News Karnataka Kannada
Friday, May 03 2024
ಉಡುಪಿ

ಪಾವಗಡ ಸೋಲಾರ್ ಯೋಜನೆ ಕುರಿತ ಯಾವುದೇ ತನಿಖೆಗೂ ಸಿದ್ಧ: ಡಿ.ಕೆ. ಶಿವಕುಮಾರ್

Untitled 1
Photo Credit :

ಉಡುಪಿ: ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ಎಂಬ ಕೀರ್ತಿ ಪಡೆದಿರುವ ಪಾವಗಡ ಸೋಲಾರ್ ಪಾರ್ಕ್ ಯೋಜನೆಯಲ್ಲಿ ನಾನು ಶೇ. 0.1ರಷ್ಟು ತಪ್ಪು ಮಾಡಿದ್ದರೂ ನಾನು ಅದರ ಹೊಣೆ ಹೊರಲು ಬದ್ಧನಾಗಿದ್ದೇನೆ. ಬಿಜೆಪಿ ಸರ್ಕಾರ ಯಾವ ತನಿಖೆಯನ್ನಾದರೂ ಮಾಡಲಿ, ಎಲ್ಲ ತನಿಖೆಗೂ ಸಿದ್ಧನಾಗಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಉಡುಪಿಯ ಉಪ್ಪುಂದದ ದುರ್ಗಾಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿ, ಸಚಿವ ಸುನಿಲ್ ಕುಮಾರ್ ಅವರ ಪಾವಗಡ ಸೌರ ವಿದ್ಯುತ್ ಸ್ಥಾವರ ಯೋಜನೆಯಲ್ಲಿನ ಅಕ್ರಮ ಕುರಿತು ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂಬ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರು ಏನು ಆರೋಪ ಮಾಡಿದ್ದಾರೋ ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಕಾದು ನೋಡೋಣ. ರಾಜ್ಯ ವಿದ್ಯುತ್ ಉತ್ಪಾದನೆ ಇತಿಹಾಸದಲ್ಲಿ ನಾನು ಜವಾಬ್ದಾರಿ ತೆಗೆದುಕೊಂಡಾಗ ಪರಿಸ್ಥಿತಿ ಹೇಗಿತ್ತು, ನಾನು ಆ ಜವಾಬ್ದಾರಿ ಬಿಟ್ಟ ನಂತರ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ.

ಪಾವಗಡ ಯೋಜನೆ ಬಗ್ಗೆ ಆಗಲಿ, ಇತರೆ ಯಾವುದೇ ಯೋಜನೆ ಬಗ್ಗೆಯೇ ಆಗಲಿ, ಸರ್ಕಾರ ಯಾವ ತನಿಖೆ ಬೇಕಾದರೂ ಮಾಡಲಿ. ನಾನು ಅಲ್ಪಪ್ರಮಾಣದಲ್ಲಿ ತಪ್ಪು ಮಾಡಿದ್ದರೂ ನಾನು ನನ್ನ ಕತ್ತು ನೀಡಲು ಬದ್ಧನಾಗಿದ್ದೇನೆ. ಕರ್ನಾಟಕ ರಾಜ್ಯ ಹೇಗಿತ್ತು, ನಮ್ಮ ಸರ್ಕಾರ ಇದ್ದಾಗ ಎಷ್ಟು ವಿದ್ಯುತ್ ಉತ್ಪಾದನೆ ಮಾಡಲಾಗಿತ್ತು, ಈಗ ಪರಿಸ್ಥಿತಿ ಹೇಗಿದೆ ಎಂಬ ದಾಖಲೆಗಳು ನನ್ನ ಬಳಿ ಇವೆ. ಏನು ಬೇಕಾದರೂ ತನಿಖೆ ಮಾಡಲಿ. ಅವರ ಸರ್ಕಾರ ಇದ್ದಾಗ ಕಲ್ಲಿದ್ದಲು ವಿಚಾರ ಹೇಗಿತ್ತು, ನಮ್ಮ ಸರ್ಕಾರ ಬಂದ ಮೇಲೆ ಏನಾಯಿತು, ಈಗ ಅವರ ಸರ್ಕಾರ ಬಂದ ನಂತರ ಏನೆಲ್ಲಾ ಬದಲಾವಣೆ ಮಾಡಿದ್ದಾರೆ ಎಂದೆಲ್ಲಾ ಮಾಹಿತಿ ಗೊತ್ತಿದೆ. ಸದ್ಯಕ್ಕೆ ನಾನು ಆ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ’ ಎಂದರು.

ಒಟ್ಟಾರೆ ಅವರು ಹೇಳಿದ್ದಿಷ್ಟು:

‘ನನಗೆ ನಮ್ಮ ಧರ್ಮ, ದೇವರಿನ ಮೇಲೆ ಬಹಳ ನಂಬಿಕೆ ಇದೆ. ನನ್ನ ಕಷ್ಟಕಾಲದಲ್ಲಿ ಹರಕೆ ಮಾಡಿಕೊಂಡಿದ್ದೆ. ಹರಕೆ ತೀರಿಸಲು ಬಂದಿದ್ದೇನೆ. ಜೊತೆಗೆ ರಾಜೀವ್ ಗಾಂಧಿ ಅವರ ಪುಣ್ಯ ತಿಥಿ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು.

ಮೇಲ್ಮನೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಇಂದು ಅಥವಾ ನಾಳೆ ಅಂತಿಮವಾಗಬೇಕಾಗಿದ್ದು, ನಾನು ಹಾಗೂ ಸಿದ್ದರಾಮಯ್ಯ ಅವರು ದೆಹಲಿಗೆ ಭೇಟಿ ನೀಡುತ್ತಿದ್ದೇವೆ. ಇಂದು ಬೆಳಗ್ಗೆ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಪಕ್ಷದ ಮುಖಂಡರ ಸಭೆ ಮಾಡಿದ್ದೇನೆ. ಉಡುಪಿ ವಿಧಾನಸಭಾ ಕ್ಷೇತ್ರದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಅಭಿನಂದಿಸುತ್ತೇನೆ. ಪ್ರಮೋದ್ ಮಧ್ವರಾಜ್ ಅವರು ಪಕ್ಷ ತೊರೆದರೂ ಒಬ್ಬ ಕಾರ್ಯಕರ್ತರು ಕೂಡ ಅವರ ಜತೆ ಹೋಗದೆ ಪಕ್ಷದಲ್ಲೇ ಉಳಿದಿದ್ದಾರೆ. ಹೀಗಾಗಿ ಅವರಿಗೆಲ್ಲ ನಾನು ಹಾಗೂ ಪಕ್ಷ ಅಭಿನಂದನೆ ಸಲ್ಲಿಸುತ್ತೇವೆ. ನಾವು ಯಾರನ್ನು ಕಣಕ್ಕಿಳಿಸಬೇಕು ಎಂಬ ಜವಾಬ್ದಾರಿಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಉಪಾಧ್ಯಕ್ಷರಿಗೆ ವಹಿಸುತ್ತೇನೆ. ಅವರು ಚರ್ಚಿಸಿ ನನಗೆ ಹೆಸರುಗಳನ್ನು ಶಿಫಾರಸ್ಸು ಮಾಡುತ್ತಾರೆ. ನಾನು, ಶಾಸಕಾಂಗ ಪಕ್ಷದ ನಾಯಕರು ಹಾಗೂ ವರಿಷ್ಠರು ಕೂತು ಆದಷ್ಟು ಬೇಗ ತೀರ್ಮಾನ ಕೈಗೊಳ್ಳುತ್ತೇವೆ.

ಬಿಜೆಪಿಯವರು ಪ್ರಮೋದ್ ಅವರನ್ನು ಪಕ್ಷಕ್ಕೆ ಕರೆದೋಯ್ದಿದ್ದಾರೆ. ನನ್ನ ಪ್ರಕಾರ ಆದಷ್ಟು ಬೇಗ ಪ್ರಮೋದ್ ಅವರು ತಮ್ಮ ತಪ್ಪಿನ ಬಗ್ಗೆ ಅರಿವಾಗಿ ಪಶ್ಚಾತ್ತಾಪ ಪಡೆಲಿದ್ದಾರೆ. ಪಕ್ಷ ಅವರಿಗೆ, ಅವರ ಕುಟುಂಬ ಸದಸ್ಯರಿಗೆ ಎಲ್ಲ ರೀತಿಯ ಅವಕಾಶ, ಅಧಿಕಾರ ನೀಡಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಅವರು ನನ್ನ ಪಕ್ಕ ಕೂರುತ್ತಿದ್ದರೂ ಈಗ ಅಲ್ಲಿ ಕೆಳಗೆ ಕೂರುವ ಸ್ಥಿತಿ ಬಂದಿದೆ. ಅವರ ಫೋಟೋ ನೋಡಿ ನನಗೆ ಬಹಳ ಬೇಸರವಾಯಿತು. ಅವರು ತಮ್ಮ ಸ್ವಇಚ್ಛೆಯಿಂದ ಈ ತೀರ್ಮಾನ ಕೈಗೊಂಡಿದ್ದಾರೆ. ಆದರೆ ನಮ್ಮ ಪಕ್ಷದ ನಾಯಕರು ಬಹಳಷ್ಟು ಬಿಜೆಪಿ ಕಾರ್ಯಕರ್ತರು ಪಕ್ಷಕ್ಕೆ ಸೇರಲು ಇಚ್ಛೆ ವ್ಯಕ್ತಪಡಿಸಿದ್ದು, ಅವರನ್ನು ಸ್ವಾಗತಿಸಲು ನಾನು ಸಜ್ಜಾಗುತ್ತಿದ್ದೇನೆ.

ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಅನೇಕ ಮುಖಂಡರು, ಯುವಕರು ಉತ್ಸುಕತೆಯಿಂದ ಕಾಂಗ್ರೆಸ್ ಪಕ್ಷದ ಸದಸ್ಯತ್ವ ತೆಗೆದುಕೊಂಡಿದ್ದಾರೆ ಎಂದು ನಮ್ಮ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳು ಮಾಹಿತಿ ನೀಡಿದ್ದಾರೆ. ಇದು ಬಹಳ ಉತ್ತಮ ವಿಚಾರ. ನಾವು ಮತ್ತೆ ಸದಸ್ಯತ್ವ ನೋಂದಣಿ ಆರಂಭಿಸುತ್ತೇವೆ. ಇನ್ನು ಯುವಕರು ಹಾಗೂ ಮಹಿಳೆಯರಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶ ನೀಡಲು ಉದಯಪುರದಲ್ಲಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆ ಸಭೆಯಲ್ಲಿನ ಯೋಜನೆಗಳನ್ನು ಜಾರಿಗೊಳಿಸಲು ಒಂದು ಸಮಿತಿ ರಚಿಸಲಾಗುವುದು. ಆ ಸಭೆ ಕುರಿತು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವರಿಸುತ್ತೇನೆ. ಎಲ್ಲ ವರ್ಗದ ಜನರಿಗೆ ಅಧಿಕಾರ ನೀಡಲು ಪಕ್ಷ ಸಜ್ಜಾಗಿದೆ .’

150 ಕ್ಷೇತ್ರಗಳನ್ನು ಗೆಲ್ಲಬಹುದು ಎಂಬ ಬಿಜೆಪಿ ನಾಯಕರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೇವಲ 150 ಮಾತ್ರವಲ್ಲ, 224 ಕ್ಷೇತ್ರಗಳಲ್ಲೂ ಗೆಲ್ಲಬಹುದು’ ಎಂದು ಲೇವಡಿ ಮಾಡಿದರು.

