ಉಡುಪಿ: ಜಿಲ್ಲೆಯಲ್ಲಿ ಚುನಾವಣಾ ಖರ್ಚುವೆಚ್ಚಗಳ ಮೇಲೆ ನಿಗಾ ವಹಿಸಲು, ಯಾವುದೇ ಚುನಾವಣಾ ಅಕ್ರಮಗಳು ನಡೆಯದಂತೆ ಹಾಗೂ ವಾಹನಗಳ ವಿಶೇಷ ತಪಾಸಣೆಗಾಗಿ ಜಿಲ್ಲೆಯ 17 ಕಡೆಗಳಲ್ಲಿ ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ. ಇದು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತದೆ ಎಂದು ಉಡುಪಿ ಎಸ್ಪಿ ಅಕ್ಷಯ್ ಎಂ. ಹಾಕಿ ತಿಳಿಸಿದ್ದಾರೆ.
ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯೊಳಗೆ ಸಂಚರಿಸುವ ಹಾಗೂ ಹೊರಜಿಲ್ಲೆಗಳ ಸಂಚಾರಗಳ ಮೇಲೆ ನಿಗಾ ಇರಿಸಲು ಈ ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ. ಆಗಾಗ ಪೊಲೀಸ್ ತಂಡಗಳು ಹಠಾತ್ ತಪಾಸಣೆಯನ್ನೂ ನಡೆಸಲಿದೆ ಎಂದರು.
ಕಳೆದ 15 ದಿನಗಳಿಂದ ಚೆಕ್ಪೋಸ್ಟ್ಗಳಲ್ಲಿ ಪ್ರಾರಂಭಿಸಿದ ವಾಹನಗಳ ಹಠಾತ್ ಪರಿಶೀಲನೆ ವೇಳೆ ಜಿಲ್ಲೆಯ ವಿವಿಧೆಡೆಗಳಲ್ಲಿ ದಾಖಲೆಗಳಿಲ್ಲದೇ ಸಾಗಾಟ ಮಾಡುತಿದ್ದ ಒಟ್ಟು 42 ಲಕ್ಷರೂ.ಗಳನ್ನು ವಶಪಡಿಸಿ ಕೊಳ್ಳಲಾಗಿದ್ದು, ಒಟ್ಟು ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ. ಹಾಗೆಯೇ 5500 ಲೀ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.