News Karnataka Kannada
Monday, April 29 2024
ಶಿವಮೊಗ್ಗ

ಶಿವಮೊಗ್ಗ: ಮಕ್ಕಳ ಹಕ್ಕುಗಳ ರಕ್ಷಣೆಗೆ ಸಾಮೂಹಿಕವಾಗಿ ಪ್ರಯತ್ನಿಸಬೇಕು- ಕೆ.ನಾಗಣ್ಣಗೌಡ

Shivamogga: Collective efforts should be made to protect the rights of children: K Naganna Gowda
Photo Credit : By Author

ಶಿವಮೊಗ್ಗ, ಡಿ.17: ಮಕ್ಕಳ ವಿರುದ್ದ ನಡೆಯುತ್ತಿರುವ ದೌರ್ಜನ್ಯ ತಡೆಯಲು ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗೆ ಎಲ್ಲರೂ ಸಾಮೂಹಿಕವಾಗಿ ಶ್ರಮಿಸಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ.ನಾಗಣ್ಣಗೌಡ ಹೇಳಿದರು.

ಆರ್ ಟಿಇ, ಪೋಕ್ಸೋ ಮತ್ತು ಬಾಲನ್ಯಾಯ ಕಾಯ್ದೆ ಕುರಿತು ಭಾಗೀದಾರರೊಂದಿಗೆ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳ ಜೀವ ಮತ್ತು ಜೀವನ ಹಾಳು ಮಾಡುವ ಅಧಿಕಾರ ಯಾರಿಗೂ ಇಲ್ಲ. ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗುವಂತಹ ಯಾವುದೇ ರೀತಿಯ ಘಟನೆಗಳು ನಡೆಯದಂತೆ ಮುಂಜಾಗರೂಕತಾ ಕ್ರಮಗಳನ್ನು ಎಲ್ಲ ಇಲಾಖೆಗಳು, ಸಂಸ್ಥೆಗಳು, ಸಾರ್ವಜನಿರು ಸೇರಿ ಸಾಮೂಹಿಕವಾಗಿ ಕೈಗೊಳ್ಳಬೇಕು.

ಮಕ್ಕಳು ತಾಯಿ ಗರ್ಭದಲ್ಲಿ ಇರುವಾಗಿನಿಂದಲೇ ಅದರ ರಕ್ಷಣೆಗಾಗಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೇರಿದಂತೆ ಸರ್ಕಾರ ಶ್ರಮಿಸುತ್ತಿದೆ. ಎಲ್ಲರೂ ಸೇರಿ ಒಂದು ತಂಡವಾಗಿ ಮಕ್ಕಳ ರಕ್ಷಣೆಯಲ್ಲಿ ತೊಡಗಬೇಕಿದೆ ಎಂದರು.

ಅಪೌಷ್ಟಿಕತೆಯಿಂದ 12 ರಿಂದ 13 ಸಾವಿರ ಮಕ್ಕಳು ಸಾವನ್ನಪ್ಪುತ್ತಿದ್ದು ಇದರಲ್ಲಿ 0 ಯಿಂದ 3 ವರ್ಷದ ಮಕ್ಕಳು ಶೇ.60 ಇದ್ದಾರೆ. ಆದ್ದರಿಂದ ಆಹಾರ ಪದ್ದತಿ ಸುಧಾರಣೆ ಕುರಿತು ನಾವೆಲ್ಲ ಯೋಚಿಸಬೇಕು. ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಎಎನ್‍ಎಂಗಳು ಪೌಷ್ಟಿಕ ಆಹಾರದ ಬಗ್ಗೆ ಪ್ರಾತ್ಯಕ್ಷಿಕೆ ನೀಡಬೇಕು. ಮುಂದಿನ ದಿನಗಳಲ್ಲಿ ತಿನ್ನುವ ಆಹಾರವೇ ಔಷಧಿಯಾಗಬೇಕು. ಅಡುಗೆ ಮನೆಯೇ ಆಸ್ಪತ್ರೆಯಂತಾಗಬೇಕು. ಆಸ್ಪತ್ರೆಗೆ ಹೋದರೆ ವೈದ್ಯರು ತರಹೇವಾರಿ ಮಾತ್ರೆ ಬರೆಯುತ್ತಾರೆ. ಆದರೆ ವೈದ್ಯರು ಆಹಾರ ಪದ್ದತಿ, ಜೀವನಶೈಲಿ ಕುರಿತು ಹೆಚ್ಚು ಹೇಳಬೇಕು ಎಂದ ಅವರು ಮಕ್ಕಳ ಆರೋಗ್ಯದ ಕುರಿತಾದ ಎಲ್ಲ ಸೌಲಭ್ಯಗಳು ಅವರಿಗೆ ಸಿಗುವಂತಾಗಬೇಕು ಎಂದರು ಎಂದರು.

ತುಮಕೂರು ಆಸ್ಪತ್ರೆಯಲ್ಲಿ ಆದ ಅಚಾತುರ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಗರ್ಭಿಣಿಯರಿಗೆ ಯಾವುದೇ ರೀತಿಯ ದಾಖಲೆ ಕೇಳದಂತೆ ತಕ್ಷಣ ಚಿಕಿತ್ಸೆ ನೀಡಲು ಆದೇಶಿಸಿದ್ದು, ಆಸ್ಪತ್ರೆಗಳಲ್ಲಿ, ಪಿಹೆಚ್‍ಸಿಗಳಲ್ಲಿ ಕಡ್ಡಾಯವಾಗಿ ಗರ್ಭಿಣಿಯರಿಗೆ, ತೀವ್ರತರ ಖಾಯಿಲೆಯವರಿಗೆ ಹೆಲ್ತ್ ಡೆಸ್ಕ್ ಮಾಡಬೇಕು. ಕೇವಲ ವ್ಯವಸ್ಥೆ ಮಾಡಿದರೆ ಸಾಲದು, ಆಸ್ಪತ್ರೆ ಸಿಬ್ಬಂದಿಗಳು ತಕ್ಷಣ ಸ್ಪಂದಿಸಬೇಕೆಂದು ಡಿಹೆಚ್‍ಓ ರವರಿಗೆ ತಿಳಿಸಿದರು.

ಶಿಕ್ಷಣ ಇಲಾಖೆ ಮೂಲಕ ಮಕ್ಕಳಿಗೆ ಲಭಿಸಬೇಕಾದ ಎಲ್ಲ ಸೌಲಭ್ಯಗಳು ಸಕಾಲದಲ್ಲಿ ದೊರಕುವಂತೆ ಕ್ರಮ ವಹಿಸಬೇಕು. ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿಗೆ ತರಬೇಕು. ಶಾಲೆಗಳಲ್ಲಿ ಬಿಆರ್‍ಸಿ, ಸಿಆರ್‍ಸಿ ಮೂಲಕ ಮಕ್ಕಳಿಗೆ ಆಪ್ತಸಮಾಲೋಚನೆ ನಡೆಸಬೇಕು.

ಡಿಡಿಪಿಐ ಹಾಗೂ ಬಿಇಓ ಗಳು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸುವ ಶಿಕ್ಷಕರ ಪಟ್ಟಿ ಮಾಡಿ ಅವರನ್ನು ತಿದ್ದಬೇಕು. ಇಲ್ಲವಾದಲ್ಲಿ ಅವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಇದಕ್ಕೆ ನಾಚಿಕೆ ಬೇಡ. ಮುನ್ನೆಚ್ಚರಿಕೆ ಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸೂಚಿಸಿದರು.

ಡಿಡಿಪಿಐ ಮಾತನಾಡಿ, 10 ನೇ ತರಗತಿವರೆಗೆ ಮಕ್ಕಳಿಗೆ ಲಭ್ಯವಿರುವ ಎಲ್ಲ ಸೌಲಭ್ಯ ಒದಗಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 1705 ಶಾಲೆ ಬಿಟ್ಟ ಮಕ್ಕಳಿದ್ದು 774 ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗಿದೆ. ಇನ್ನುಳಿದಂತೆ ವಯಸ್ಸು ಮೀರಿದ, ಅನಾರೋಗ್ಯ, ವಲಸೆ ಇತರೆ ಮಕ್ಕಳಿದ್ದು, ಈ ಬಗ್ಗೆ ಕ್ರಮ ವಹಿಸಲಾಗುತ್ತಿದೆ ಎಂದರು.

ಅಧ್ಯಕ್ಷರು, ಕಾರ್ಮಿಕ ಇಲಾಖೆ ವತಿಯಿಂದ ಜಿಲ್ಲೆಯ ಬಾಲ ಕಾರ್ಮಿಕರ ಪಟ್ಟಿ ಮಾಡಿ ಬಾಲ ಕಾರ್ಮಿಕತೆ ಇರುವೆಡೆ ನಿಯಮಿತವಾಗಿ ದಾಳಿ ನಡೆಸಿ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು. ಅವರಿಗೆ ಇಲಾಖೆಯಿಂದ ಲಭಿಸಬೇಕಾದ ಪರಿಹಾರವನ್ನು ನೀಡಬೇಕು. ಶಾಲೆ ಬಿಟ್ಟ ಮಕ್ಕಳು, ವಲಸಿಗರು ಇತರೆ 16 ವರ್ಷ ಮೀರಿದ ಮಕ್ಕಳಿಗೆ ಕೌಶಲ್ಯಾಭಿವೃದ್ದಿ ಇಲಾಖೆ ಸಹಯೋಗದಲ್ಲಿ ಕೌಶಲ್ಯ ತರಬೇತಿ ನೀಡಬೇಕೆಂದರು.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಸೂಕ್ತ ಕ್ರಮ ವಹಿಸಬೇಕು. ಅವರಿಗೆ ಸಿಗಬೇಕಾದ ಸೌಲಭ್ಯಗಳು ಅವರಿಗೆ ತಲುಪಬೇಕು. ಬಾಲಕಿಯರ ಹಾಸ್ಟೆಲ್‍ಗೆ ಮಹಿಳಾ ವಾರ್ಡನ್‍ಗಳನ್ನೇ ನೇಮಿಸಬೇಕು. ವಾರ್ಡನ್‍ಗಳು ಕೇವಲ ಮೇಲ್ವಿಚಾರಣೆ ಮಾಡದೇ ಮಕ್ಕಳೊಂದಿಗೆ ಚರ್ಚಿಸಬೇಕು, ಒಡನಾಡಬೇಕು ಎಂದರು.
ವಿದ್ಯಾರ್ಥಿಗಳಿಗೆ ಆಟೋಟಗಳು, ಕ್ಷೇತ್ರದಲ್ಲಿ ಕೆಲಸ, ಗಿಡಗಳ ಬಗ್ಗೆ ಪರಿಚಯ ಮಾಡಿಸಿ, ಗಿಡ ನೆಡುವಂತೆ, ಆಟ ಆಡುವಂತೆ ಪ್ರೇರೇಪಿಸಬೇಕು. ಹಾಗೂ ಹಾಸ್ಟೆಲ್‍ಗಳಲ್ಲಿನ ಆಹಾರದ ಗುಣಮಟ್ಟವನ್ನು ಮುಖ್ಯಸ್ಥರು, ಸಿಡಿಪಿಓಗಳು ಪರಿಶೀಲಿಸಬೇಕೆಂದರು.

ಬಾಲ್ಯ ವಿವಾಹ ತಡೆಗೆ ಎಲ್ಲರೂ ಸಹಕರಿಸಬೇಕು. ಸಹಕಾರ ನೀಡದಿದ್ದರೆ ಪೊಲೀಸ್ ಇಲಾಖೆ ಸಹಾಯ ಪಡೆಯಬೇಕು. ತಹಶೀಲ್ದಾರ್ ಅಧ್ಯಕ್ಷತೆ, ಇಓ, ಪಿಡಿಓ, ಎನ್‍ಜಿಓ ಗಳನ್ನೊಳಗೊಂಡ ತಾಲ್ಲೂಕು ಮಟ್ಟದ ಹಾಗೂ ಗ್ರಾಮ ಮಟ್ಟದ ಸಮಿತಿಗಳ ಸಭೆಯನ್ನು ನಿಯಮಿತವಾಗಿ ಮಾಡಿ ಮಕ್ಕಳ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಣಾಮಕಾರಿ ಕ್ರಮ ಕೈಗೊಂಡಲ್ಲಿ ಮಕ್ಕಳ ವಿರುದ್ದ ದೌರ್ಜನ್ಯ ನಿಯಂತ್ರಣಕ್ಕೆ ಬರುತ್ತದೆ. ಹಾಗೂ ಇಲಾಖೆಗಳಲ್ಲಿನ ಯಶೋಗಾಥೆಗಳನ್ನು ಹೆಚ್ಚು ಪ್ರಚಾರ ಮಾಡಬೇಕೆಂದರು.

ಸರ್ಕಾರ ಮಕ್ಕಳ ವಿರುದ್ದ ದೌರ್ಜನ್ಯ ತಡೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಅವರು ಅಭಿವೃದ್ದಿಗಾಗಿ ಅನೇಕ ರೀತಿಯ ಕಾಯ್ದೆಗಳು, ಸೌಲಭ್ಯಗಳನ್ನು ನೀಡಿದ್ದು, ಇವುಗಳು ಮಕ್ಕಳಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಾಮೂಹಿಕವಾಗಿ ಕೈಜೋಡಿಸಬೇಕೆಂದರು.

ಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯ 25 ಸರ್ಕಾರಿ ಶಾಲೆಗಳನ್ನು ಗುರುತಿಸಿ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳನ್ನು ಸಹ ಗುರುತಿಸಲಾಗುವುದು. ಪ್ರತಿ ತಾಲ್ಲೂಕಿನಲ್ಲಿ ನೋಡಲ್ ಅಧಿಕಾರಿಗಳಿದ್ದು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ 2-3 ತಿಂಗಳಿಗೊಮ್ಮ ಸಭೆ ನಡೆಸಿ ಮಕ್ಕಳ ಸಮಸ್ಯೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ಸಹಕಾರ ಮತ್ತು ಸಹಾಯವನ್ನು ಇಲಾಖೆ ಒದಗಿಸಲಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣನವರ್ ಮಾತನಾಡಿ, ಪ್ರತಿ ತಿಂಗಳು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪೋಕ್ಸೋ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರೌಢಶಾಲೆಗಳಲ್ಲಿ ಒಂದು ತಾಸು ಜಾಗೃತಿ ಕಾರ್ಯಕ್ರಮ ಮಾಡಬೇಕು. ಮಕ್ಕಳ ಸಹಾಯವಾಣಿ 1098 ನ್ನು ಶಾಲೆಯ ಪ್ರತಿ ಬೋರ್ಡಿನ ಮೇಲೆ ಬರೆಸಬೇಕೆಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಿಇಓ ಎನ್.ಡಿ.ಪ್ರಕಾಶ್, ಜಿ.ಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ , ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಕಾರ್ಯಕ್ರಮಗಳ ಸಂಯೋಜಕರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು