News Karnataka Kannada
Monday, April 29 2024
ಉಡುಪಿ

ಉಡುಪಿ: ಕಾಪುವಿನಲ್ಲಿ ತೇಲುವ ರೆಸ್ಟೋರೆಂಟ್ ಹಾಗೂ ವಸತಿ ಗೃಹ ನಿರ್ಮಾಣ

A floating restaurant and a residential house will be constructed in Kapu
Photo Credit : News Kannada

ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಳಿಯಾರು ಗ್ರಾಮದಲ್ಲಿ ಪ್ರವಾಸಿ ಆಕರ್ಷಣೆಯಾಗಿ ತೇಲುವ ರೆಸ್ಟೋರೆಂಟ್ ಹಾಗೂ ವಸತಿಗೃಹ ನಿರ್ಮಾಣ ಬಗ್ಗೆ ಅಗತ್ಯವಿರುವ ಎಲ್ಲಾ ನಿಯಮಗಳನ್ನು ಪರಿಶೀಲಿಸಿ, ಮಂಜೂರಾತಿ ನೀಡುವಂತೆ ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದರು.

ಅವರು ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಪು ತಾಲೂಕಿನ ಉಳಿಯಾರು ಗ್ರಾಮದ ಹಿನ್ನೀರಿನಲ್ಲಿ ಫ್ಲೋಟಿಂಗ್ ರೆಸ್ಟೋರೆಂಟ್ ಮತ್ತು ವಸತಿ ಗೃಹವನ್ನು ನಿರ್ಮಾಣ ಮಾಡಲು, ನಿಗಧಿತ ಶುಲ್ಕ ಪಾವತಿ ಮಾಡಲು ಬದ್ಧವಾಗಿರುವ ಬಗ್ಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ, ಎಲ್ಲಾ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಹಾಗೂ ಯಾವುದೇ ಕಾನೂನು ನಿಯಮಗಳ ಉಲ್ಲಂಘನೆ ಆಗದಿರುವ ಬಗ್ಗೆ ಪರಿಶೀಲಿಸಿ ಅನುಮತಿ ನೀಡುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ನಿಖರ ಸಂಖ್ಯೆಯನ್ನು ಇದುವರೆಗೂ ವ್ಯವಸ್ಥಿತವಾಗಿ ದಾಖಲು ಮಾಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಪ್ರವಾಸಿ ತಾಣಗಳ ನಿರ್ವಹಣೆಗೆ ಗುತ್ತಿಗೆ ಪಡೆದಿರುವ ಸಂಸ್ಥೆಗಳ ಮೂಲಕ ಆ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರ ದಾಖಲೆಗಳನ್ನು ಕಂಪ್ಯೂಟರಿನಲ್ಲಿ ದಾಖಲಿಸುವ ಮೂಲಕ ವ್ಯವಸ್ಥಿತ ರೀತಿಯಲ್ಲಿ ಅಂಕಿ ಅಂಶಗಳನ್ನು ಪ್ರತಿ ತಿಂಗಳು ಪಡೆಯುವಂತೆ ಸೂಚನೆ ನೀಡಿದರು.

ಪ್ರವಾಸೋದ್ಯಮ ಇಲಾಖೆಯಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಗತ್ಯವಿರುವ ಪೊಲೀಸ್, ಸಿ.ಅರ್.ಝಡ್ ಮತ್ತು ಸ್ಥಳೀಯ ಸಂಸ್ಥೆಗಳ ನಿರಾಪೇಕ್ಷಣ ಪತ್ರಗಳನ್ನು ಪಡೆಯಲು ಅನುಕೂಲವಾಗುವಂತೆ ಸಿಂಗಲ್ ವಿಂಡೋ ಸಿಸ್ಟಮ್ ಮೂಲಕ ಸೌಲಭ್ಯಗಳನ್ನು ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಹೆಚ್ಚಿನ ಜಾಗೃತಿ ಮತ್ತು ಅರಿವು ಮೂಡಿಸುವಂತೆ ತಿಳಿಸಿದರು.

ಜಿಲ್ಲೆಯ ಕರಾವಳಿ ತೀರ ಪ್ರದೇಶದಲ್ಲಿ ಪ್ಯಾರಾಮೋಟರಿಂಗ್ ಅಡ್ವೆಂಚರ್ ಕ್ರೀಡೆಗಳನ್ನು ನಡೆಸಲು ಅನುಮತಿ ಕೋರಿರುವವರಿಗೆ, ಅವರು ಸಲ್ಲಿಸಿರುವ ಎಲ್ಲಾ ಸುರಕ್ಷತಾ ಮತ್ತು ಅನುಮತಿ ಪತ್ರಗಳ ದಾಖಲಾತಿ ಪರಿಶೀಲಿಸಿ ಅನುಮತಿ ನೀಡುವಂತೆ ತಿಳಿಸಿದರು.

ತ್ರಾಸಿ, ಮರವಂತೆ ಹಾಗೂ ಕಾಪು ಬೀಚ್‌ನಲ್ಲಿ ಮತ್ಸ್ಯಾಲಯ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಪರಿಶೀಲಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ನಿರ್ವಹಣೆಯನ್ನು ಗುತ್ತಿಗೆ ಪಡೆದಿರುವವರು, ನಿರ್ವಹಣೆ ಒಪ್ಪಂದದಲ್ಲಿನ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಾವುದೇ ಸಂದರ್ಭದಲ್ಲಿ ಪ್ರವಾಸಿಗರಿಗೆ ಅನಾನುಕೂಲವಾಗದಂತೆ ಕಾರ್ಯನಿರ್ವಹಿಸಬೇಕೆಂದು ಸೂಚನೆ ನೀಡಿದರು.

ಹೆಬ್ರಿ ತಾಲೂಕಿನ ವರಂಗದಲ್ಲಿ ಇಕೋ ಟೂರಿಸಂ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರ ನಡೆಸುವಂತೆ ಹಾಗೂ ಪಡುಬಿದ್ರೆ ಕಡಲತೀರದಿಂದ ಪಡುಕೆರೆ ಕಡಲ ತೀರದವರೆಗೆ ಸೈಕಲ್ ಸರ್ಕ್ಯೂಟ್ ಹಾಗೂ ಕುಂದಾಪುರ ಕೋಡಿಬೀಚ್ ನಿಂದ ಕೋಡಿ ತಲೆ ಡೆಲ್ಟಾಪಾಯಿಂಟ್ ವರೆಗೆ ಸೈಕಲ್ ಟ್ರ‍್ಯಾಕ್ ನಿರ್ಮಾಣ ಮಾಡುವ ಬಗ್ಗೆ ಸಂಬAಧಿಸಿದ ಸಂಸ್ಥೆಗಳನ್ನು ಜಿಲ್ಲೆಗೆ ಆಹ್ವಾನಿಸಿ, ಟ್ರಾಕ್ ನಿರ್ಮಾಣ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಪ್ರವಾಸಿಗರಿಗೆ ಕ್ಷಿಪ್ರಗತಿಯಲ್ಲಿ ಮಾಹಿತಿ ದೊರೆಯಲು ಅನುಕೂಲವಾಗುವಂತೆ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ನಲ್ಲಿ ಎಲ್ಲಾ ರೀತಿಯ ಮಾಹಿತಿಗಳನ್ನು, ವಿಡಿಯೋ ಮತ್ತು ಛಾಯಾಚಿತ್ರಗಳನ್ನು ಅಪ್ಲೋಡ್ ಮಾಡುವಂತೆ ಹಾಗೂ ಪ್ರವಾಸಿ ತಾಣಗಳ ಕುರಿತು ಕಿರು ಪುಸ್ತಕಗಳನ್ನು ಮುದ್ರಿಸಿ, ಪ್ರವಾಸೋದ್ಯಮ ಸಂಘಟನೆಗಳಿಗೆ ವಿತರಿಸುವಂತೆ ಸೂಚನೆ ನೀಡಿದರು.

ಪ್ರವಾಸೋದ್ಯಮ ಇಲಾಖೆಯ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಗತ್ಯವಿರುವ ಯೋಜನೆಗಳನ್ನು ರೂಪಿಸಲು ವಿವಿಧ ಖಾಸಗಿ ಸಂಸ್ಥೆಗಳೊದಿಗೆ ಒಪ್ಪಂದ ಮಾಡಿಕೊಂಡು ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸುವಂತೆ ಹಾಗೂ ಜಿಲ್ಲೆಯ ವಿವಿಧ ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಿಕೊಂಡು ಕಾರ್ಯ ನಿರ್ವಹಿಸುವಂತೆ ಮತ್ತು ಪ್ರವಾಸೋದ್ಯಮ ಕುರಿತ ಅನುಮತಿಗಳನ್ನು ಶೀಘ್ರದಲ್ಲಿ ನೀಡಲು ಅನುಕೂಲವಾಗುವಂತೆ ಉಪ ಸಮಿತಿಗಳನ್ನು ರಚಿಸಿಕೊಂಡು ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ಹೆಚ್.ಎನ್, ಪೌರಾಯುಕ್ತ ಉದಯ್ ಶೆಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೊ , ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಹಾಗೂ ವಿವಿಧ ಪ್ರವಾಸೋದ್ಯಮ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು