ಉಡುಪಿ: ಮೊದಲ ಬಾರಿಗೆ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರಿಗೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡಲಾಗಿತ್ತು. ಆದರೂ ಅವರು ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿಗೆ ಹೋಗಿದ್ದಾರೆ. ಆದರೆ ಅವರ ಜತೆ ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕರ್ತರು ಹೋಗಿಲ್ಲ. ಹೀಗಾಗಿ ಜಿಲ್ಲೆಯ ಎಲ್ಲ ಕಾರ್ಯಕರ್ತರಿಗೆ, ನಾಯಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಉಡುಪಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಂದೆಗೆ ಶಾಸಕರಾಗಲು ಅವಕಾಶ, ತಾಯಿ ಹಾಗೂ ಮಗನಿಗೆ ಕಾಂಗ್ರೆಸ್ ಸಚಿವ ಸ್ಥಾನ ನೀಡಿತ್ತು. ಇದಕ್ಕಿಂತ ಹೆಚ್ಚಿನದನ್ನು ಕಾಂಗ್ರೆಸ್ ಏನು ನೀಡಲು ಸಾಧ್ಯ? 2023ರ ಚುನಾವಣೆಯಲ್ಲಿ ಪ್ರಮೋದ್, ಯಾವುದೇ ಪಕ್ಷದಿಂದ ನಿಂತರೂ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸಿ, ಆತನನ್ನು ಸೋಲಿಸುವ ಕೆಲಸ ಮಾಡಬೇಕು. ನಮ್ಮ ಪಕ್ಷದಲ್ಲಿದ್ದಾಗ ವೇದಿಕೆ ಮೇಲೆ ಕೂರುತ್ತಿದ್ದರು. ಈಗ ಬಿಜೆಪಿಗೆ ಹೋಗಿ ಕೆಳಗೆ ಕೂರುವ ಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದರು.