News Karnataka Kannada
Monday, May 06 2024
ಉತ್ತರಕನ್ನಡ

ರಾಮನಗರ: ಬ್ರಿಟಾನಿಯಾ ಕಾರ್ಖಾನೆ ಕಾರ್ಮಿಕರ ಪ್ರತಿಭಟನೆ

Britaniya
Photo Credit : By Author

ರಾಮನಗರ: ವಿನಾಕಾರಣ ಕೆಲಸದಿಂದ ಹೊರ ಹಾಕಿರುವ ಹೊರಗುತ್ತಿಗೆ ಕಾರ್ಮಿಕರನ್ನು ಮರು ನೇಮಿಸಿಕೊಳ್ಳುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಡದಿಯ ಬ್ರಿಟಾನಿಯಾ ಇಂಡಸ್ಟ್ರೀಸ್ ಕಾರ್ಖಾನೆಯ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಬ್ರಿಟಾನಿಯಾ ಇಂಡಸ್ಟ್ರೀಸ್ ಪ್ರೈ.ಲಿ ಕಾರ್ಖಾನೆಯ ಮುಂಭಾಗ ಕರ್ನಾಟಕ ಇಂಡಸ್ಟ್ರೀಸ್ ಅಂಡ್ ಜನರಲ್ ಸರ್ವಿಸಸ್ ಎಂಪ್ಲಾಯಿಸ್ ಫೆಡರೇಷನ್ ಸಂಘಟನೆ ಸಹಯೋಗದಲ್ಲಿ ಜಮಾಯಿಸಿದ ನೂರಾರು ಕಾರ್ಮಿಕರು ಕಂಪೆನಿಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಯನ್ನು ತಡೆಯುವಂತೆ ಹಾಗೂ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಂಪೆನಿಯ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬ್ರಿಟಾನಿಯಾ ಕಾರ್ಮಿಕ ಸಂಘದ ಅಧ್ಯಕ್ಷ ಅಭಿಷೇಕ್ ಅವರು ಮಾತನಾಡಿ ಬ್ರಿಟಾನಿಯಾ ಕಾರ್ಖಾನೆಯಲ್ಲಿ 168 ಖಾಯಂ ನೌಕರರು ಹಾಗೂ ಸುಮಾರು 600ಕ್ಕೂ ಹೆಚ್ಚು ಹೊರಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರ ಹಿತ ರಕ್ಷಣೆಗಾಗಿ ಕಾರ್ಖಾನೆಯಲ್ಲಿ ಎಐಟಿಯುಸಿ ಅಂಗಸಂಸ್ಥೆಯಾಗಿರುವ ಕೆಐಜಿಎಸ್‌ಇಎಫ್ ಸಂಘಟನೆ ಅಡಿಯಲ್ಲಿ ಕಾರ್ಮಿಕ ಸಂಘ ರಚಿಸಿಕೊಳ್ಳುವ ವಿಚಾರದಲ್ಲಿ ಕಂಪೆನಿಯ ಆಡಳಿತ ಮಂಡಳಿಯಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಕಾರ್ಮಿಕ ಸಂಘಕ್ಕೆ ಸದಸ್ಯತ್ವ ಕೊಡಿಸಲು ಮುಂದಾಳತ್ವ ವಹಿಸಿದ 13 ಜನ ಹೊರಗುತ್ತಿಗೆ ಕಾರ್ಮಿಕರನ್ನು ಆಡಳಿತ ಮಂಡಳಿ ಏಕಾಏಕಿ ಕೆಲಸದಿಂದ ತೆಗೆದುಹಾಕಿದೆ ಎಂದು ದೂರಿದರು.

ಕಾರ್ಖಾನೆಯಲ್ಲಿ ಪ್ರತಿದಿನ ಮೂರು ಪಾಳಿಯಲ್ಲಿ ಸುಮಾರು 400 ಜನರು ಕೆಲಸ ನಿರ್ವಹಣೆ ಮಾಡುತ್ತಿದ್ದು, ಈ ಪೈಕಿ ಮಹಿಳಾ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾರ್ಖಾನೆಯಲ್ಲಿನ ಶೌಚಾಲಯದ ಬಾಗಿಲುಗಳು ಒಡೆದು ಅಲ್ಲಲ್ಲಿ ಕಿಂಡಿಗಳಾಗಿವೆ ಕೆಲವು ಶೌಚಾಲಯಗಳಿಗೆ ಬಾಗಿಲುಗಳೇ ಇಲ್ಲ. ಮಹಿಳೆಯರು ಉಪಯೋಗಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರನ್ನು ನಿರಂತರವಾಗಿ ಶೋಷಣೆ ಮಾಡಲಾಗುತ್ತಿದ್ದು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ. ಅಲ್ಲದೇ ಕ್ಯಾಂಟಿನ್‌ನಲ್ಲಿ ಕಾರ್ಮಿಕರಿಗೆ ಕಳಪೆ ಗುಣಮಟ್ಟದ ಆಹಾರವನ್ನು ನೀಡುತ್ತಿದ್ದು ಈ ಅವ್ಯವಸ್ಥೆ ವಿರುದ್ಧ ಪ್ರಶ್ನೆ ಮಾಡುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ದಿನಗೂಲಿ ಕಾರ್ಮಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಂಡಿದ್ದು ಬೇಗ ಬರುವವರಿಗೆ ಮಾತ್ರ ಕೆಲಸ ನೀಡಲಾಗುತ್ತಿದೆ. ಪ್ರತಿದಿನ 10 ರಿಂದ 15 ಜನರನ್ನು ವಾಪಸ್ ಕಳುಹಿಸಲಾಗುತ್ತಿದೆ. ಕಾರ್ಮಿಕ ಸಂಘ ರಚನೆಯನ್ನು ವಿರೋಧಿಸುತ್ತಿರುವ ಆಡಳಿತ ಮಂಡಳಿ ಕಾರ್ಮಿಕರಲ್ಲೇ ಒಡೆದಾಳುವ ನೀತಿ ಅನುಸರಿಸುತ್ತಿದೆ. ಕಾರ್ಮಿಕರ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ ಎಂದು ಆಪಾದಿಸಿದರು.

ಕಾರ್ಖಾನೆಯ ಎಲ್ಲಾ ಕಾರ್ಮಿಕರಿಗೂ ಯೂನಿಯನ್ ಸದಸ್ಯತ್ವ ಪಡೆಯಲು ಅವಕಾಶ ನೀಡಬೇಕು. ವಿನಾಕಾರಣ ಕೆಲಸದಿಂದ ತೆಗೆದು ಹಾಕಿರುವ 13 ಜನ ಕಾರ್ಮಿಕರನ್ನು ವಾಪಸ್ ನೇಮಕ ಮಾಡಿಕೊಳ್ಳಬೇಕು. ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಕಾರ್ಮಿಕರ ಈ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದಿದ್ದರೇ ಅನಿರ್ಧಿಷ್ಠಾವಧಿಗೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕೆಐಜಿಎಸ್‌ ಇಎಫ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಂದೀಪ್, ಸಂಘಟನಾ ಕಾರ್ಯದರ್ಶಿ ಸಂಜಯ್, ಎಡಿಎನ್‌ಟಿಯುಸಿ ಅಧ್ಯಕ್ಷ ಗಂಗಾಧರ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು