ಉಡುಪಿ: ರಾಜ್ಯ ಬಜೆಟ್ ನಲ್ಲಿ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 5 ರೂ. ಪ್ರೋತ್ಸಾಹ ಧನ ಮತ್ತು ನಂದಿನಿ ಪಶು ಆಹಾರಕ್ಕೆ ಕೆಜಿಗೆ ಕನಿಷ್ಠ 5ರೂ. ಸಬ್ಸಿಡಿ ಒದಗಿಸಲು ಅನುದಾನ ನೀಡಬೇಕು ಎಂದು ಸಹಕಾರ ಭಾರತಿ ಹಾಲು ಪ್ರಕೋಷ್ಠದ ರಾಜ್ಯ ಸಂಚಾಲಕ ಸಾಣೂರು ನರಸಿಂಹ ಕಾಮತ್ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಹಾಲಿನ ದರವನ್ನು ಕೇವಲ 2ರೂ. ಏರಿಸಲಾಗಿದೆ. ಅದು ಏನು ಸಾಲದು. ಹಾಲಿನ ಉತ್ಪಾದನಾ ವೆಚ್ಚ ಸುಮಾರು 40ರೂ. ಆಗಿದ್ದು, ಹೈನುಗಾರರಿಗೆ ಬರೀ 35ರೂ. ಮಾತ್ರ ಸಿಗುತ್ತಿದೆ. ಹೀಗೆ ಹೈನುಗಾರರು ಪ್ರತಿ ಲೀಟರ್ ನಲ್ಲಿ 5ರೂ. ನಷ್ಟ ಅನುಭವಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯನ್ನೇ ಬಿಟ್ಟು ಬಿಡಬಹುದಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಹೇಳಿದರು.