ಗೋಕರ್ಣ: ಖಡ್ಗಕ್ಕೆ ನಡುಗದ ಹೃದಯ ಕರುಣೆಗೆ ಕರಗೀತು- ರಾಘವೇಶ್ವರ ಶ್ರೀ

ಗೋಕರ್ಣ: ಖಡ್ಗಕ್ಕೆ ನಡುಗದ ಪಾಪಿಯ ಹೃದಯ ಕರುಣೆಯಿಂದ ಕರಗುತ್ತದೆ. ಕರುಣೆಯಿಂದ ಕ್ರೌರ್ಯವನ್ನು ಗೆದ್ದ ನಿದರ್ಶನಗಳು ಸಾಕಷ್ಟಿವೆ. ಆದ್ದರಿಂದಲೇ ಕರುಣೆ ಶ್ರೇಷ್ಠ ಭಾವ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಗುರುವಾರ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಕರುಣೆಯ ಶಕ್ತಿ ಖಡ್ಗಕ್ಕಿಂತಲೂ ಹೆಚ್ಚು ಎಂದು ವಿಶ್ಲೇಷಿಸಿದರು. ರಾಮ, ಸೀತೆ, ಹನುಮಂತನ ಗುಣ ಬೆಳೆಸಿಕೊಳ್ಳಬೇಕೆಂದರೆ, ದೇಹದಲ್ಲಿ ರಕ್ತ ಹರಿಯುವಂತೆ ಕರುಣೆ ಎಲ್ಲೆಡೆ ತುಂಬಿ ಹರಿಯಬೇಕು. ಜಗತ್ತಿನ ಪ್ರತಿಯೊಬ್ಬರ ಬಗ್ಗೆಯೂ ಕರುಣೆ ತೋರುವ ಮನಸ್ಸು ಬೆಳೆಸಿಕೊಳ್ಳೋಣ ಎಂದು ಹೇಳಿದರು.

ಸತ್ಪುರುಷರು ಕರುಣಾಪೂರ್ಣರು; ಸಾಮಾನ್ಯರು ತಮ್ಮ ಸಾರ್ಥ ಸಾಧಿಸಿ ಬೇರೆಯವರ ಬಗ್ಗೆ ಕರುಣೆ ತೋರುತ್ತಾರೆ; ಆದರೆ ಮಾನುಷ ರಾಕ್ಷಸರು ತಮ್ಮ ಹಿತಕ್ಕಾಗಿ ಪರಹಿತವನ್ನು ಕಿತ್ತುಕೊಳ್ಳುವಂತವರು; ಕೊನೆಯ ವರ್ಗ ಕರುಣೆಯ ಸುಳಿವೇ ಇಲ್ಲದವರು. ಇವರು ಕೊನೆಗೆ ಹೇಳ ಹೆಸರಿಲ್ಲದಂತೆ ನಾಶವಾಗಿ ಬಿಡುತ್ತಾರೆ ಎಂದು ಉದಾಹರಣೆ ಸಹಿತ ವಿವರಿಸಿದರು.

ತಾಟಕಿಯನ್ನು ಹತ್ಯೆ ಮಾಡುವಂತೆ ವಿಶ್ವಾಮಿತ್ರರು ಸೂಚಿಸಿದರೂ, ಹೆಣ್ಣು ಎಂಬ ಕಾರಣಕ್ಕೆ ರಾಮ ಕರುಣೆ ತೋರುತ್ತಾನೆ. ರಾಕ್ಷಸಿಯಾದರೂ, ಸ್ತ್ರೀಯೆಂಬ ಕಾರಣಕ್ಕೆ ಕರುಣೆ ತೋರಿದ ನಿದರ್ಶನ ರಾಮ ಎಷ್ಟು ಕರುಣಾಮೂರ್ತಿ ಎನ್ನುವುದನ್ನು ಸೂಚಿಸುತ್ತದೆ ಎಂದು ಬಣ್ಣಿಸಿದರು.

ಶುಕ-ಸಾರಣರೆಂಬ ರಾವಣನ ಗುಪ್ತಚರರು ರಾಮಸೈನ್ಯದ ಅವಲೋಕನ ಮಾಡುವ ವೇಳೆ ಕಪಿಸೈನ್ಯದ ಕೈಯಲ್ಲಿ ಸಿಕ್ಕಿಹಾಕಿಕೊಂಡ ಸಂದರ್ಭದಲ್ಲಿ ರಾಜದೂತನನ್ನು ಹತ್ಯೆ ಮಾಡುವುದು ರಾಜನೀತಿಗೆ ವಿರುದ್ಧ ಎಂದು ರಾಮ ಬಿಟ್ಟು ಬಿಡುತ್ತಾನೆ. ಇದು ರಾಮ ಕಾರುಣ್ಯದ ಮತ್ತೊಂದು ಮುಖ ಎಂದರು.

ವಿಭೀಷಣನಿಗೆ ರಾಮ ಆಸರೆ ನೀಡುವುದಕ್ಕೆ ಮುಂದಾದಾಗ ಸುಗ್ರೀವ ವಿರೋಧಿಸುತ್ತಾನೆ. ಆಗ ಶ್ರೀರಾಮ ಪಾರಿವಾಳದ ಕಥೆಯೊಂದನ್ನು ಹೇಳಿ ಸುಗ್ರೀವನ ಮನವೊಲಿಸುತ್ತಾರೆ. ಈ ಕಥೆಯಲ್ಲಿ ತನ್ನ ಸಂಗಾತಿಯನ್ನು ಕೊಂದ ಬೇಡನೊಬ್ಬನಿಗೆ ಗಂಡು ಪಾರಿವಾಳ ಮಳೆ- ಗಾಳಿಯಿಂದ ರಕ್ಷಣೆ ನೀಡುವುದಲ್ಲದೇ, ಆತನಿಗೆ ಬೆಂಕಿ ಕಾಯಿಸಲು ಬೆಂಕಿ ಸಾಮಗ್ರಿಗಳನ್ನೂ ನೀಡುತ್ತದೆ. ಕೊನೆಗೆ ಆತನ ಹಸಿವನ್ನು ನೋಡಲಾರದೇ ಉರಿಗೆ ಬಿದ್ದು ಸತ್ತು ಆತನಿಗೆ ಆಹಾರವಾಗುತ್ತದೆ. ಒಂದು ಪಾರಿವಾಳ ತನಗೆ ಕೇಡು ಬಗೆದವರಿಗೂ ಈ ಬಗೆಯ ಕರುಣೆ ತೋರಿದ ಮೇಲೆ ಮಾನವರಾದ ನಾವೇನು ಮಾಡಬೇಕು ಎಂದು ಸುಗ್ರೀವನನ್ನು ಪ್ರಶ್ನಿಸುವಲ್ಲಿ ಕಾಣುವುದೂ ರಾಮಕಾರುಣ್ಯದ ಮುಖ ಎಂದು ವಿವರಿಸಿದರು.

ಅಶೋಕವನದಲ್ಲಿ ಸೀತೆಗೆ ಒಂದು ವರ್ಷ ಚಿತ್ರಹಿಂಸೆ ನೀಡಿದ ರಕ್ಕಸಿಯರನ್ನು ಹತ್ಯೆ ಮಾಡಲು ಹನುಮಂತ ಮುಂದಾದಾಗ ಸೀತೆ, “ತಪ್ಪನ್ನೇ ಮಾಡದವರು ಯಾರೂ ಇಲ್ಲ; ಬದುಕಿನ ಪ್ರತಿ ಹಂತದಲ್ಲೂ ಒಂದಲ್ಲ ಒಂದು ತಪ್ಪು ಮಾಡಿರುತ್ತಾನೆ. ಹಾಗಿರುವಾಗ ಅವರ ಮೇಲೇಕೆ ಹಗೆ? ಆರ್ಯನಾದವನು ಅವರನ್ನು ಹತ್ಯೆ ಮಾಡಬಾರದು” ಎನ್ನುತ್ತಾಳೆ. ಇದು ಸೀತೆಯ ಕಾರುಣ್ಯ. ಇದು ರಾಮ-ಸೀತೆಯರಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ವಾಲ್ಮೀಕಿ ಬಣ್ಣಿಸಿದ್ದಾರೆ ಎಂದರು.

ಅಂತೆಯೇ ಹನುಮಂತ ಲಂಕೆಗೆ ಪ್ರವೇಶಿಸುವ ವೇಳೆ ಲಂಕಿಣಿ ಎದುರಾಗಿ ಪ್ರಹಾರ ಮಾಡಿದಾಗ ಪ್ರತಿಯಾಗಿ ಹನುಮಂತ ಎಡಗೈಯ ಮೆದು ಮುಷ್ಟಿಯಿಂದ ಹೊಡೆಯುತ್ತಾನೆ. ಆಗ ಲಂಕಿಣಿ ನೆಲಕ್ಕೆ ಬೀಳುತ್ತಾಳೆ. ಹನುಮಂತ ಹೆಣ್ಣೆಂಬ ಕಾರಣಕ್ಕೆ ಕರುಣೆ ತೋರುತ್ತಾನೆ. ಹೀಗೆ ಮಹಾಪುರುಷರು ಎಂಥ ಸಂದಿಗ್ಧ ಸ್ಥಿತಿಯಲ್ಲೂ ವಿರೋಧಿಗಳ ಮೇಲೂ ಕರುಣೆ ತೋರಿದ ಹಲವು ನಿದರ್ಶನಗಳು ರಾಮಾಯಣದಲ್ಲಿ ಕಂಡುಬರುತ್ತವೆ ಎಂದು ವಿಶ್ಲೇಷಿಸಿದರು.

ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳನ್ನು ಗುರುವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಗೌರವಿಸಲಾಯಿತು. ರಾಜ್ಯ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಭಟ್, ಧಾರ್ಮಿಕ ವಿಭಾಗದ ಸಂಚಾಲಕ ಭಾನುಪ್ರಕಾಶ್ ಶ್ರೀರಂಗಪಟ್ಟಣ, ಉಪಾಧ್ಯಕ್ಷ ಶಶಿಭೂಷಣ ಹೆಗಡೆ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀಪಾದ ರಾಯಸದ, ನಾರಾಯಣ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಯಲ್ಲಾಪುರದ ಪ್ರಮೋದ್ ಹೆಗಡೆ ದಂಪತಿ ಶ್ರೀಗಳ ಆಶೀರ್ವಾದ ಪಡೆದರು.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ರುದ್ರಹವನ, ರಾಮತಾರಕ ಹವನ, ಚಂಡೀಪಾರಾಯಣ, ಗಣಪತಿ ಹೋಮ, ಪವಮಾನ ಹೋಮಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೊನ್ನಾವರದ ಹೊಸಾಕುಳಿ ಶ್ರೀ ಮಹಾಗಣಪತಿ ಯಕ್ಷಕಲಾ ವೃಂದ ವತಿಯಿಂದ ಲವ-ಕುಶ ಕಾಳಗ ಯಕ್ಷಗಾನ ನಡೆಯಿತು.

Gayathri SG

Recent Posts

ಅಂಜಲಿ ಕೊಲೆ ಪ್ರಕರಣ ಸಿಐಡಿಗೆ, ನೇಹಾ ಕೇಸ್​ ಸಿಬಿಐಗೆ ಕೊಡಲ್ಲ: ಗೃಹ ಸಚಿವ

ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ…

4 mins ago

ಡ್ರಾಪ್​ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಕ್ಕೆ ಯತ್ನ

ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಠಾಣಾ ವ್ಯಾಪ್ತಿಯಲ್ಲಿ ಯುವಕನೋರ್ವ ಡ್ರಾಪ್​ ಕೊಡುವ ನೆಪದಲ್ಲಿ  ತಡರಾತ್ರಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ…

18 mins ago

ಇಬ್ರಾಹಿಂ ರೈಸಿ ನಿಧನ: ನಾಳೆ ಭಾರತದಲ್ಲಿ ಒಂದು ದಿನದ ‘ಶೋಕಾಚರಣೆ’

ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನಕ್ಕೆ ನಾಳೆ (ಮೇ 21) ಭಾರತದಲ್ಲಿ ಒಂದು ದಿನದ ರಾಜ್ಯ…

25 mins ago

ಪ್ರಕಟಣೆಯಾದ ಸಂಶೋಧನಾ ಬರಹಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ: ಡಾ. ಸುಧಾಕರ್ ವೈ.ಎನ್

ವಿದ್ಯಾರ್ಥಿಗಳು ಪ್ರಕಟಿಸುವ ಸಂಶೋಧನಾ ಬರಹಗಳು ಉನ್ನತ ವೇತನ ಶ್ರೇಣಿಯ ವೃತ್ತಿ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ಉಪಯುಕ್ತವಾಗುತ್ತವೆ ಎಂದು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್…

29 mins ago

ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಬಳಿಕವೇ ಸಿಇಟಿ ಫಲಿತಾಂಶ

ದ್ವಿತೀಯ ಪಿಯುಸಿಯ ಎರಡನೇ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಪಲಿತಾಂಶ ನಂತರವೇ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು…

40 mins ago

ಮಲ್ಲಮ್ಮ ಜಯಂತಿ ಆಚರಣೆಯ ದಿನ ಅಗೌರವ ತೋರಿದ ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ

ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆಯ ದಿನದಂದು ಬೇಜವಾಬ್ದಾರಿತನದಿಂದ ವರ್ತಿಸಿ…

44 mins ago