ಪಾಂಡವಪುರ: ಬಡವರ ಸರಳ ಮದುವೆ ಮಾಡಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಕೆನ್ನಾಳು ಗ್ರಾಮದ ಸೋಮೇಶ್ವರ ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಿಸಲಾಗುತ್ತಿದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ತಾಲ್ಲೂಕಿನ ಕೆನ್ನಾಳು ಗ್ರಾಮದಲ್ಲಿರುವ ಶ್ರೀ ಸೋಮೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೆ ಆರ್ ಐ ಡಿಎಲ್ (ನಿರ್ಮಿತಿ ಕೇಂದ್ರ) ವತಿಯಿಂದ 75ಲಕ್ಷ ರೂ. ಅನುದಾನದಡಿಯಲ್ಲಿ ನಿರ್ಮಿಸಲಾಗುತ್ತಿರುವ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಕೆನ್ನಾಳು ಗ್ರಾಮದ ಜನರು ಬಹಳ ಹಿಂದಿನಿಂದಲೂ ಶ್ರೀ ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಮುದಾಯ ಭವನ ನಿರ್ಮಿಸಬೇಕೆಂಬ ಮಾತುಕತೆ ಆಡಿದ್ದರು. ಅಂತೆಯೇ ಗ್ರಾಮದ ಜನರು ಮದುವೆ, ಮುಂಜಿ ಸೇರಿದಂತೆ ಇತರೆ ಶುಭ ಕಾರ್ಯಗಳನ್ನು ನಡೆಸಲು ಅನುಕೂಲವಾಗುವಂತೆ ಸಮುದಾಯ ಭವನದ ನಿರ್ಮಾಣ ಕಾರ್ಯವನ್ನು ಇದೀಗ ಕೈಗೆತ್ತಿಗೊಳ್ಳಲಾಗಿದೆ. ಸರ್ಕಾರದಿಂದ 10ಲಕ್ಷ ರೂ. ಬಿಡುಗಡೆಯಾಗಿದೆ. ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದರು.

ಕಲ್ಯಾಣ ಮಂಟಪಗಳಿಗೆ ಹೆಚ್ಚಿನ‌ ಹಣ ನೀಡಿ ಬಡವರು ಮದುವೆ ಕಾರ್ಯವನ್ನು ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಬಡ ಜನರಿಗೆ ‌ಅನುಕೂಲವಾಗಲಿ ಎಂದ ಉದ್ದೇಶದಿಂದ ಸಮುದಾಯ ಭವನ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ತಾಲೂಕು ರೈತ ಸಂಘದ ಅಧ್ಯಕ್ಷ ಕೆನ್ನಾಳು ವಿಜಯ್ ಕುಮಾರ್, ಮಾಜಿ ಅಧ್ಯಕ್ಷ ಪಿ.ನಾಗರಾಜು, ರೈತಸಂಘದ ಮುಖಂಡರಾದ ಶಂಕರೇಗೌಡ, ಚಂದ್ರಶೇಖರ್, ಸುಂದರಣ್ಣ, ಪುಟ್ಟಣ್ಣ, ಗುತ್ತಿಗೆದಾರ ಲೋಕೇಶ್ (ಬಾಣ), ಕೆನ್ನಾಳು ಗ್ರಾ.ಪಂ ಅಧ್ಯಕ್ಷ ವಿ.ಪ್ರಕಾಶ್, ಸದಸ್ಯರಾದ ರಜನಿ ರಮೇಶ್, ಎ.ಬಿ.ಚಿದಂಬರ್, ಕಾಂತರಾಜು, ಕೆ.ಪಿ.ನಂದೀಶ್, ಗ್ರಾ.ಪಂ ಕಾರ್ಯದರ್ಶಿ ಕುಮಾರ್, ಬಿಜೆಪಿ ಸಾಮಾಜಿಕ ಜಾಲತಾಣ ಸದಸ್ಯ ಹೇಮಂತ್ ಕುಮಾರ್, ತಾ.ಪಂ ಮಾಜಿ ಸದಸ್ಯ ಪದ್ದಣ್ಣ ಇತರರಿದ್ದರು.