ಮಂಡ್ಯ: ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಬಲಿಯಾದ ಆರೋಪ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ಪಾದದ ಮೂಳೆ ಮುರಿತದಿಂದ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಸಾವನ್ನಪ್ಪಿದೆ. ಮಿಮ್ಸ್ ಆಸ್ಪತ್ರೆಯ ವೈದ್ಯರ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ.

ಮೃತ ಮಗುವಿನ ಪೋಷಕರಿಂದ ದೂರುಗಳ ಸರಿಮಳೆಯಾಗುತ್ತಿದೆ. ನೆಲ್ಲೂರು ಗ್ರಾಮದ ಸಾನ್ವಿ(7) ಮೃತ ಬಾಲಕಿ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನೆಲ್ಲೂರು ಗ್ರಾಮದ ಪೋಷಕರ ಮಗು. ಟೈಲ್ಸ್ ಬಿದ್ದು ಸಾನ್ವಿಯ ಪಾದದ ಮೂಳೆ ಮುರಿದಿತ್ತು. ಮೇ 29ರ ಗುರುವಾರ ಮಿಮ್ಸ್‌‌ಗೆ ಕರೆತರಲಾಗಿತ್ತು.

ಎಲ್ಲಾ ಪರೀಕ್ಷೆಗಳ ನಂತರ ಗುರುವಾರ ರಾತ್ರಿಯೇ ಸಾನ್ವಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಆಪರೇಷನ್ ಬಳಿಕ ರಾತ್ರಿಯೇ ವಾರ್ಡ್‌ಗೆ ವೈದ್ಯರು ಶಿಫ್ಟ್ ಮಾಡಿದ್ದರು. ಶುಕ್ರವಾರ ಬೆಳಿಗ್ಗೆ ಬಾಲಕಿ ಆರೋಗ್ಯದಲ್ಲಿ ಏರುಪೇರಾಗಿದೆ. ಬಳಿಕ ತೀವ್ರ ನಿಗಾ ಘಟಕದಲ್ಲಿ ಬಾಲಕಿಗೆ ಚಿಕಿತ್ಸೆ ಮುಂದುವರಿದಿತ್ತು.

ಶನಿವಾರ ಬೆಳಿಗ್ಗೆ ಡ್ರಿಪ್ ಮೂಲಕ ಔಷಧಿ ನೀಡಲಾಗಿತ್ತು. ಔಷಧಿ ನೀಡ್ತಿದ್ದಂತೆ ಪ್ರಜ್ಞಾಹೀನ ಸ್ಥಿತಿ ಬಾಲಕಿ ತಲುಪಿದ್ದಳು. ಶನಿವಾರ ರಾತ್ರಿ 10:30ರಲ್ಲಿ ಮಗು ಸಾವಿನ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
ಪೋಷಕರಿಗೆ ಮಾಹಿತಿ ನೀಡುವ ಮುನ್ನ ಪೊಲೀಸರಿಗೆ ಮಾಹಿತಿ ನೀಡಿ ಕರೆಸಿಕೊಂಡಿದ್ದರೆಂದು ಪೋಷಕರು ಆರೋಪಿಸಿದ್ದಾರೆ. ಮೆಡಿಕಲ್ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ್ದೇ ಸಾವಿಗೆ ಕಾರಣ ಎಂದು ದೂರಿದ್ದಾರೆ.

ಮಗು ಸಾವಿನ ಬಗ್ಗೆ ಪ್ರಶ್ನಿಸಿದ ಕುಟುಂಬಸ್ಥರಿಗೆ ವಿಮ್ಸ್ RMO ಬೇಜವಾಬ್ದಾರಿ ಉತ್ತರ ನೀಡಿದರೆಂದು ಆರೋಪಿಸಿದ್ದಾರೆ. ಅಂಗಾಂಗ ವೈಫಲ್ಯದಿಂದ ಮಗು ಸತ್ತಿದೆ, ಬೇಕಾದರೆ ತನಿಖೆ ಮಾಡಿಸಿಕೊಳ್ಳಿ ಎಂದ RMO ಡಾ. ದರ್ಶನ್ ಹೇಳಿದ್ದಾರೆಂದು ಆರೋಪಿಸಿದ್ದಾರೆ. ಬೇರೆ ವೈದ್ಯರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸೂಕ್ತ ತನಿಖೆಗೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಮಗು ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.