ಮಡಿಕೇರಿ: ಸಾಮಾಜಿಕ ಜಾಲ ತಾಣಗಳಲ್ಲಿ ವಿಕೃತಿ ಮೆರೆಯುವವರಿಗೆ ಪಾಠವಾಗಬೇಕಾಗಿದೆ. ಕಂಡೋರ ಮನೆ ಹೆಣ್ಣು ಮಕ್ಕಳ ಫೋಟೋಗಳಿಗೆ ಅಶ್ಲೀಲ ಕಾಮೆಂಟ್ ಮಾಡುವವರಿಗೆ ತಕ್ಕ ಶಿಕ್ಷೆಯಾದರೆ ಅದನ್ನು ನೋಡಿ ಇತರರು ಬುದ್ದಿ ಕಲಿತುಕೊಳ್ಳುತ್ತಾರೆ.
ಸಾಮಾಜಿಕ ಜಾಲ ತಾಣಗಳನ್ನು ಸದುದ್ದೇಶಕ್ಕೆ ಬಳಸಿದರೆ ಅದರಿಂದ ಯಾವುದೇ ತೊಂದರೆಯಾಗಲಾರದು ಅದನ್ನು ಹೊರತು ಪಡಿಸಿ ವಿಕೃತಿ ಮೆರೆದರೆ ಅದಕ್ಕೆ ತಕ್ಕ ಕ್ರಮವಾಗಲೇ ಬೇಕಾಗುತ್ತದೆ.
ಈ ನಡುವೆ ಕೊಡಗಿನ ಮಹಿಳೆಯೊಬ್ಬರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಫೋಟೋ ವ್ಯಕ್ತಿಯೊಬ್ಬ ಕೆಟ್ಟದಾಗಿ ಕಾಮೆಂಟ್ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಮಹಿಳೆಯೊಬ್ಬರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಫೋಟೋವೊಂದನ್ನು ಅಪ್ ಲೋಡ್ ಮಾಡಿದ್ದರು.
ಈ ಫೋಟೋಗೆ ಬೆಳಗಾವಿ ಜಿಎಂಜಿ ಎಂಬ ಫೇಸ್‌ಬುಕ್ ಖಾತೆದಾರ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದನು. ಇದರಿಂದ ಆಕ್ರೋಶಗೊಂಡ ಮಹಿಳೆ ದೂರು ನೀಡಿದ ಹಿನ್ನಲೆಯಲ್ಲಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.
ತನಿಖೆ ಕೈಗೊಂಡ ಸೆನ್ ಪೊಲೀಸ್ ಠಾಣೆಯ ಡಿಎಸ್ ಪಿ ರವಿ, ಪಿಎಸ್ ಐ ರವೀಂದ್ರ ಮತ್ತು ಸಿಬ್ಬಂದಿ ಪತ್ತೆ ಕಾರ್ಯ ನಡೆಸಿದ್ದು ತನಿಖೆ ವೇಳೆ ಬೆಳಗಾವಿ ಜಿಎಂಜಿ ಎಂಬ ಖಾತೆಯನ್ನು ನಿರ್ವಹಿಸುತ್ತಿರುವ ವ್ಯಕ್ತಿ ಬೆಳಗಾವಿಯವನಾಗಿದ್ದು, ಆತನ ಹಿನ್ನಲೆ ಜಾಲಾಡಿದಾಗ ಈತ ಗಂಗಾಧರ ಜಮಾದಾರಕನಿ(22) ಎಂಬುದು ಪತ್ತೆಯಾಗಿದೆ. ಈತ ಮೂಲತಃ ಬೆಳಗಾವಿ ಜಿಲ್ಲೆ ಕಿತ್ತೂರು ನಿವಾಸಿಯಾಗಿದ್ದು, ಈತನನ್ನು ಬೆಳೆಗಾವಿಯಲ್ಲಿ ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇನ್ನಾದರೂ ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರು ಮತ್ತು ಮಹಿಳೆಯರ ಭಾವಚಿತ್ರಗಳಿಗೆ ಅಶ್ಲೀಲ ಕಾಮೆಂಟ್ ಮಾಡುವವರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳಬೇಕಿದೆ. ಹಾಗೆಯೇ ಯುವತಿಯರು, ಮಹಿಳೆಯರು ಇಂತಹ ವಿಕೃತ ಮನಸ್ಸಿನವರನ್ನು ತಮ್ಮ ಖಾತೆಯಿಂದ ದೂರವಿಡಬೇಕಲ್ಲದೆ, ಅಶ್ಲೀಲ ಸಂದೇಶ ಕಳುಹಿಸುವುದು, ಕಾಮೆಂಟ್ ಮಾಡುವುದು ಮಾಡಿದರೆ ಅಂತಹವರ ವಿರುದ್ಧ ದೂರು ನೀಡುವುದು ಒಳ್ಳೆಯದು.

