ಚಿಕ್ಕಮಗಳೂರು: ರಾಜ್ಯ ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯದ ಶೇ.೪ ಮೀಸಲಾತಿಯನ್ನು ರದ್ದುಪಡಿಸಿರುವುದನ್ನು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮಹಮದ್ ನಯಾಜ್ ಖಂಡಿಸಿದ್ದಾರೆ.
ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿ, ಚುನಾವಣಾ ಹೊಸ್ತಿಲಲ್ಲಿ ಬಿಜೆಪಿ ಸರ್ಕಾರದ ಅವೈಜ್ಞಾನಿಕ ಮತ್ತು ಸಂವಿಧಾನಕ್ಕೆ ಪೂರಕವಲ್ಲದ ಮೀಸಲಾತಿಯ ನಿರ್ಧಾರವು ರಾಜಕೀಯ ಪ್ರೇರಿತವಾಗಿದ್ದು, ಇದು ಬಿಜೆಪಿ ಮತ್ತು ಆರ್ಎಸ್ಎಸ್ನ ಹಿಡನ್ ಅಜೆಂಡಾದ ಒಂದು ಭಾಗವಾಗಿದೆ ಎಂದು ಹೇಳಿದ್ದಾರೆ.
ಮುಸ್ಲಿಂರಿಗೆ ಇದ್ದ ಶೇ.೪% ಮೀಸಲಾತಿಯನ್ನು ದುರುದ್ದೇಶದಿಂದ ರದ್ದುಗೊಳಿಸಿರುವುದು ಆ ಸಮುದಾಯಗಳ ಅಭಿವೃದ್ಧಿಗೆ ಮಾರಕವಾದಂತಹ ರಾಜಕೀಯ ದುರ್ನಡೆ ಮೀಸಲಾತಿ ಪರಿಷ್ಕರಿಸಲು ಸರ್ಕಾರದ ಬಳಿ ಯಾವ ವಿಶ್ವಾಸರ್ಹ ಮಾಹಿತಿ ಇದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ, ಹರಿಯಾಣ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಮೀಸಲಾತಿ ಪರಿಷ್ಕರಣೆಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ರಾಜ್ಯದ ಪರಿಷ್ಕೃತ ಮೀಸಲಾತಿ ನೀತಿಗೂ ಅದೇ ಗತಿ ಆಗಲಿದೆ. ಕಾಂಗ್ರೆಸ್ ಸದಾ ಸಾಮಾಜಿಕ ನ್ಯಾಯದ ಪರ ಇರುವ ಪಕ್ಷವಾಗಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಯಾವುದೇ ಜಾತಿ, ಧರ್ಮ, ಲಿಂಗದ ಜನರಿಗೆ ತಾರತಮ್ಯ ಮಾಡದೇ ರಕ್ಷಣೆ ಸಿಗಬೇಕು ಎಂದು ಪ್ರತಿಪಾದಿಸುವುದು ಕಾಂಗ್ರೆಸ್. ಎಲ್ಲಾ ಕಾಲದಲ್ಲೂ ಮೀಸಲಾತಿ ನೀಡಿದವರು, ಅವಕಾಶ ವಂಚಿತರಿಗೆ, ಮೀಸಲಾತಿ ಕಲ್ಪಿಸಲು ಸಂವಿಧಾನ ತಿದ್ದುಪಡಿ ಮಾಡಿದವರು ಕಾಂಗ್ರೆಸ್ ಎಂದಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ನಿಡಿದಾಗ ಅದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿ ಸ್ವತಃ ರಾಮಾ ಜೋಯಿಸ್ ಅವರೇ ವಾದ ಮಾಡಿದ್ದರು ಆಗ ಯಡಿಯೂರಪ್ಪ ಮತ್ತು ಈಶ್ವರಪ್ಪ ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಎಂದಿಗೂ ಸಾಮಾಜಿಕ ನ್ಯಾಯದ ಪರವಾಗಿ ಇಲ್ಲ. ಮಂಡಲ್ ಕಮಿಷನ್ ವರದಿ, ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡುವುದನ್ನು ವಿರೋಧ ಮಾಡಿದ್ದು ಬಿಜೆಪಿ. ಸಂವಿಧಾನಕ್ಕೆ ೭೩ ಹಾಗೂ ೭೪ ನೇ ತಿದ್ದುಪಡಿ ತಂದಾಗ ಅದನ್ನು ವಿರೋಧಿಸಿ ಬಿಜೆಪಿ ರಾಜ್ಯಸಭಾ ಸದಸ್ಯ ರಾಮಾ ಜೋಯಿಸ್ ಅವರು ಸುಪ್ರೀಂ ಕೋರ್ಟ್ಗೆ ಹೋಗಿದ್ದರು ಎಂದು ಹೇಳಿದ್ದಾರೆ.
ಮೀಸಲಾತಿ ಪ್ರಮಾಣ ಹೆಚ್ಚಳದ ಬಗ್ಗೆ ರಾಜ್ಯ ಸರ್ಕಾರವೇ ತೀರ್ಮಾನ ಕೈಗೊಂಡರೆ ಅದು ಇಂದಿರಾ ಸಹಾನಿ ಪ್ರಕರಣದ ತೀರ್ಪಿನ ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿದ್ದಾರೆ.