ಇನ್ನು ರಮ್ಯಾ ಅವರ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಆಕೆ ನಮ್ಮ ಪಕ್ಷದ ಹೆಣ್ಣು ಮಗಳು, ಆಕೆ ಸಕ್ರಿಯವಾಗಿದ್ದರೆ ಸಂತೋಷ. ನಮ್ಮ ಪಕ್ಷ ಅವರಿಗೆ 2 ಬಾರಿ ಟಿಕೆಟ್ ನೀಡಿ ಲೋಕಸಭಾ ಸದಸ್ಯರನ್ನಾಗಿ ಮಾಡಿದೆ. ಆಕೆಗೆ ಒಳ್ಳೆಯದಾಗಲಿ’ ಎಂದರು.

ಕರಾವಳಿಯಲ್ಲಿ ಯಾವ ರೀತಿ ಪಕ್ಷ ಸಂಘಟನೆ ಮಾಡಲಾಗುವುದು ಎಂಬ ಪ್ರಶ್ನೆಗೆ, ‘ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ ನೀಡುತ್ತೇವೆ. ಉದ್ಯೋಗ ಸೃಷ್ಟಿಗೆ ಕಾರ್ಯಕ್ರಮ ರೂಪಿಸುತ್ತೇವೆ. ಈ ಭಾಗದ ಜನ ಬೆಂಗಳೂರು, ಸೌದಿ, ಮುಂಬೈಗೆ ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದು, ಅದನ್ನು ತಡೆಗಟ್ಟಬೇಕು. ಇಲ್ಲಿರುವ ಪ್ರತಿಭೆಗಳನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು. ಇಲ್ಲಿಯೇ ಅವರಿಗೆ ಉದ್ಯೋಗ ಸೃಷ್ಟಿಸಿಕೊಡಬೇಕು. ಉಡುಪಿ ಜನ ಬೇರೆಯವರ ಕೆಳಗೆ ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಬೇರೆಯವರಿಗೆ ಕೆಲಸ ಕೊಡುವುದೇ ಹೆಚ್ಚು. ಈ ಭಾಗದ ಜನ ಉದ್ಯೋಗ ಸೃಷ್ಟಿಸುವ ಜನ. ಹೀಗಾಗಿ ಇಲ್ಲಿಂದ ಕಾರವಾರದವರೆಗೂ ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿ, ನುಡಿದಂತೆ ನಡೆಯುತ್ತೇವೆ’ ಎಂದು ಭರವಸೆ ನೀಡಿದರು.

ಮತ್ತೊಂದು ಹಂತದ ಆಪರೇಷನ್ ಕಮಲಕ್ಕೆ ವೇದಿಕೆ ಸಜ್ಜಾಗಿದೆ ಎಂಬ ಎಸ್.ಟಿ. ಸೋಮಶೇಖರ್ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಸೋಮಶೇಖರ್ ಅವರು ಬಹಳ ಉತ್ಸಾಹದಿಂದ ನಮ್ಮ ಪಕ್ಷದಿಂದ ಆ ಪಕ್ಷಕ್ಕೆ ಹೋಗಿದ್ದಾರೆ. ಅವರ ಪಕ್ಷದ ವಿಚಾರವಾಗಿ ಅವರು ಮಾತನಾಡಿದ್ದು, ಅದು ಅವರ ವಿಚಾರ. ಜಿ.ಟಿ ದೇವೇಗೌಡ ಅವರು ಈ ಹಿಂದೆ ಏನು ಮಾತನಾಡಿದ್ದರು, ಮುಂದೆ ಏನು ಮಾಡುತ್ತಾರೆ ಎಂಬುದನ್ನು ಕಾದುನೋಡೋಣ. ಅವರ ಕುಟುಂಬ ನೋವಿನಲ್ಲಿ ಮುಳುಗಿದೆ. ಅವರಿಗೆ ಸಮಯ ನೀಡೋಣ. ಈ ಸಮಯದಲ್ಲಿ ರಾಜಕಾರಣ ಮಾತನಾಡುವುದು ಬೇಡ’ ಎಂದು ತಿಳಿಸಿದರು.

ಪ್ರಮೋದ್ ಮಧ್ವರಾಜ್ ಅವರು ಪಕ್ಷ ಬಿಡುವಾಗ ನನಗೆ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿತ್ತು ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಪಕ್ಷ ಬಿಟ್ಟು ಹೋಗುವಾಗ ಏನಾದರೂ ಹೇಳಬೇಕಲ್ಲಾ ಎಂದು ಈ ರೀತಿ ಹೇಳುತ್ತಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಅವರನ್ನು ಕೇಳಿಯೇ ನೇಮಕ ಮಾಡಲಾಗಿತ್ತು. ಅವರು ಹೇಳಿದಂತೆ ಬ್ಲಾಕ್ ಅಧ್ಯಕ್ಷರ ನೇಮಕ ಮಾಡಲಾಗಿತ್ತು. ಅವರಿಗೆ ಇಲ್ಲಿ ಉಸಿರುಗಟ್ಟುವ ವಾತಾವರಣವಿದ್ದರೆ, ಈಗ ಸ್ವಚ್ಛ ಗಾಳಿಯನ್ನು ತೆಗೆದುಕೊಳ್ಳಲಿ ಬಿಡಿ’ ಎಂದು ಛೇಡಿಸಿದರು.

ಕಾರ್ಕಳದಲ್ಲಿ ಉದಯ್ ಕುಮಾರ್ ಶೆಟ್ಟಿ ಅವರು ಪಕ್ಷ ಬಿಡುತ್ತಾರೆ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾನು ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷ ಮುನ್ನಡೆಲಿದೆ. ಯಾರು ಬೆದರಿಕೆ ಹಾಕುತ್ತಾರೋ ಅವರು ತಮ್ಮ ದಾರಿ ನೋಡಿಕೊಳ್ಳಲಿ. ಪಕ್ಷ ಎಂದರೆ ಕಷ್ಟ ಸುಖ, ಮಳೆ, ಬಿಸಿಲು, ಚಳಿ, ರಾತ್ರಿ ಹಗಲು ಎಲ್ಲವೂ ಇರುತ್ತದೆ. ಎಲ್ಲವನ್ನು ಸಹಿಸಿಕೊಳ್ಳಬೇಕು. ಅದನ್ನು ಬಿಟ್ಟು ನಾನು ಪಕ್ಷ ಬಿಡುತ್ತೇನೆ ಎನ್ನುವುದಾದರೆ ನಾವು ಯಾರಿಗೂ ಬಲವಂತ ಮಾಡುವುದಿಲ್ಲ. ನಮ್ಮ ಪಕ್ಷದ ನಾಯಕತ್ವ, ಸಿದ್ಧಾಂತದ ಮೇಲೆ ನಂಬಿಕೆ ಇರುವವರು ಬರುತ್ತಾರೆ’ ಎಂದರು.

ಬೆಂಗಳೂರಿನಲ್ಲಿ ಮಳೆ ಅವಾಂತರ ಹಾಗೂ ರಾಜಕಾಲುವೆ ಅವ್ಯವಸ್ಥೆ ಕುರಿತ ಪ್ರಶ್ನೆಗೆ, ‘ನಾನು ಈ ವಿಚಾರವಾಗಿ ತೀರ್ಮಾನ ಕೈಗೊಳ್ಳಲು ಸರ್ಕಾರಕ್ಕೆ ಬಿಟ್ಟಿದ್ದೇವೆ. ಅವರು ಏನು ಮಾಡುತ್ತಾರೋ ಮಾಡಲಿ. ನಮ್ಮ ಬಳಿ ಅಧಿಕಾರ ಇದ್ದಿದ್ದರೆ ನಾವು ಹೇಳಬಹುದಾಗಿತ್ತು. ಅವರು ಏನು ಮಾಡುತ್ತಾರೋ ಮಾಡಲಿ, ಜನ ನೋಡುತ್ತಿದ್ದಾರೆ’ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು