News Karnataka Kannada
Wednesday, May 01 2024
ಶಿವಮೊಗ್ಗ

ಶಿವಮೊಗ್ಗ: ಎಲ್ಲ ಅರ್ಹ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಲಸಿಕಾಕರಣ -ತಹಶೀಲ್ದಾರ್

Shiva
Photo Credit : By Author

ಶಿವಮೊಗ್ಗ: ಎಲ್ಲ ಅರ್ಹ ಮಕ್ಕಳ ದಡಾರ ಮತ್ತು ರುಬೆಲ್ಲಾದ ಎರಡು ಡೋಸ್‍ಗಳ ಲಸಿಕಾಕರಣ ಆಗಬೇಕು ಹಾಗೂ ಹಾಗೂ ದಢಾರ ಲಕ್ಷಣಗಳಾದ ಜ್ವರ ಮತ್ತು ರ್ಯಾಶ್ ಬಗ್ಗೆ ಕಣ್ಗಾವಲು ವ್ಯವಸ್ಥೆ ಬಲಪಡಿಸಬೇಕೆಂದು ಶಿವಮೊಗ್ಗ ತಹಶೀಲ್ದಾರ್ ಡಾ.ನಾಗರಾಜ್ ತಿಳಿಸಿದರು.

ಇಂದು ತಹಶೀಲ್ದಾರ್ ಕಚೇರಿಯಲ್ಲಿ ನಡೆದ ವಿವಿಧ ಇಲಾಖೆಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ಸರ್ಕಾರವು 2023 ರ ಅಂತ್ಯದ ವೇಳೆಗೆ ದಡಾರ ಮತ್ತು ರುಬೆಲ್ಲಾ(ಎಂಆರ್) ನಿರ್ಮೂಲನೆಗಾಗಿ ಬದ್ದವಾಗಿದ್ದು ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಅರ್ಹ ದಢಾರ ಮತ್ತು ರುಬೆಲ್ಲಾದ ಎರಡು ಡೋಸ್‍ಗಳ ನಿಗದಿತ ಪ್ರಗತಿ ಸಾಧಿಸಲು ಹಾಗೂ ಎರಡು ಡೋಸ್‍ಗಳ ಡ್ರಾರ್ಪಔಟ್ ರೇಟ್ ಶೂನ್ಯಕ್ಕೆ ತರಲು ಶ್ರಮಿಸಬೇಕು ಎಂದರು.

ಕೋವಿಡ್ ಮುನ್ನೆಚ್ಚರಿಕೆ ಕ್ರಮವಹಿಸಿ: ಇತ್ತೀಚೆಗೆ ಚೀನಾ, ಅಮೇರಿಕಾ ಇತರೆ ದೇಶಗಳಲ್ಲಿ ಕೋವಿಡ್ ಪ್ರಮಾಣ ಹೆಚ್ಚುತ್ತಿದ್ದು, ಇಲ್ಲಿಯೂ ಕೂಡ ಎಲ್ಲರೂ ಕೋವಿಡ್ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಶುಚಿತ್ವದ ಕಡೆಗೆ ಹೆಚ್ಚಿನ ಗಮನ ಕೊಡಬೇಕೆಂದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, 2 ರಿಂದ 5 ವರ್ಷದೊಳಗಿನ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಲಸಿಕೆ ನೀಡುವಿಕೆಯಲ್ಲಿ ಶೇ.95 ಪ್ರಗತಿ ಸಾಧಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ದಡಾರ ರುಬೆಲ್ಲಾ ನಿರ್ಮೂಲನೆಗಾಗಿ ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತರು ಮತ್ತು ಇತರೆ ಸಂಬಂಧಿಸಿದವರಿಗೆ ಕಾರ್ಯಾಗಾರಗಳು, ತರಬೇತಿ ಮತ್ತು ಓರಿಯೆಂಟೇಷನ್ ಕಾರ್ಯಕ್ರಮಗಳನ್ನು ಮಾಡಲಾಗಿದೆ. 5 ತಿಂಗಳಿನಿಂದ 5 ವರ್ಷದ ಮಕ್ಕಳ ಹೆಡ್‍ಕೌಂಟ್ ಸರ್ವೇ ಆಗಿದೆ. ಡಿಸೆಂಬರ್ 27 ರೊಳಗೆ ಬಾಕಿ ಇರುವ ಮಕ್ಕಳ ಲಸಿಕಾಕರಣ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಭಾರತ ದೇಶವು ಕಳೆದ 11 ವರ್ಷಗಳಿಂದ ಪೋಲಿಯೋ ಮುಕ್ತವಾಗಿದ್ದರೂ ಡಬ್ಲ್ಯುಪಿವಿ(ವೈಲ್ಡ್ ಪೊಲಿಯೋ ವೈರಸ್)ಆಮದು ಮತ್ತು ಟೈಪ್ 2 ಪೋಲಿಯೋ ವೈರಸ್ ಅಪಾಯವಿರುವ ಕಾರಣ, ಮಗುವಿಗೆ 6 ರಿಂದ 14 ವಾರಗಳಲ್ಲಿ ಮೊದಲನೇ ಐಪಿವಿ ಡೋಸ್ ಮತ್ತು 14 ರಿಂದ 36 ವಾರಗಳಲ್ಲಿ ಎರಡನೇ ಐಪಿವಿ ಡೋಸ್ ನೀಡಲಾಗುತ್ತಿದೆ. ಇದೀಗ 2023 ರ ಜನವರಿ ಯಿಂದ ಎಲ್ಲ ಮಕ್ಕಳಿಗೆ 3ನೇ ಎಫ್‍ಐಪಿವಿ ಡೋಸ್ ನೀಡಲಾಗುವುದು. ಈ ಹೆಚ್ಚುವರಿ ಡೋಸ್‍ನ್ನು ಎಂಆರ್ ಲಸಿಕೆಯೊಂದಿಗೆ 9 ತಿಂಗಳಿಗೆ ನೀಡಲಾಗುವುದು.

