ಶನಗಳಿವೆ. ಹೀಗಾಗಿ ರೈತರು ಚಿರತೆ ಹೆಜ್ಜೆ ಹುಡುಕುತ್ತಿದ್ದು ಆ ನಂತರ ಜಮೀನಿಗೆ ತೆರಳುವಂತಾಗಿದೆ.
ಇದೀಗ ಮಂಡ್ಯ ತಾಲೂಕಿನ ಗಾಣದಾಳು ಚಂದಗಾಲು ರಸ್ತೆ ಮಧ್ಯ ಭಾಗದಲ್ಲಿ (ಮುಂಡ ಬಸವೇಶ್ವರ ದೇವಸ್ಥಾನದ ಪಕ್ಕ ಹಾಗೂ ಕೋಳಿ ಫಾರಂ ಹತ್ತಿರ) ರಸ್ತೆಯಲ್ಲಿ ಚಿರತೆಯೊಂದು ಮತ್ತೆ ಪ್ರತ್ಯಕ್ಷವಾಗಿದೆ. ಚಂದಗಾಲು ಗ್ರಾಮದಿಂದ ಗಾಣದಾಳು ಗ್ರಾಮಕ್ಕೆ ರಸ್ತೆಯಲ್ಲಿ ಮಧ್ಯರಾತ್ರಿ ಕಾರಿನಲ್ಲಿ ಹೋಗುತ್ತಿದ್ದಾಗ ಚಿರತೆಯನ್ನು ನೋಡಿದ್ದು, ಈ ವಿಚಾರ ಗ್ರಾಮದಲ್ಲಿ ಸುದ್ದಿಯಾಗಿದ್ದು, ಎಲ್ಲರೂ ಜಮೀನಿನಲ್ಲಿ ಹುಡುಕಾಡಿದಾಗ ಹಜ್ಜೆ ಕಾಣಿಸಿದೆ ಹೀಗಾಗಿ ರೈತರು ಭಯಪಡುತ್ತಿದ್ದಾರೆ.
ಚಿರತೆಯನ್ನು ಪ್ರತ್ಯಕ್ಷವಾಗಿ ನೋಡಿದ ಕೋಳಿ ಫಾರಂ ಮಾಲೀಕ ಮಲ್ಲೇಶ್ ಈ ಕುರಿತಂತೆ ಮಾಹಿತಿ ನೀಡಿದ್ದು. ಇತ್ತೀಚೆಗೆ 15 ದಿನಗಳ ಹಿಂದೆ ಚಿರತೆ ಕಾಣಿಸಿಕೊಂಡಾಗ, ಅರಣ್ಯ ಅಧಿಕಾರಿಯವರಿಗೆ ವಿಷಯ ತಿಳಿಸಿದಾಗ ಅವರು ಬಂದು ಕಬ್ಬಿನ ಗದ್ದೆ ಹತ್ತಿರ ಬೋನನ್ನು ಇಟ್ಟಿದ್ದರು . ಆದರೆ ಒಂದು ನಾಯಿ ಹಾಗೂ ಒಂದು ಬೆಕ್ಕನ್ನು ತಿಂದು ಅಲ್ಲಿಂದ ಪರಾರಿಯಾಗಿದೆ. ಆದರೆ ಬೋನಿಗೆ ಮಾತ್ರ ಚಿರತೆ ಬೀಳಲಿಲ್ಲ. ಈ ನಡುವೆ ನಮ್ಮ ಲ್ಯಾಬ್ರೊ ನಾಯಿಯನ್ನು (20ಸಾವಿರ ಬೆಲೆ ಬಾಳುವ) ಹಾಗೂ ಕಬ್ಬು ಕಡಿಯುವ ಕಾರ್ಮಿಕರ ಮೇಕೆಯನ್ನು ತಿಂದು ಹೋಗಿದೆ. ಆದರೆ ಇನ್ನೂ ಸಹ ಚಿರತೆಯು ಬೋನಿಗೆ ಬಿದ್ದಿಲ್ಲ. ಚಿರತೆಯು ಈ ಪ್ರದೇಶವನ್ನು ಬಿಟ್ಟು ಬೇರೆಯಲ್ಲೂ ಹೋಗಿಲ್ಲ ಆದರೆ ಬೋನಿಗೆ ಬೀಳದೆ ತಪ್ಪಿಸಿಕೊಳ್ಳುತ್ತಿದೆ ಎಂದಿದ್ದಾರೆ.
ಹೊಳಲು ಗ್ರಾಮದ ನಿವಾಸಿ ರಾಮ್ ಸಿದ್ಧಯ್ಯ ಮಾತನಾಡಿ ಹೊಳಲು ಗ್ರಾಮದ ಕೆರೆ ಏರಿಯ ಪಕ್ಕದ ಗದ್ದೆಯಲ್ಲೂ ಸಹ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ ಆದ್ದರಿಂದ ರೈತರು ಜಮೀನಿಗೆ ಬರಲು ಭಯಪಡುವಂತಾಗಿದೆ.ಈ ವಿಷಯವನ್ನು ತಿಳಿಸಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಮಂಡ್ಯ ಅರಣ್ಯ ಸಹಾಯಕ ಸಂರಕ್ಷಣಾ ಅಧಿಕಾರಿ ಮಹದೇವಸ್ವಾಮಿ ಅವರು ಚಿರತೆಯ ಹೆಜ್ಜೆಯನ್ನು ಪರಿಶೀಲಿಸಿ ಅದರ ಸೆರೆಗಾಗಿ ಬೋನನ್ನು ಗದ್ದೆಯಲ್ಲಿ ಇಟ್ಟು ಕಾಯುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಪ್ರಾಣಿಯ ಸಂರಕ್ಷಣೆ ಹಾಗೂ ಸಾರ್ವಜನಿಕ ರಕ್ಷಣೆ ,ಹಿತ ದೃಷ್ಟಿಯಿಂದ ನಮಗೆ ಬಹಳ ಮುಖ್ಯ, ನಮ್ಮ ವಲಯ ಅರಣ್ಯ ಸಿಬ್ಬಂದಿ ಚಿರತೆ ಸೆರೆಹಿಡಿಯಲು ಹಗಲಿರುಳು ಶ್ರಮಿಸುತ್ತಿರುವುದಾಗಿ ಹೇಳಿದ್ದಾರೆ. ಈಗಾಗಲೇ ಚಿರತೆ ಓಡಾಡುವ ಜಾಗದಲ್ಲಿ ಮತ್ತೆ ಬೋನನ್ನು ಇಟ್ಟಿದ್ದೇವೆ ಹಾಗೂ ಗದ್ದೆಗೆ ನೀರು ಕಟ್ಟಲು ಬರುವ ಸಾರ್ವಜನಿಕರು ರಾತ್ರಿ ವೇಳೆ ಬರುವಾಗ ಒಬ್ಬರೇ ಬರಬಾರದು ಟಾರ್ಚ್ ಹಾಗೂ ದೊಣ್ಣೆ (ನಿಮ್ಮ ರಕ್ಷಣೆಗೆ) ತೆಗೆದುಕೊಂಡು ಬರಬೇಕು ಹಾಗೂ ರಾತ್ರಿ ವೇಳೆ ಯಾರು ಈ ದಾರಿಯಲ್ಲಿ ಸಂಚರಿಸಬಾರದು. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಚಿರತೆ ಚಲನವಲನ ಕುರಿತಂತೆ ಗಸ್ತು ಅರಣ್ಯ ಪಾಲಕರಾದ ಲೋಕೇಶ್ ಮಾತನಾಡಿ ಚಿರತೆ ಓಡಾಡುವ ಜಾಗಕ್ಕೆ ಬೋನನ್ನು ಕೊಂಡೊಯ್ದು ಇಡಲಾಗುತ್ತಿದೆ ಇದನ್ನು ಯಾರು ಕೂಡ ಮುಟ್ಟಬಾರದು. ಅಲ್ಲದೆ, ಬೋನಿನ ಪಕ್ಕ ಯಾರು ಹೋಗಬಾರದು ಚಿರತೆಯು ಬೋನಿಗೆ ಬಿದ್ದಾಗ ನಮಗೆ ತಿಳಿಸಬೇಕೆಂದು ಮನವಿ ಮಾಡಿದ್ದಾರೆ. ಸ್ಥಳಪರಿಶೀಲಿಸುವ ವೇಳೆ ಮಂಡ್ಯ ಅರಣ್ಯವಲಯ ಅಧಿಕಾರಿಯಾದ ಶೈಲಜಾ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಹಾಜರಿದ್ದು, ಬೋನನ್ನು ಕೊಂಡೊಯ್ಯಲು ಸಹಕರಿಸಿದ್ದಾರೆ. ಸದ್ಯ ಚಿರತೆ ಯಾವಾಗ ಬೋನಿಗೆ ಬೀಳುತ್ತದೆ ಎಂದು ಜನ ಕಾಯುತ್ತಿದ್ದಾರೆ. ಅದು ಬೋನಿಗೆ ಬೀಳುವ ತನಕ ಹೊಳಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ.

