ಮಲ್ಪೆ: ಆಳ ಸಮುದ್ರ ಮೀನುಗಾರಿಕೆ ತೆರಳಿದ್ದ ಮೀನುಗಾರರ ಬಲೆಗೆ ಭಾರೀ ಗಾತ್ರದ ಮೀನೊಂದು ಬಿದ್ದಿದ್ದು, 22 ಕೆ.ಜಿ ತೂಕದ ಈ ಮೀನು ಬರೋಬ್ಬರಿ 2,34,080 ರೂ. ಗಳಿಗೆ ಮಾರಾಟ ಆಗುವ ಮೂಲಕ ದಾಖಲೆ ಬರೆದಿದೆ.
ಹೌದು, ಮಲ್ಪೆ ಬಂದರಿನಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಬಲೆಗೆ ಸ್ಥಳೀಯವಾಗಿ “ಗೋಳಿ ಮೀನು” ಎಂದು ಕರೆಯಲ್ಪಡುವ ಬೃಹತ್ ಮೀನು ಸಿಕ್ಕಿದೆ. ಕೊರೊನಾ ನಿರ್ಬಂಧದ ಬಳಿಕ ಪ್ರಸಕ್ತ ಮೀನುಗಾರಿಕಾ ಋತುವಿನಲ್ಲಿ ಯಥೇಚ್ಛ ಪ್ರಮಾಣದಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಈ ಮಧ್ಯೆ ದುಬಾರಿ ಬೆಲೆಯ ಮೀನುಗಳು ಬಲೆಗೆ ಬೀಳುತ್ತಿದ್ದು, ಇದು ಸಹಜವಾಗಿಯೇ ಮೀನುಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಈ ಮೀನು ಔಷಧಿ ತಯಾರಿಕೆಗೆ ಬಳಕೆಯಾಗುತ್ತದೆ ಎಂದು ಮೀನುಗಾರರು ಹೇಳಿದ್ದಾರೆ. ಮಲ್ಪೆ ಬಂದರಿನಲ್ಲಿ ಹರಾಜು ಹಾಕುವಾಗ ವೇಳೆ ವ್ಯಕ್ತಿಯೊಬ್ಬರು ಈ ದುಬಾರಿ ಮೀನನ್ನು ಖರೀದಿಸಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.