ಇತರೆ ದೇಶಗಳಲ್ಲಿ ಕೋವಿಡ್ ಉಲ್ಬಣಗೊಳ್ಳುತ್ತಿದ್ದು, ತಾಲ್ಲೂಕಿನಲ್ಲಿಯೂ ಸಹ ಎಲ್ಲರೂ ಕೋವಿಡ್ ಮುನ್ನಚ್ಚರಿಕೆ ಕ್ರಮಗಳನ್ನು ಪಾಲಿಸುವುದರೊಂದಿಗೆ 3 ನೇ ಕೋವಿಡ್ ಲಸಿಕೆ ಪಡೆಯದವರು ಪಡೆಯಬೇಕು. ಹಾಗೂ ಶೀತ, ಕೆಮ್ಮು ಜ್ವರ ಹೀಗೆ ಕೋವಿಡ್ ಲಕ್ಷಣ ಇರುವವರು ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ತಿಳಿಸಿದರು.

ತಹಶೀಲ್ದಾರ್, ಕ್ಯಾಸನೂರ್ ಫಾರೆಸ್ಟ್ ಡಿಸೀಸ್(ಕೆಎಫ್‍ಡಿ) ಅಥವಾ ಮಂಗನ ಕಾಯಿಲೆ ಕುರಿತು, ತಾಲ್ಲೂಕಿನ ಅರಣ್ಯ ಭಾಗದಲ್ಲಿ ಎಚ್ಚರಿಕೆ ವಹಿಸಬೇಕು. ಉಣುಗು ನಿಯಂತ್ರಣವೇ ಮುಖ್ಯವಾಗಿದ್ದು ಇದಕ್ಕೆ ಸಂಬಂಧಿಸಿದ ಪಶುಪಾಲನೆ, ಅರಣ್ಯ, ಕಂದಾಯ ಮತ್ತು ಆರೋಗ್ಯ ಇಲಾಖೆಗಳು ಸಹಯೋಗದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.

ಎತ್ತಿನ ಓಟ/ಎತ್ತಿನ ಗಾಡಿ ಓಟವು ಒಂದು ಸಾಂಪ್ರದಾಯಿಕ ಕ್ರೀಡೆಯಾಗಿದ್ದು ಆಯೋಜಕರು ಕ್ರೀಡೆಯ 15 ದಿನಗಳ ಮೊದಲೇ ಸ್ಥಳೀಯ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು.

ಎತ್ತಿನ ಓಟ ನಡೆಸುವ ಗ್ರಾಮಗಳಲ್ಲಿ ಮೊದಲು ಗ್ರಾಮ ಪಂಚಾಯ್ತಿ ಮತ್ತು ಪಶುವೈದ್ಯರಿಂದ ಎನ್‍ಓಸಿ ಪಡೆದು ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಬೇಕು. ತಹಶೀಲ್ದಾರರಿಗೆ ಸಲ್ಲಿಸಿದ ಅರ್ಜಿಯನ್ನು ಅವರು ವಿವರವಾಗಿ ಪರಿಶೀಲಿಸಿ ಸೂಕ್ತ ಶಿಫಾರಸ್ಸಿನೊಂದಿಗೆ ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತಾರೆ. ಜಿಲ್ಲಾಧಿಕಾರಿಗಳು ಈ ಕ್ರೀಡೆಯಿಂದ ಆಗುವ ಸಾಧಕ ಬಾಧಕಗಳನ್ನು ಪರಿಶೀಲಿಸಿ ಅನುಮತಿ ನೀಡುವರು ಅಥವಾ ತಿರಸ್ಕರಿಸುವರು.

ತಾಲ್ಲೂಕಿನ ಆಯನೂರು ಮತ್ತು ಹಾರ್ನಹಳ್ಳಿಯಲ್ಲಿ ಮಾತ್ರ ಎತ್ತಿನ ಓಟ ಕ್ರೀಡೆಗಳು ಸಾಮಾನ್ಯವಾಗಿ ನಡೆಯಲಿದ್ದು ಅಲ್ಲಿ ಇಓ, ಪಶುಸಂಗೋಪನೆ, ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಷರತ್ತುಗಳಿಗೊಳಪಟ್ಟು ಎತ್ತಿನ ಓಟ ಕ್ರೀಡೆಯನ್ನು ನಡೆಸುವ ಸಂಬಂಧ ಪಶುವೈದ್ಯರು ಸರ್ಟಿಫಿಕೇಟ್ ನೀಡಬೇಕು. ಹಾಗೂ ಸುತ್ತೋಲೆಯನ್ವಯ 18 ಷರತ್ತುಗಳನ್ನು ಪರಿಪಾಲಿಸಬೇಕೆಂದು ಸೂಚನೆ ನೀಡಿದರು.

ಆರ್‍ಬಿಎಸ್‍ಕೆ ಕಾರ್ಯಕ್ರಮದಡಿ ತಾಲ್ಲೂಕಿನಲ್ಲಿ ಎರಡು ವೈದ್ಯರು/ಸಿಬ್ಬಂದಿಗಳ ತಂಡಗಳು ಅಂಗನವಾಡಿಗಳು ಮತ್ತು ಶಾಲಾ-ಕಾಲೇಜುಗಳಲ್ಲಿ ಮಕ್ಕಳನ್ನು ತಪಾಸಣೆ ನಡೆಸಿ ಸಮಸ್ಯೆ ಇದ್ದ ಮಕ್ಕಳನ್ನು ಜಿಲ್ಲಾಸ್ಪತ್ರೆಯಲ್ಲಿ ಇರುವ ಡಿಐಇಸಿ(ಡಿಸ್ಟ್ರಿಕ್ಟ್ ಅರ್ಲಿ ಇಂಟರ್‍ವೆನ್ಶನ್ ಸೆಂಟರ್)ಗೆ ರೆಫರ್ ಮಾಡಲಾಗುತ್ತಿದೆ ಎಂದು ಆರ್‍ಬಿಎಸ್‍ಕೆ ಕಾರ್ಯಕ್ರಮಾಧಿಕಾರಿ ತಿಳಿಸಿದರು.

ರಾಷ್ಟ್ರೀಯ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಂಯೋಜಕ ಹೇಮಂತರಾಜ ಅರಸ್ ಮಾತನಾಡಿ, ಕೋಟ್ಪಾ ಕಾಯ್ದೆಯಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಪ್ರಸಕ್ತ ಸಾಲಿನಲ್ಲಿ ಒಟ್ಟು 106 ಪ್ರಕರಣ ದಾಖಲಿಸಿ ರೂ.18150 ದಂಡ ಸಂಗ್ರಹಿಸಲಾಗಿದೆ. ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನ ಕಾಯ್ದೆ(ಕೋಟ್ಪಾ) ಹಾಗೂ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಕುರಿತು ತಾಲ್ಲೂಕಿನ 22 ಶಾಲೆಗಳಲ್ಲಿ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸರ್ಕಾರ ಇತ್ತೀಚೆಗೆ ಗೆಜೆಟ್ ಒಂದನ್ನು ಪಾಸ್ ಮಾಡಿದ್ದು ಅದರನ್ವಯ ಡಿಸೆಂಬರ್ ಮಾಹೆಯಿಂದ ತಂಬಾಕು ಉತ್ಪನ್ನ ಮಾರಾಟ ಮಾಡುವವರು ನಗರ ಸ್ಥಳೀಯ ಸಂಸ್ಥೆಗಳಿಂದ ಪರವಾನಗಿಯನ್ನು ಪಡೆಯಬೇಕೆಂದು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ ಯಲಿ, ಸಹಾಯಕ ನಿರ್ದೇಶಕ ಡಾ.ನಟರಾಜ್, ತಾಲ್ಲೂಕಿನ ಪಶುವೈದ್ಯರು, ತಾಲ್ಲೂಕು ಆರೋಗ್ಯ ಶಿಕ್ಷಣ ಅಧಿಕಾರಿ, ತಾಲ್ಲೂಕು ಮಟ್ಟದ ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು