News Karnataka Kannada
Tuesday, April 30 2024
ಶಿವಮೊಗ್ಗ

ಶಿವಮೊಗ್ಗ: 400 ಕಿವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಲೋಕಾರ್ಪಣೆ

400 kW solar power plant inaugurated
Photo Credit : By Author

ಶಿವಮೊಗ್ಗ: ವಿದ್ಯಾಸಂಸ್ಥೆಗಳು ಓದಿನ ಜೊತೆಗೆ ನಾವೀನ್ಯ ಪ್ರಯೋಗಗಳನ್ನು ನಡೆಸುವ ಪೂರಕ ವೇದಿಕೆಗಳನ್ನು ನಿರ್ಮಾಣ ಮಾಡಬೇಕಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವದ ಪ್ರಯುಕ್ತ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಾಪಿಸಿರುವ 400 ಕಿವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸಾಮಾಜಿಕ ಸಂಶೋಧನಾ ಪ್ರಯೋಗಗಳು ಸಮಾಜದ ಉನ್ನತಿಗೆ ಅತಿಅವಶ್ಯಕ ವಿಚಾರವಾಗಿದ್ದು, ಸಂಶೋಧನಾ ಪ್ರಕ್ರಿಯೆಗಳಿಗೆ ವಿದ್ಯಾರ್ಥಿಗಳು ತಮ್ಮನ್ನು ತೆರೆದುಕೊಳ್ಳಬೇಕಿದೆ. ಪರಿವರ್ತಿತ ಸಮಾಜದಲ್ಲಿ ಪರಿಸರ ಪೂರಕ ನಾವೀನ್ಯ ಪ್ರಯೋಗಗಳು ಅಗತ್ಯ.

ಪ್ರಧಾನ ಮಂತ್ರಿಗಳ ಸಂಕಲ್ಪದಿಂದ ಗ್ರಾಮೀಣ ಭಾಗದ ಪ್ರತಿ ಮನೆಗಳಿಗೆ ಗ್ಯಾಸ್ ಸಂಪರ್ಕ ನೀಡುವಲ್ಲಿ ಸರ್ಕಾರ ಸಫಲವಾಗಿದೆ. ಜೊತೆಯಲ್ಲಿ ಸೌರ ವಿದ್ಯುತ್ ಘಟಕಗಳ ಮೂಲಕ ಸಂಪೂರ್ಣ ಹಳ್ಳಿಗೆ ಬೇಕಾದ ವಿದ್ಯುತ್ ಸೇವೆ ನೀಡುವ ಪ್ರಯೋಗಗಳು ಹೊಸನಗರದ ಹನಿಯದಂತಹ ಗ್ರಾಮಗಳು ಸಫಲವಾಗಿದೆ. ಸೋಲಾರ್ ಶಕ್ತಿಯು ಪರ್ಯಾಯ ವಿದ್ಯುಚ್ಛಕ್ತಿ ಕಂಡುಕೊಳ್ಳುವಲ್ಲಿ ಉತ್ತಮ ಬೆಳವಣಿಗೆಯಾಗಿದೆ.

ಮಲೆನಾಡಿನ ಭಾಗದಲ್ಲಿ ಏನು ಇಲ್ಲದ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಎನ್ಇಎಸ್ ಸಂಸ್ಥೆ ನೀಡಿದ ಕೊಡೆಗೆ ಅವಿಸ್ಮರಣೀಯ. ಇಂದು ಶಿವಮೊಗ್ಗ ಜಿಲ್ಲೆ ಉದ್ಯಮ, ಪ್ರವಾಸೋದ್ಯಮ, ಶಿಕ್ಷಣ ಕ್ಷೇತ್ರದಲ್ಲಿ ಬಲಿಷ್ಟ ಜಿಲ್ಲೆಯಾಗಿ ಅಭಿವೃದ್ಧಿ ಹೊಂದುತ್ತಿದೆ. ಇದಕ್ಕೆ ಪೂರಕವಾಗಿ ವಿಮಾನ ನಿಲ್ದಾಣ ಲೋಕಾರ್ಪಣೆಯಾಗುತ್ತಿದೆ.

ಕೊಲ್ಲೂರು ಮತ್ತು ಕೊಡಚಾದ್ರಿಗೆ ಕೆಬಲ್ ಕಾರ್ ಮೂಲಕ ಸಂಪರ್ಕ ನೀಡುವ ಐತಿಹಾಸಿಕ ಯೋಜನೆಗೆ ಕೇಂದ್ರ ಸರ್ಕಾರ ಐನೂರು ಕೋಟಿ ಬಿಡುಗಡೆಗೊಳಿಸಿ ಆದೇಶಿಸಿದೆ. ಶಿವಮೊಗ್ಗ ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ರೈಲ್ವೆ ಯೋಜನೆಯ ಕೆಲಸ ಭರದಿಂದ ಸಾಗುತ್ತಿದೆ ಎಂದು ಹೇಳಿದರು.

ಪರಿಸರ ಸ್ನೇಹಿ ವಿದ್ಯುತ್ ಘಟಕ

ಎನ್.ಇ.ಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಎರಡು ಕೋಟಿ ವೆಚ್ಚದಲ್ಲಿ ಸ್ಥಾಪಿಸಿರುವ 400 ಕಿಲೊವ್ಯಾಟ್ ಉತ್ಪಾದಿಸುವ ಸೌರ ವಿದ್ಯುತ್ ಘಟಕವು ಸಂಪೂರ್ಣ ಪರಿಸರ ಸ್ನೇಹಿಯಾಗಿದೆ. ಇದರಿಂದ ಸುಮಾರು ಹನ್ನೆರಡು ಸಾವಿರ ಟನ್ ಇಂಗಾಲ ಡೈಆಕ್ಸೈಡ್ ಕಡಿಮೆಯಾಗಲಿದೆ. ದೇಶಿಯ ಉತ್ಪಾದನೆಗೆ ಹೆಚ್ಚು ಒತ್ತು ನೀಡಿ, ದಾಬಸ್ ಪೇಟೆಯಲ್ಲಿ ತಯಾರಾದ ಟಾಟಾ ಪವರ್ ಕಂಪನಿಯ ಉಪಕರಣಗಳನ್ನು ಬಳಸಲಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಪರಿಸರದ ಮೇಲಿನ ಹಾನಿಗಳನ್ನು ಸೂಕ್ಷ್ಮವಾಗಿ ಗಮನಿಸಿ, ಜವಾಬ್ದಾರಿಯುತ ನಡೆ ನಮ್ಮದಾಗಬೇಕಿದೆ. ಸೊಲಾರ್ ಯುನಿಟ್ ಗಳ ಸ್ಥಾಪನೆಗೆ ಸರ್ಕಾರ ಅನೇಕ ಸಬ್ಸಿಡಿ ಯೋಜನೆಗಳನ್ನು ನೀಡುತ್ತಿದೆ. ಆಧುನಿಕತೆಯ ಭರದಲ್ಲಿ ಪಕೃತಿ ಮೇಲಾಗುತ್ತಿರುವ ಒತ್ತಡ ಕಡಿಮೆಯಾಗಬೇಕಿದೆ. ಪ್ರಕೃತಿಯನ್ನು ಪ್ರೀತಿಸದಿರುವವನು ಏನನ್ನು ಪ್ರೀತಿಸಲಾರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಸದಸ್ಯರಾದ ವಿಶ್ವಾಸ್, ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿಗಳಾದ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಹೆಚ್.ಸಿ.ಶಿವಕುಮಾರ್, ಸೀತಾಲಕ್ಷ್ಮೀ, ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರಪ್ರಸಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಶ್ರಮಿಸಿದ ಎನ್.ಇ.ಎಸ್ ಮಾಜಿ ಅಧ್ಯಕ್ಷರಾದ ಎ.ಎಸ್.ವಿಶ್ವನಾಥ, ನಿವೃತ್ತ ಉಪ ಪ್ರಾಂಶುಪಾಲರಾದ ಡಾ.ಎಲ್.ಕೆ.ಶ್ರೀಪತಿ, ಪ್ರಾಧ್ಯಾಪಕರಾದ ಡಾ.ಅಜ್ಜಣ್ಣ, ಟಾಟಾ ಕಂಪನಿಯ ದರ್ಶನ್ ಅವರನ್ನು ಸನ್ಮಾನಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು