ಮಡಿಕೇರಿ: ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್ ತಿಮ್ಮಯ್ಯ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಮಾನ ಮಾಡಿದ ವ್ಯಕ್ತಿಯ ಗಡಿಪಾರಿಗೆ ಆಗ್ರಹಿಸಿ ಕೊಡಗು ಸರ್ವ ಜನಾಂಗಗಳ ಒಕ್ಕೂಟ ಕರೆ ನೀಡಿದ್ದ ಅರ್ಧ ದಿನದ ಕೊಡಗು ಬಂದ್ ಗೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು, ಖಾಸಗಿ ಬಸ್ ಗಳು, ಆಟೋ ಇನ್ನಿತರ ವಾಹನಗಳು ರಸ್ತೆಗಿಳಿಯಲಿಲ್ಲ. ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ಸೂಚಿಸಿದ್ದರು.
ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆ ತನಕ ಕೊಡಗು ಬಂದ್ ಮಾಡುವಂತೆ ಕೊಡಗು ಸರ್ವ ಜನಾಂಗಗಳ ಒಕ್ಕೂಟ ಕರೆ ನೀಡಿತ್ತು. ಇದಕ್ಕೆ ಕೊಡಗಿನಾದ್ಯಂತ ಎಲ್ಲ ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಕೊಡಗಿನ ಮುಖ್ಯಪಟ್ಟಣ, ವೀರಾಜಪೇಟೆ. ಕುಶಾಲನಗರ, ಗೋಣಿಕೊಪ್ಪ, ಸೋಮವಾರಪೇಟೆ ಕುಟ್ಟ, ಕೊಡ್ಲಿಪೇಟೆ ಹೀಗೆ ಇಡೀ ಜಿಲ್ಲೆ ಬಂದ್ ಗೆ ಸ್ಪಂದನೆ ನೀಡಿತ್ತಲ್ಲದೆ, ವೀರಸೇನಾನಿಗಳಿಗೆ ಅಪಮಾನ ಮಾಡಿದ್ದನ್ನು ಖಂಡಿಸಿದ್ದಾರೆ.
ಸಮುದಾಯಗಳ ನಡುವೆ ಬಿರುಕು ಮೂಡಿಸುವ ಕೃತ್ಯವನ್ನು ಯಾರೇ ಎಸಗಿದರೂ ಅದನ್ನು ಖಂಡಿಸುವ ಮತ್ತು ಅಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಒತ್ತಾಯವನ್ನು ಬಂದ್ ಮೂಲಕ ಮಾಡಲಾಗಿದೆ. ಕೊಡಗಿನ ಹೆಬ್ಬಾಗಿಲು ಎಂದೇ ಕರೆಯುವ ಕುಶಾಲನಗರದಲ್ಲಿ ವರ್ತಕರು ತಮ್ಮ ಅಂಗಡಿಯನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಇಲ್ಲಿನ ನಿಸರ್ಗಧಾಮದ ವಾಣಿಜ್ಯ ಮಾಳಿಗೆಗಳು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ನಿಸರ್ಗಧಾಮದ ಮುಂಭಾಗದ ವಾಣಿಜ್ಯ ಕೇಂದ್ರ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮಡಿಕೇರಿಯಲ್ಲಿಯೂ ಉತ್ತಮ ಪ್ರತಿಕ್ರಿಯೆ ಕಂಡು ಬಂದಿತು. ಖಾಸಗಿ ಬಸ್ ರಸ್ತೆಗಿಳಿಯಲಿಲ್ಲ. ಅಗತ್ಯ ಸೇವೆಗಳು ಎಂದಿನಂತೆ ಇದ್ದವು. ಕೊಡಗು ಜಿಲ್ಲೆಯಾದ್ಯಂತ ಕೊಡ್ಲಿಪೇಟೆಯಿಂದ ಕುಟ್ಟದವರೆಗೆ ಎಲ್ಲ ಕಡೆಯಲ್ಲಿಯೂ ಬೆಂಬಲ ವ್ಯಕ್ತವಾಗಿದೆ ಜನಸಂಚಾರವೂ ಕೂಡ ವಿರಳವಾಗಿತ್ತು. . ಬಹುತೇಕ ಕಡೆ ಆಟೋಗಳ ಓಡಾಟವೂ ಇರಲಿಲ್ಲ. ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ರವರಿಗೆ ಅಪಮಾನ ಮಾಡಿದ ವ್ಯಕ್ತಿಯನ್ನು ಗಡಿಪಾರು ಮಾಡುವಂತೆ ಒತ್ತಾಯಿಸುತ್ತಿದ್ದ ದೃಶ್ಯವೂ ಕಂಡು ಬಂದಿತ್ತು.
ಕೊಡಗು ಹಾಸನ ಗಡಿಯಂಚಿನ ಶನಿವಾರಸಂತೆಯಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬಂದಿತು. ಇಲ್ಲಿ. ಯಾವುದೇ ಅಂಗಡಿ ಮುಂಗಟ್ಟು ತೆರೆದಿರಲಿಲ್ಲ. ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ಸಿಗಾಗಿ ಕೆಲವು ಪ್ರಯಾಣಿಕರು ನಿಂತಿರುವ ದೃಶ್ಯ ಕಂಡು ಬಂತು. ಗೋಣಿಕೊಪ್ಪಲಿನಲ್ಲಿ ಖಾಸಗಿ ಬಸ್ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಕಂಡು ಬಂದಿತು. ಸರ್ಕಾರಿ ಬಸ್ಸುಗಳು ಓಡಾಡುತ್ತಿದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ವಿರಾಜಪೇಟೆ ಪಟ್ಟಣದಲ್ಲಿ ಕೊಡಗು ಬಂದ್ ಗೆ ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಒಟ್ಟಾರೆ ಜಿಲ್ಲೆಯಾದ್ಯಂತ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮಾಡುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ.

