News Karnataka Kannada
Monday, April 29 2024
ಚಿಕಮಗಳೂರು

ಅಭಯಾರಣ್ಯ ವನ್ಯಪ್ರಾಣಿಗಳ ಆವಾಸ ಸ್ಥಾನವೇ ಹೊರತು ಮನುಷ್ಯರ ಮೋಜು-ಮಸ್ತಿಯ ತಾಣವಲ್ಲ

bhadra sanctuary
Photo Credit : News Kannada

ಚಿಕ್ಕಮಗಳೂರು: ವನ್ಯಪ್ರಾಣಿ-ಪಕ್ಷಿಗಳ ಆವಾಸ ಸ್ಥಾನದಲ್ಲಿ ಕಟ್ಟಡಗಳಿಗೇನು ಕೆಲಸ? ಈ ಪ್ರಶ್ನೆ ಜಿಲ್ಲೆಯ ಹೆಮ್ಮೆಯ ಭದಾ ಅಭಯಾರಣ್ಯವನ್ನು ಹೊಕ್ಕಾಗ ಕಾಡುತ್ತದೆ. ಅಭಯಾರಣ್ಯಗಳಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸಲು ನಿರ್ಬಂಧವಿದೆ. ಕಾನೂನು ಸಹ ಅದನ್ನು ಒಪ್ಪುವುದಿಲ್ಲ. ಆದರೆ ಭದ್ರಾ ಅಭಯಾರಣ್ಯಕ್ಕೆ ಭೇಟಿ ಕೊಟ್ಟಾಗ ಹಲವು ಕಟ್ಟಡಗಳು ನಮ್ಮನ್ನು ಎದುರುಗೊಂಡು ಹಸಿರಿನ ಮಧ್ಯದಲ್ಲಿ ಕಪ್ಪು ಚುಕ್ಕೆಗಳಂತೆ ಕಾಣುತ್ತವೆ.
ಅಭಯಾರಣ್ಯದಲ್ಲಿ ಈ ನಿರ್ಬಂಧಗಳನ್ನು ಕಡೆಗಣಿಸಿ ವನ್ಯಜೀವಿ ಸಂರಕ್ಷಣೆಯ ಹೊಣೆ ಹೊತ್ತ ಅಧಿಕಾರಿಗಳೇ ಹಲವು ರೀತಿಯ ಕಟ್ಟಡ ನಿರ್ಮಾಣಕ್ಕೆ ಹಾಗೂ ಕಾಮಗಾರಿಗೆ ಮುಂದಾಗಿದ್ದಾರೆ.

ರಾಷ್ಟ್ರೀಯ ವನ್ಯಜೀವಿ ನೀತಿ ಅನುಸಾರ ಪ್ರವಾಸಿಗರಿಗೆ ಯಾವುದೇ ರೀತಿಯ ಸೌಲಭ್ಯವನ್ನು ಅಭಯಾರಣ್ಯದ ಹೊರ ಭಾಗದಲ್ಲಿ ನೀಡಲು ಅವಕಾಶವಿದೆ ಎಂಬ ಮಾರ್ಗದರ್ಶಿ ಸೂತ್ರವಿದೆ. ಅದರಂತೆ 2008 ರಲ್ಲೇ ಅಭಯಾರಣ್ಯದೊಳಗಿನ ಪ್ರಕೃತಿ ಶಿಬಿರದಲ್ಲಿ ವಿಸ್ತೃತ ಕಟ್ಟಡ ನಿರ್ಮಾಣಕ್ಕೆ ಮುಂದಾದಾಗ ಪರಿಸರಾಸಕ್ತರು ಅದನ್ನು ವಿರೋಧಿಸಿ ನ್ಯಾಯಾಲಯದ ಮೊರೆ ಹೋಗಿದ್ದು, 2018 ರಲ್ಲಿ ನ್ಯಾಯಾಲಯ ಯಾವುದೇ ಕಟ್ಟಡವನ್ನು ಅಭಯಾರಣ್ಯದೊಳಗೆ ನಿರ್ಮಿಸಬಾರದು. ಈಗಿರುವ ಕಟ್ಟಡಗಳನ್ನು ತೆರವುಗೊಳಿಸಿ ಹೊರ ಭಾಗದಲ್ಲಿ ನಿರ್ಮಿಸಲು ಸೂಚಿಸಿತ್ತು.

