News Karnataka Kannada
Friday, May 10 2024
ಶಿವಮೊಗ್ಗ

ಶಿವಮೊಗ್ಗ: ಆಪ್ತಸಮಾಲೋಚನೆ-ಅರಿವು ಮೂಲಕ ಪೋಕ್ಸೋ ಪ್ರಕರಣ ನಿಯಂತ್ರಿಸಲು ಡಿಸಿ ಸೂಚನೆ

Shivamogga: DC instructs to control POCSO cases through counselling and awareness
Photo Credit : By Author

ಶಿವಮೊಗ್ಗ, ನ.೨೯: ಶಾಲಾ ಮಕ್ಕಳಿಗೆ ಆಪ್ತ ಸಮಾಲೋಚಲನೆ ಮತ್ತು ಪೋಕ್ಸೊ ಕಾಯ್ದೆ ಕುರಿತು ಅರಿವು ಮೂಡಿಸುವ ಮೂಲಕ ಪೋಕ್ಸೋ, ಬಾಲ್ಯ ವಿವಾಹ, ಇತರೆ ಪ್ರಕರಣಗಳನ್ನು ಕಡಿಮೆ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ೨ನೇ ತ್ರೈಮಾಸಿಕದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳು ಶಾಲಾ ಹಂತದಲ್ಲೇ ಮನೆ ಬಿಟ್ಟು ಹೋಗುವುದು, ಬಾಲ್ಯ ವಿವಾಹ ಹಾಗೂ ಇತರೆ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿವೆ. ಹದಿವಯಸ್ಸಿನಲ್ಲಿ ಕಾಯ್ದೆ ಕಾನೂನು, ಭವಿಷ್ಯ ಅರಿವಿಲ್ಲದೆ ಮಕ್ಕಳು ಹಾದಿ ತಪ್ಪುತ್ತಿರುವುದನ್ನು ತಪ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಶಾಲೆಯಿಂದ ಹೊರಗುಳಿವ ಮಕ್ಕಳನ್ನು ಗುರುತಿಸಿ, ಶಾಲೆಗೆ ಬರುವಂತೆ ಕ್ರಮ ಕೈಗೊಳ್ಳಬೇಕು ಹಾಗೂ ಪೊಕ್ಸೊ ಕಾಯ್ದೆ ಕುರಿತು ಮಕ್ಕಳಲ್ಲಿ ಅರಿವು ಹೆಚ್ಚಿಸಬೇಕು. ಬಿಆರ್‌ಸಿ(ಬ್ಲಾಕ್ ರಿಸೋರ್ಸ್ ಕೋಆರ್ಟಿನೇಟರ್ ಮತ್ತು ಸಿಆರ್‌ಪಿ(ಕ್ಲಸ್ಟರ್ ರಿಸೋರ್ಸ್ ಪರ್ಸನ್) ಇವರಿಗೆ ಮಕ್ಕಳಿಗೆ ಆಪ್ತ ಸಮಾಲೋಚನೆ ನಡೆಸುವ ಬಗ್ಗೆ ತರಬೇತಿ ನೀಡಿ ಅವರಿಂದ ಮಕ್ಕಳಿಗೆ ಆಪ್ತಸಮಾಲೋಚನೆ ನಡೆಸಬೇಕು. ಮುಖ್ಯವಾಗಿ ಮಕ್ಕಳ ಬಳಿ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ದುಷ್ಪರಿಣಾಮ ಈ ಎಲ್ಲ ವಿಷಯಗಳ ಕುರಿತು ಮಾತನಾಡಬೇಕು, ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸಬೇಕು.

ಜಿಲ್ಲೆಯಲ್ಲಿ ೫೦೦ ಕ್ಕೂ ಹೆಚ್ಚು ಮಕ್ಕಳು ಇರುವಂತಹ ಸುಮಾರು ೧೦೦ ಶಾಲೆಗಳನ್ನು ಗುರುತಿಸಿ, ಯೋಜನೆ ರೂಪಿಸಿಕೊಂಡು ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸಬೇಕು. ಆಪ್ತಸಮಾಲೋಚನೆಯಿಂದ ಮಕ್ಕಳ ಮನಸ್ಸನ್ನು ತಿಳಿಯಲು ಸಾಧ್ಯವಿದ್ದು, ಶಾಲೆ ಬಿಡುವುದು, ಹುಡುಗ, ಹುಡುಗಿ ಮನೆ ಬಿಟ್ಟು ಹೋಗುವುದು, ಇತರೆ ಪೋಕ್ಸೋ ಪ್ರಕರಣಗಳನ್ನು ನಿಯಂತ್ರಿಸಲು ಹಾಗೂ ಅರಿವು ಮೂಡಿಸುವ ಕುರಿತು ಅಧಿಕಾರಿಗಳು ಗಂಭೀರವಾಗಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಾವು ನಿಗದಿತ ಶಾಲಾ-ಕಾಲೇಜುಗಳಿಗೆ ವಾರಕ್ಕೊಮ್ಮೆ ಮಾನಸಿಕ ಆರೋಗ್ಯ ತಂಡವನ್ನು ಕಳುಹಿಸಿಕೊಡುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿಗಳು, ಪೋಕ್ಸೊ ಸಂತ್ರಸ್ತರನ್ನು ಜಿಲ್ಲಾಸ್ಪತ್ರೆಯ ಓಬಿಜಿ ವಿಭಾಗದಲ್ಲಿ ಪರೀಕ್ಷೆ ನಡೆಸಲು ತುಂಬಾ ವಿಳಂಬ ಮಾಡಲಾಗುತ್ತಿದೆ. ಹಾಗೂ ಇವರನ್ನು ಸಹ ಇತರೆ ಸಾಮಾನ್ಯ ರೋಗಿಗಳ ರೀತಿ ನಡೆಸಿಕೊಳ್ಳುತ್ತಿರುವ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಯವರು ತಿಳಿಸಿರುತ್ತಾರೆ. ಪೋಕ್ಸೋ ಸಂತ್ರಸ್ತರನ್ನು ಯಾವುದೇ ತಡ ಇಲ್ಲದೇ ಪರೀಕ್ಷೆ ನಡೆಸಿ, ವರದಿ ನೀಡಬೇಕು. ಯಾವುದೇ ರೀತಿಯ ವಿಳಂಬ ಆದಲ್ಲಿ ಸಂಬಂಧಿಸಿದವರಿಗೆ ನೋಟಿಸ್ ನೀಡಲಾಗುವುದು. ಪೋಕ್ಸೋ ಹಾಗೂ ಮಹಿಳಾ ಸಂಬಂಧಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಒಂದು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು ಎಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳು ತಂಡ ರಚಿಸಿ ಜಿಲ್ಲೆಯ ಮಕ್ಕಳ ಪಾಲನಾ ಸಂಸ್ಥೆಗಳು/ತೆರೆದ ತಂಗುದಾಣಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ತಮಗೆ ವರದಿ ನೀಡುವಂತೆ ತಿಳಿಸಿದರು.

ಗ್ರಾಮ ಸಭೆಗಳು ಮತ್ತು ಮಕ್ಕಳ ರಕ್ಷಣಾ ಸಮಿತಿ ಸಭೆಗಳ ಮೂಲಕ ಮಕ್ಕಳ ಸಮಸ್ಯೆಗಳನ್ನು ಗುರುತಿಸಿ ಸೂಕ್ತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಬಾಲನ್ಯಾಯ ಕಾಯ್ದೆಯಡಿ ನೋಂದಣಿಯಾದ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಉತ್ತಮಪಡಿಸಬೇಕು. ಸ್ವಚ್ಚತೆ ಕಾಪಾಡಬೇಕು. ಜಿಲ್ಲೆಯಲ್ಲಿ ಒಟ್ಟು ೨೨ ಈ ರೀತಿಯ ಸಂಸ್ಥೆಗಳಿದ್ದು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮುಖ್ಯಸ್ಥರು ತಲಾ ಐದು ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿ ತಮಗೆ ವರದಿ ನೀಡುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಜುಲೈಯಿಂದ ಸೆಪ್ಟೆಂಬರ್‌ವರೆಗೆ ಒಟ್ಟು ೨೫ ಬಾಲ್ಯ ವಿವಾಹ ಪ್ರಕರಣಗಳ ಪೈಕಿ ೧೩ ವಿವಾಹಗಳನ್ನು ತಡೆಯಲಾಗಿದೆ. ಬಾಲ್ಯ ವಿವಾಹ ತಡೆ ಕುರಿತು ಅರಿವು ಹೆಚ್ಚಬೇಕು. ಹಾಗೂ ಕೇವಲ ಪೋಷಕರ ವಿರುದ್ದ ಮಾತ್ರವಲ್ಲ ಮದುವೆ ಮಾಡಿದ ಪುರೋಹಿತರು, ಕಲ್ಯಾಣ ಮಂದಿರ ಹೀಗೆ ಮದುವೆಯಲ್ಲಿ ಪಾಲ್ಗೊಂಡವರೆಲ್ಲರ ವಿರುದ್ದ ಎಫ್‌ಐಆರ್ ದಾಖಲಿಸಬೇಕೆಂದು ಸೂಚನೆ ನೀಡಿದ ಅವರು ಗ್ರಾ.ಪಂ ಮಟ್ಟದಲ್ಲೂ ಬಾಲ್ಯ ವಿವಾಹ ತಡೆ ಕುರಿತು ಅರಿವು ಹಾಗೂ ನಿಯಂತ್ರಣ ಕುರಿತು ಕ್ರಮ ವಹಿಸಬೇಕೆಂದರು.

ಬಾಲ ನ್ಯಾಯ ಮಂಡಳಿ ಮುಂದೆ ಬಂದ ಪ್ರಕರಣಗಳು, ದತ್ತು ಕಾರ್ಯಕ್ರಮ, ಪೋಷಕತ್ವ ಕಾರ್ಯಕ್ರಮದಡಿ ಪ್ರಕರಣಗಳನ್ನು ಸೂಕ್ತವಾಗಿ ಪರಿಶೀಲಿಸಿ ಶೀಘ್ರವಾಗಿ ಇತ್ಯರ್ಥಪಡಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್, ಡಿಹೆಚ್‌ಓ ಡಾ.ರಾಜೇಶ್ ಸುರಗಿಹಳ್ಳಿ, ದಾವಣಗೆರೆ ಸಿಡಿಪಿಓ ಚಂದ್ರಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ತಾಲ್ಲೂಕುಗಳ ಸಿಡಿಪಿಓ ಗಳು, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ, ಇತರೆ ಸಂಸ್ಥೆಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು