ಸುಂಟಿಕೊಪ್ಪ: ವಿಶ್ವ ಆನೆ ದಿನಾಚರಣೆಯಂದೇ ಕೊಡಗು ಜಿಲ್ಲೆಯಲ್ಲಿ ಗರ್ಭಿಣಿ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಸುಂಟಿಕೊಪ್ಪ ಸಮೀಪದ ಅಂದಗೋವೆಯ ದಾಸಂಡ ಕಿರಣ್ ಅವರ ಕಾಫಿ ತೋಟದಲ್ಲಿ ಕಾಡಾನೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಆಹಾರ ಅರಸಿ ಕಾಡಿನಿಂದ ಕಾಫಿ ತೋಟಕ್ಕೆ ಬಂದಿದ್ದ ಹೆಣ್ಣಾನೆ ಪ್ರಸವದ ಹಂತದಲ್ಲಿತ್ತು ಎನ್ನಲಾಗಿದೆ. ಪ್ರಸವದ ವೇಳೆ ಉಂಟಾದ ತೊಂದರೆಯಿಂದಾಗಿ ಆನೆ ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಾಥಮಿಕವಾಗಿ ಶಂಕಿಸಿದ್ದಾರೆ. ಆನೆ ಮೃತಪಟ್ಟಿರುವುದು ಸುಮಾರು ಮೂರು ದಿನಗಳ ಹಿಂದೆಯೇ ಇರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಸೋಮವಾರಪೇಟೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್, ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್ ಸೇರಿದಂತೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಶುವೈದ್ಯ ಡಾ. ಮುಜಿಬು ಅವರ ಸಮ್ಮುಖದಲ್ಲಿ ಕಾಡಾನೆಯ ಮರಣೋತ್ತರ ವೈದ್ಯಕೀಯ ಪ್ರಕ್ರಿಯೆ ನಡೆಸಲಾಗಿದ್ದು, ಬಳಿಕ ಅರಣ್ಯಾಧಿಕಾರಿಗಳು ಮಹಜರ್ ದಾಖಲಿಸಿಕೊಂಡರು.