bhadra sanctuary

ಅಭಯಾರಣ್ಯದಲ್ಲಿ ಸಿಬ್ಬಂದಿಗಳ ವಸತಿಗೃಹಗಳನ್ನು ಅಭಯಾರಣ್ಯದ ಅಂಚಿನಲ್ಲಿ ನಿರ್ಮಿಸುವ ಬದಲು ಒಳಭಾಗದಲ್ಲೇ ನಿರ್ಮಿಸುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲಾಯಿತು. ಅದಕ್ಕೆ ಆಕ್ಷೇಪವ್ಯಕ್ತವಾದರೂ ಸಹ ಅದನ್ನು ಕಡೆಗಣಿಸಿ ಇತ್ತೀಚೆಗೆ ಪ್ರಕೃತಿ ಶಿಬಿರದೊಳಗೆ ತರಬೇತಿ ಸಭಾಂಗಣವನ್ನು ವಿಸ್ತಾರವಾಗಿ ನಿರ್ಮಿಸಲಾಗಿದೆ. ಇದಕ್ಕೂ ಸಹ ಪರಿಸರಾಸಕ್ತರು ಆಕ್ಷೇಪ ವ್ಯಕ್ತಪಡಿಸಿದ್ದನ್ನು ಇಲಾಖೆಯ ಅಧಿಕಾರಿಗಳು ಉಪೇಕ್ಷಿಸಿದ್ದಾರಲ್ಲದೆ, ತಾವು ನ್ಯಾಯಾಲಯದ ಆದೇಶ ಉಲ್ಲಂಘಿಸುತ್ತಿರುವುದನ್ನು ಪರಿಗಣಿಸಿಲ್ಲ.

ಭದ್ರಾ ಅಭಯಾರಣ್ಯ 1998 ರಲ್ಲಿ ಕೇಂದ್ರ ಸರ್ಕಾರ ಹುಲಿ ಯೋಜನಾ ಪ್ರದೇಶವೆಂದು ಘೋಷಿಸಿದ್ದು, ಈ ಪ್ರದೇಶಗಳು ಅತ್ಯಂತ ಪರಿಸರ ಸೂಕ್ಷ್ಮ ಪ್ರದೇಶಗಳೆಂದು 2007 ರಲ್ಲೇಗುರುತಿಸಲಾಗಿದೆ. ಇದರ ಅರಿವಿದ್ದೂ ಇಲಾಖೆ ಪೂರ್ಣವಾಗಿ ಈ ಅಭಯಾರಣ್ಯ ಅತ್ಯಂತ ಸೂಕ್ಷ್ಮ ಪ್ರದೇಶವೆಂಬುದನ್ನು ಕಡೆಗಣಿಸಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಇಲಾಖೆಯ ಅನ್ಯಾಸಕ್ತಿ ಸೂಚಕವೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಇದೇ ರೀತಿ ಕೆಮ್ಮಣ್ಣುಗುಂಡಿ ಪ್ರದೇಶ ಸಹ ಅಭಯಾರಣ್ಯದ ಭಾಗವಾಗಿದ್ದು ಅಲ್ಲೂ ಸಹ ಕೆಫೆಟೇರಿಯ ಸೇರಿದಂತೆ ಹಲವು ಕಟ್ಟಡಗಳು ತಲೆಎತ್ತಿವೆ.

ಲಕ್ಕವಳ್ಳಿಯ ಸುಖಾಲಟ್ಟಿಯಲ್ಲಿ ಕಾಡಿನ ಮಧ್ಯದಲ್ಲೇ ಸಾರ್ವಜನಿಕ ಶೌಚಾಲಯ ನಿರ್ಮಿಸಿ ಇಲಾಖೆ ತನ್ನ ವಿಪರೀತ ಅಜ್ಞಾನವನ್ನು ಪ್ರದರ್ಶಿಸಿದೆ ಎಂಬ ಟೀಕೆಗೆ ಒಳಗಾಗಿದೆ. ಶೌಚಾಲಯಗಳನ್ನು ಅರಣ್ಯದ ಅಂಚಿನಲ್ಲಿ ಅಥವಾ ಪ್ರವೇಶದ್ವಾರದ ಬಳಿ ನಿರ್ಮಿಸಬೇಕೆಂಬ ಸಾಮಾನ್ಯ ತಿಳುವಳಿಕೆಯನ್ನು ಮರೆತಂತಿದೆ. ಅಭಯಾರಣ್ಯದಲ್ಲಿ ಹೆಚ್ಚು ಒತ್ತು ಹಾಗೂ ಆದ್ಯತೆಯನ್ನು ವನ್ಯಪ್ರಾಣಿಗಳ ರಕ್ಷಣೆಗೆ ನೀಡಬೇಕು. ಅರಣ್ಯದೊಳಗೆ ಅನವಶ್ಯಕ ರಸ್ತೆ ನಿರ್ಮಾಣ, ಮಳೆ ನೀರು ಹೋಗಲು ಚರಂಡಿ ನಿರ್ಮಿಸುವುದು, ಸಿಕ್ಕ ಸಿಕ್ಕಲ್ಲಿ ಸಾಲ್ಟ್‌ಲಿಕ್‌ಗಳನ್ನು, ಜೊತೆಗೆ ಕೆರೆ ನಿರ್ಮಿ ಸುವುದು ಅವ್ಯಾಹತವಾಗಿ ನಡೆದಿದೆ. ಅಭಯಾರಣ್ಯದಲ್ಲಿ ಪ್ರಾಣಿಗಳ ರಕ್ಷಣೆಗೆ ಅತ್ಯಂತ ಅವಶ್ಯಕವಾದ ಕಾವಲು ಸಿಬ್ಬಂದಿ ಹಾಗೂ ಅರಣ್ಯದೊಳಗೆ ಓಡಾಡುವ ಸಿಬ್ಬಂದಿಗಳಿಗೆ ಅಗತ್ಯವಾದ ಅವಶ್ಯಕ ಸೌಲಭ್ಯಗಳನ್ನು ಮೊದಲು ನೀಡಬೇಕು.

ಸೂಕ್ತ ಸಮಯದಲ್ಲಿ ಕ್ಲುಪ್ತವಾಗಿ ಅವರಿಗೆ ಸಂಬಳ ಹಾಗೂ ಇನ್ನಿತರ ಭತ್ಯೆ ನೀಡಲು ಮುಂದಾಗದೆ ಕೇವಲ ಕಟ್ಟಡಗಳ ನಿರ್ಮಾಣ ಹಾಗೂ ಕಾಮಗಾರಿಗಳಿಗೆ ಹೆಚ್ಚಿನ ಗಮನ ಹರಿಸುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಾಚರ್‌ಗಳು ಕೆಲಸ ಬಿಟ್ಟು ಹೋಗುತ್ತಿದ್ದಾರೆ. ಇದರಿಂದ ಅರಣ್ಯ ರಕ್ಷಣೆ ಮಂಕಾಗುತ್ತಿದ್ದು, ಬೇಸಿಗೆಯಲ್ಲಿ ಬೆಂಕಿ ಅನಾಹುತ ನಿಯಂತ್ರಣ ಕ್ಷೀಣಗೊಂಡಿದೆ. ಇದರ ಲಾಭವನ್ನು ಕಳ್ಳಬೇಟೆಗಾರರು ಉಪಯೋಗಿಸಿಕೊಳ್ಳುವ ಅಪಾಯವೂ ಎದುರಾಗಿದೆ.

ಅಭಯಾರಣ್ಯಕ್ಕೆ ಒತ್ತಾಗಿರುವ ಭದ್ರಾ ಹಿನ್ನೀರಿನಲ್ಲಿ ಅನಿಯಂತ್ರಿತ ಮೀನುಗಾರಿಕೆ ನಡೆಯುತ್ತಿದ್ದು, ಮೀನುಗಾರರರಲ್ಲಿ ಹಲವರು ಯಾಂತ್ರಿಕ ದೋಣಿಗಳನ್ನು ಅಕ್ರಮವಾಗಿ ಬಳಸುತ್ತಿದ್ದರೂ ಇಲಾಖೆ ಕಂಡೂ ಕಾಣದಂತಿದೆ. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಒಮ್ಮೆ ಸ್ವತಃ ಬಂದು ಇಲ್ಲಿರುವ ಲೋಪಗಳನ್ನು ಹಾಗೂ ಕಾನೂನು ಮೀರಿಆಗಿರುವ ಕಾಮಗಾರಿಗಳನ್ನು ಪರಿಶೀಲಿಸಬೇಕು. ಸುಖಾಲಟ್ಟಿ ಮತ್ತು ಕೆಸವೆಯಲ್ಲಿರುವ ಆಂಗ್ಲರ ಕಾಲದ ನಿರೀಕ್ಷಣಾ ಮಂದಿರಗಳನ್ನು ತಕ್ಷಣಕೆಡವಿ ಸಿಬ್ಬಂದಿಗಳಿಗೆ ಸೂಕ್ತ ಕಟ್ಟಡಗಳನ್ನು ಅಭಯಾರಣ್ಯದ ಅಂಚಿನಲ್ಲಿ ನಿರ್ಮಿಸಿ ನೀಡಲು ಮುಂದಾಗಬೇಕು. ಅಭಯಾರಣ್ಯ ವನ್ಯಪ್ರಾಣಿಗಳ ಆವಾಸ ಸ್ಥಾನವೇ ಹೊರತು ಮನುಷ್ಯರ ಮೋಜು-ಮಸ್ತಿಯ ತಾಣವಲ್ಲ.

ಅಲ್ಲಿಎಲ್ಲಾರೀತಿಯಸೌಲಭ್ಯಗಳನ್ನು ಅಪೇಕ್ಷಿಸುವುದು ಹಾಗೂ ನೀಡುವುದು ಸಮಂಜಸವಲ್ಲ ಮತ್ತು ಕಾನೂನು ಸಹ ಇದನ್ನುಒಪ್ಪುವುದಿಲ್ಲ ಎಂದು ಭದ್ರಾ ವೈಲ್ಡ್‌ಲೈಫ್‌ ಕನ್ಸರ್ವೇಶನ್‌ಟ್ರಸ್ಟ್‌ನ  ಡಿ.ವಿ.ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ, ಶ್ರೀದೇವ್ ಹುಲಿಕೆರೆ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಅರಣ್ಯ ಇಲಾಖೆ ಅವೈಜ್ಞಾನಿಕ ಕ್ರಮ ಖಂಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು