ಕಾರವಾರ: ಮನೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ್ದ ಸಾಮಾನುಗಳು ಬೆಂಕಿಗಾಹುತಿಯಾದ ಘಟನೆ ಅಂಕೋಲಾ ತಾಲೂಕಿನ ಅವರ್ಸಾದಲ್ಲಿ ನಡೆದಿದೆ.
ಬಾಲಚಂದ್ರ ಮಹಾಬಲೇಶ್ವರ ನಾಯ್ಕ ಎಂಬುವವರು ಬಾಡಿಗೆಗೆ ಇದ್ದರು ಎನ್ನಲಾದ ಮನೆಗೆ ಬೆಂಕಿ ತಗುಲಿದೆ. ವಿದ್ಯುತ್ ಮೀಟರ್ ಬೋರ್ಡ್ ಹತ್ತಿರದಿಂದ ಬೆಂಕಿ ಕಾಣಿಸಿಕೊಂಡಿದ್ದು ಬಳಿಕ ಸಂಪೂರ್ಣವಾಗಿ ಮನೆಗೆ ತಗುಲಿ ಮನೆಯಲ್ಲಿದ್ದ ಫ್ಯಾನು ಇನ್ನಿತರ ಉಪಕರಣಗಳು ಕಪಾಟು, ಕಪಾಟಿನಲ್ಲಿದ್ದ ಸಾಮಗ್ರಿಗಳು ಸೇರಿದಂತೆ ಮದುವೆಗೆ ತಂದಿಟ್ಟಿದ್ದ ನಲವತ್ತು ಸಾವಿರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದಾರೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ. ಜೊತೆಗೆ ಸ್ಥಳೀಯರು ಕೂಡ ಬೆಂಕಿ ನಂದಿಸುವಲ್ಲಿ ಕೈಜೋಡಿಸಿದ್ದರು.