ಮುಳಬಾಗಿಲು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳಿಂದ ವಸೂಲಿ ಮಾಡಿ ಸಂಗ್ರಹಿಸಲಾಗಿದ್ದ ₹5 ಲಕ್ಷ ಹಣವನ್ನು ಹಾಡಹಗಲೇ ಕಳ್ಳರು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮಂಗಳವಾರ ಮುಳಬಾಗಿಲು ನಗರದ ಶಾಮೀರ್ ಮೊಹಲ್ಲಾದ ಸಂಘದ ಕಚೇರಿಯಲ್ಲಿ ನಡೆದಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳು ಪಡೆದಿದ್ದ ಸಾಲದ ಹಣವನ್ನು ವಾರದ ಕಂತಿನಲ್ಲಿ ವಸೂಲಿ ಮಾಡಿ ಸಂಘದ ಅಧಿಕಾರಿ ಶಶಿಕಲಾ ಸಂಗ್ರಹಿಸಿ, ಮುಖ್ಯ ಕಚೇರಿಗೆ ಸಾಗಿಸಲು ತಯಾರು ಮಾಡಿಕೊಳ್ಳುತ್ತಿದ್ದರು. ಆ ವೇಳೆ ಇಬ್ಬರು ಅಪರಿಚಿತರು ಕಚೇರಿಗೆ ನುಗ್ಗಿ ಶಶಿಕಲಾ ಅವರ ಕಣ್ಣುಗಳಿಗೆ ಖಾರದ ಪುಡಿ ಎರಚಿ, ಚಾಕು ತೋರಿಸಿ ₹5 ಲಕ್ಷ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಈ ಸಂಬಂಧ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಎಎಸ್‌ಪಿ ಮನಿಷಾ ಮನೋಹಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು. ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.