ಮಡಿಕೇರಿ : ಮಡಿಕೇರಿಯಲ್ಲಿ ಪ್ರವಾಸಿಗರು ಎಲ್ಲಂದರಲ್ಲಿ ಪ್ಲಾಸ್ಟಿಕ್ ಬಾಟಲ್ ಗಳನ್ನು ಎಸೆದು ಹೋಗುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಹೊಸ ರೂಲ್ಸ್ ವೊಂದನ್ನು ಜಾರಿಗೊಳಿಸಲಾಗಿದೆ.

ಮಡಿಕೇರಿಯಲ್ಲಿ ಸದ್ಯ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ, ಹೀಗಾಗಿ ಸಾವಿರಾರು ಕೆಜಿಗಳಷ್ಟು ಪ್ಲಾಸ್ಟಿಕ್ ಬಾಟಲ್ ಗಳು ಸಂಗ್ರಹಿಸಿ ಬೆಟ್ಟದಿಂದ ಡಂಪ್ ಮಾಡಲಾಗುತ್ತಿದೆ. ಆದರೆ ಇದೀಗ ಟನ್ ಗಟ್ಟಲೆ ಪ್ಲಾಸ್ಟಿಕ್ ಬಾಟಲ್ ಗಳು ಸಂಗ್ರಹವಾಗಿದೆ. ಇದೀಗ ಈ ಸಮಸ್ಯೆಯಿಂದ ಹೊರಬರಲು ಮಡಿಕೇರಿ ನಗರಸಭೆ ಪ್ಲಾಸ್ಟಿಕ್ ಬಾಟಲ್ ಗಳನ್ನು ನಿಷೇಧಿಸಿದೆ.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಗರದ ವರ್ತಕರು, ಹೋಮ್ ಸ್ಟೇ ರೆಸಾರ್ಟ್ ಮಾಲೀಕರು ಹಾಗೂ ಕಲ್ಯಾಣ ಮಂಟಪಗಳ ಜೊತೆ ನಗರಸಭೆ ಮೀಟಿಂಗ್ ನಡೆಸಿದ್ದು, ಮಡಿಕೇರಿಯನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ನಗರದ ಮೂರು ಕಡೆ ಜಲ ಶುದ್ಧೀಕರಣ ಘಟಕ ಇದ್ದು, ಅಲ್ಲಿ ಒಂದು ರೂಪಾಯಿ ಹಾಗೂ ಐದು ರೂಪಾಯಿ ನೀಡಿ ಕುಡಿಯಲು ಬೇಕಾದಷ್ಟು ನೀರು ಸಿಗುತ್ತದೆ ಅದನ್ನೇ ಬಳಸಿ ಎಂದು ತಿಳಿಸಿದೆ.

ಈಗಾಗಲೇ ಅಂಗಡಿ ಮುಂಗಟ್ಟುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಬಾಟಲ್ ಗಳು ಸ್ಟಾಕ್ ಇದ್ದು, ಕೇವಲ ಅವುಗಳ ಮಾರಾಟಕ್ಕೆ ಅವಕಾಶವನ್ನು ನೀಡಲಾಗಿದೆ. ಹಾಗೂ ಹೊಸ ಬಾಟಲಿಗಳ ಖರೀದಿ ಮಾಡದಂತೆ ಸೂಚಿಸಲಾಗಿದೆ. ಇನ್ನು ಎರಡು ತಿಂಗಳವರೆಗೆ ಪ್ರವಾಸಿಗರು ಗ್ರಾಹಕರು ವರ್ತಕರಿಗೆ ಅರಿವು ಮೂಡಿಸಲು ಸಮಯಾವಕಾಶ ನೀಡಲಾಗಿದ್ದು ಅದಾದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ.