News Karnataka Kannada
Wednesday, May 01 2024
ಕರಾವಳಿ

ಜಯಘೋಷದ ನಡುವೆ ರಥವನೇರಿದ ಹತ್ತೂರ ಒಡೆಯ: ನೋಡುಗರನ್ನು ಬೆರಗಾಗಿಸಿದ ಸುಡುಮದ್ದು ಪ್ರದರ್ಶನ

ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವs ಜಾತ್ರೋತ್ಸವದಲ್ಲಿ ಏ.17ರಂದು ರಾತ್ರಿ ಶ್ರೀ ದೇವರ ಬ್ರಹ್ಮರಥೋತ್ಸವವು ಭಕ್ತಿ ಸಂಭ್ರಮದೊಂದಿಗೆ ವೈಭವಯುತವಾಗಿ ನಡೆಯಿತು.
Photo Credit :

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾ ವರ್ಷಾ  ಜಾತ್ರೋತ್ಸವದಲ್ಲಿ ಏ.17ರಂದು ರಾತ್ರಿ ಶ್ರೀ ದೇವರ ಬ್ರಹ್ಮರಥೋತ್ಸವವು ಭಕ್ತಿ ಸಂಭ್ರಮದೊಂದಿಗೆ ವೈಭವಯುತವಾಗಿ ನಡೆಯಿತು. ರಥೋತ್ಸವದ ಮೊದಲು ‘ಪುತ್ತೂರು ಬೆಡಿ’ ಎಂದೇ ಪ್ರಸಿದ್ದಿಯಾಗಿರುವ ವಿಶೇಷ ಸುಡುಮದ್ದುಗಳ ಪ್ರದರ್ಶನ ನಡೆಯಿತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ಬ್ರಹ್ಮರಥೋತ್ಸವ, ಪುತ್ತೂರು ಬೆಡಿ ವೀಕ್ಷಿಸಿ ಪುನೀತರಾದರು.

ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿ, ಶ್ರೀಧರ ತಂತ್ರಿ, ಗುರುಪ್ರಸಾದ್ ಅವರ ಉಪಸ್ಥಿತಿಯೊಂದಿಗೆ ಕಾರ್ಯಕ್ರಮಗಳು ನಡೆದವು. ಬ್ರಹ್ಮರಥೋತ್ಸವದಲ್ಲಿ ದೇವಳದ ಆಡಳಿತಾಧಿಕಾರಿ ಹನುಮರೆಡ್ಡಿ ಮತ್ತು ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಶಾಸಕ ಅಶೋಕ್‌ ಕುಮಾರ್ ರೈ ಅವರ ಉಪಸ್ಥಿತಿಯಲ್ಲಿ ಉತ್ಸವಾದಿಗಳು ನಡೆಯಿತು. ಬ್ರಹ್ಮರಥೋತ್ಸವದ ಮೊದಲು ಆಕರ್ಷಕ ಸುಡುಮದ್ದು ಪ್ರದರ್ಶನ ‘ಪುತ್ತೂರು ಬೆಡಿ’ ಅದ್ದೂರಿಯಾಗಿ ನಡೆಯಿತು. ಸುಮಾರು ರೂ. 8.5 ಲಕ್ಷ ವೆಚ್ಚದ ಸಿಡಿಮದ್ದು ಪ್ರದರ್ಶನ ನಡೆಯಿತು. ಕಾರ್ಕಳದ ರಮಾನಂದ ಮತ್ತು ಪುತ್ತೂರಿನ ನಾಗೇಶ್ ರಾವ್ ಅವರು ಸುಡುಮದ್ದು ಪ್ರದರ್ಶನದ ಗುತ್ತಿಗೆ ವಹಿಸಿಕೊಂಡಿದ್ದರು.

ಏ.17ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ಉತ್ಸವ, ವಸಂತ ಕಟ್ಟೆಪೂಜೆ, ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಸಂಜೆ ಗಂಟೆ 7.45ಕ್ಕೆ ದೇವರು ಒಳಾಂಗಣದಿಂದ ಹೊರಾಂಗಣಕ್ಕೆ ಪ್ರವೇಶ ಮಾಡಿದರು. ಬಳಿಕ ಶ್ರೀ ದೇವರ ಉತ್ಸವದ ಬಳಿಕ ಗಂಟೆ 8.37ಕ್ಕೆ ಕಂಡನಾಯಕ ಕಟ್ಟೆಯಲ್ಲಿ ಕಟ್ಟೆ ಪೂಜೆ ನಡೆಯಿತು. ಬಳಿಕ ಶ್ರೀ ದೇವರಿಗೆ ವಾದ್ಯ, ಬ್ಯಾಂಡ್ ಸೇವೆ ನಡೆಯಿತು.

ಕಂಡನಾಯಕ ಕಟ್ಟೆಯಲ್ಲಿ ಕಟ್ಟೆ ಪೂಜೆ ನಡೆಯಿತು.
ಅದಾದ ಬಳಿಕ ರಾತ್ರಿ ಗಂಟೆ 9.45ಕ್ಕೆ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರ ಹೊರಾಂಗಣ ಪ್ರವೇಶವಾಯಿತು. ಈ ಸಂದರ್ಭ ಶ್ರೀ ದೇವರ ಮತ್ತು ಉಳ್ಳಾಲ್ತಿ ಅಮ್ಮನವರ ಉತ್ಸವ ನಡೆಯಿತು. ಅಲ್ಲಿಂದ ಗಂಟೆ 10ರ ಸುಮಾರಿಗೆ ಶ್ರೀ ದೇವರು ಉಳ್ಳಾಲ್ತಿ ದೈವಗಳ ಭಂಡಾರದ ಜೊತೆ ಅಲಂಕೃತಗೊಂಡ ಬ್ರಹ್ಮರಥದ ಬಳಿ ತೆರಳಿದರು. ಅಲ್ಲಿ ಬ್ರಹ್ಮರಥಕ್ಕೆ ಒಂದು ಸುತ್ತು ಬಂದ ಶ್ರೀ ದೇವರು ಬ್ರಹ್ಮರಥದ ಬಳಿ ಕಾಜುಕುಜುಂಬ ದೈವದ ನುಡಿಗಟ್ಟು ನಡೆಯಿತು. ಶಶಾಂಕ್ ನೆಲ್ಲಿತ್ತಾಯ ಮಧ್ಯಸ್ಥರಾಗಿ ಸಂಪ್ರದಾಯದ ನುಡಿಯನ್ನಾಡಿದರು. ಬಳಿಕ ಶ್ರೀ ದೇವರು ಬ್ರಹ್ಮರಥದ ಎದುರು ಭಕ್ತರಿಗೆ ದರುಶನ ಕುರುಣಿಸಿ ಗಂಟೆ 10.45ಕ್ಕೆ ರಥಾರೂಢರಾದರು. ಇದೇ ಸಂದರ್ಭದಲ್ಲಿ ಬ್ರಹ್ಮರಥ ಪೂಜೆ ಸೇವೆ ಮಾಡಿಸಿದವರಿಗೆ ಕ್ಷೇತ್ರದ ತಂತ್ರಿಗಳು ಪೂಜಾ ಪ್ರಸಾದ ವಿತರಣೆ ಮಾಡಿದರು. ಪುತ್ತೂರು ಬೆಡಿ ಆರಂಭವಾಯಿತು. 10.50 ಗಂಟೆಗೆ ಸಿಡಿಮದ್ದು ಪ್ರದರ್ಶನ ಆರಂಭಗೊಂಡಿತು.

ರಾತ್ರಿ 11.51ಗಂಟೆಗೆ ಬ್ರಹ್ಮರಥೋತ್ಸವ ನಡೆಯಿತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ|ಬ್ರಿಜೇಶ್ ಚೌಟ ಉಪಸ್ಥಿತರಿದ್ದರು. ಬ್ರಹ್ಮರಥ ರಥಬೀದಿಯಲ್ಲಿ ಸಾಗಿ ಮಧ್ಯೆ ತಂತ್ರಿಗಳು ರಥದಿಂದ ಇಳಿದು ಮೂಲ ನಾಗನ ಕಟ್ಟೆಯಲ್ಲಿ ತಂತ್ರ ತೂಗಿ ಬಂದರು. ಬ್ರಹ್ಮರಥದಿಂದ ಇಳಿದ ಶ್ರೀ ದೇವರು ಬಂಗಾರ್ ಕಾಯರ್‌ಕಟ್ಟೆ ಸವಾರಿಯ ಬಳಿಕ ಅಂಕೆತ್ತಿಮಾರ್ ಕಟ್ಟೆಯಲ್ಲಿ ಶ್ರೀ ದಂಡ ನಾಯಕ ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆಯಾಗಿ ಕಟ್ಟೆಪೂಜೆ ನಡೆದು ಮುಂಜಾನೆ ದೇವಳದ ಒಳಗೆ ದೇವರ ಪ್ರವೇಶ, ಶಯನ ನಡೆಯಿತು.

ಜಾತ್ರೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಜಾತ್ರಾ ಗದ್ದೆಯಲ್ಲಿ ಬ್ರಹ್ಮರಥದ ಬಳಿಯಲ್ಲೇ 10 ಅಡಿ ಎತ್ತರದಲ್ಲಿ ಪೊಲೀಸ್ ಚೌಕಿ ಮತ್ತು ಅಯ್ಯಪ್ಪ ಗುಡಿಯ ಬಳಿ ಮಾಹಿತಿ ಕೇಂದ್ರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ದೇವಳದ ವತಿಯಿಂದಲೇ ದೇವಳದ ರಾಜಗೋಪುರದ ಸೋಪಾನ ಮಂಟಪದಲ್ಲಿನ ಮಾಹಿತಿ ಕೇಂದ್ರದಲ್ಲಿ ನಿರಂಜನ ರೈ ಮಠಂತಬೆಟ್ಟು, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಹರಿಣಿ ಪುತ್ತೂರಾಯ, ಗಿರೀಶ್ ಮತ್ತಿತರರು ಉದ್ವೇಷಕರಾಗಿ ಭಕ್ತಾದಿಗಳಿಗೆ ವಿವಿಧ ಮಾಹಿತಿಯನ್ನು ಕ್ಷಣಕ್ಷಣಕ್ಕೂ ನೀಡುತ್ತಿದ್ದರು.ಪೊಲೀಸ್ ಇಲಾಖೆ ವತಿಯಿಂದ ಗದ್ದೆಯ ವಿವಿಧ ಕಡೆಗಳಲ್ಲಿ ಹೆಚ್ಚುವರಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿತ್ತು. ಮಾತ್ರವಲ್ಲದೆ ದೇವಳದ ಸುತ್ತಮುತ್ತ, ವಾಹನ ಪಾರ್ಕಿಂಗ್ ಸ್ಥಳ ಸೇರಿದಂತೆ ಹಲವು ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಜಾತ್ರಾ ಗದ್ದೆಯಲ್ಲಿಯೇ ಪೊಲೀಸ್ ಹೊರ ಠಾಣೆಯನ್ನು ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಅಗ್ನಿ ಶಾಮಕ, ಆರೋಗ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆ, ನಗರಸಭೆಯ ತಾತ್ಕಾಲಿಕ ಮಾಹಿತಿ ಕೇಂದ್ರವನ್ನೂ ತೆರೆಯಲಾಗಿತ್ತು.

ತಾಲೂಕಿನ ವಿವಿಧ ಪ್ರದೇಶಗಳಿಂದ ಬ್ರಹ್ಮರಥೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗಾಗಿ ಕೆಎಸ್‌ಆರ್‌ಟಿಸಿ ಹೆಚ್ಚುವರಿಯಾಗಿ ಬಸ್ಸುಗಳ ಓಡಾಟ ವ್ಯವಸ್ಥೆ ಮಾಡಿತ್ತು.ಖಾಸಗಿ ಬಸ್‌ಗಳ ಸಹಿತ ಇತರ ಟೂರಿಸ್ಟ್ ವಾಹನಗಳೂ ಹೆಚ್ಚುವರಿ ಓಡಾಟ ನಡೆಸಿದವು.

ಜಾತ್ರೋತ್ಸವದಲ್ಲಿ ನಿತ್ಯ ಕಟ್ಟೆ ಪೂಜೆಗಳು ನಡೆಯುತ್ತಿದ್ದು, ಸಾವಿರಾರು ಮಂದಿ ಭಕ್ತರು ಕಟ್ಟೆ ಪೂಜೆ ಸೇವೆ ಮಾಡಿಸುತ್ತಿದ್ದರು. ಏ.14ರಂದು ಸೌರಮಾನ ಯುಗಾದಿ(ವಿಷು) ಸಂದರ್ಭದಲ್ಲಿ 500ಕ್ಕೂ ಮಿಕ್ಕಿ ಕಟ್ಟೆ ಪೂಜೆ ಸೇವೆಯನ್ನು ಭಕ್ತರು ಮಾಡಿದ್ದರು. ಏ.17ರಂದು ರಾತ್ರಿ 60 ಕಟ್ಟೆಪೂಜೆ ಸೇವೆ ನಡೆಯಿತು.ಬಳಿಕ ಬ್ರಹ್ಮರಥದಲ್ಲಿ ಶ್ರೀ ದೇವರು ಆರೂಢರಾದ ಬಳಿಕ ಬ್ರಹ್ಮರಥ ಸೇವಾರ್ಥಿಗಳಿಗೆ ಸಂಕಲ್ಪ ನೆರವೇರಿಸಲಾಯಿತು.ಸುಡು ಮದ್ದು ಪ್ರದರ್ಶನದ ಬಳಿಕ ರಥ ಸ್ವಸ್ಥಾನಕ್ಕೆ ಮರಳಿದ ಬಳಿಕ ಪ್ರಸಾದ ವಿತರಣೆ ನಡೆಯಿತು.74 ಮಂದಿ ಬ್ರಹ್ಮರಥಪೂಜೆ ಸೇವೆ ಮಾಡಿದರು. ಬ್ರಹ್ಮರಥ ಪೂಜೆ ಸೇವೆ ಮಾಡಿಸಿದ ಭಕ್ತರಿಗೆ ರಥ ಬೀದಿಯ ಬಳಿ ನಿಲ್ಲಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬ್ರಹ್ಮರಥ ಎಳೆಯುವ ಸಂದರ್ಭ ಭಕ್ತರು ಸಾಕಷ್ಟು ಮಂದಿ ಸೇರುವುದರಿಂದ ಬ್ರಹ್ಮರಥ ಎಳೆಯುವಲ್ಲಿ ಸಮಸ್ಯೆ ಆಗಬಾರದು ಮತ್ತು ಭಕ್ತರಿಗೆ ರಥ ಬೀದಿ ಬಳಿಯಿಂದ ಮುಂದೆ ಹೋಗುವಲ್ಲಿ ಅವಕಾಶ ಮಾಡಿಕೊಡಲು ರಥ ಬೀದಿಯ ಉದ್ದಕ್ಕೂ ಬಫರ್ ಝನ್ ಅಳವಡಿಸಲಾಗಿತ್ತು. ಈ ವ್ಯವಸ್ಥೆಯಿಂದಾಗಿ ಭಕ್ತರನ್ನು ನಿಯಂತ್ರಿಸಲು ಸುಲಭವಾಗಿತ್ತು.

ಸುಡುಮದ್ದು ಪ್ರದರ್ಶನ ನಡೆದ ಬಳಿಕ ಬ್ರಹ್ಮರಥದ ಮುಂದೆ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ದೇವಳದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮತ್ತು ಮಾಜಿ ಸದಸ್ಯರು,ದೇವಳದ ಆಡಳಿತಾಧಿಕಾರಿ ಹನುಮ ರೆಡ್ಡಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ದೇವಳದ ಮಾಜಿ ಅಡಳಿತ ಮೋಕೇಸರ ಎನ್.ಕೆ ಜಗನ್ನಿವಾಸ ರಾವ್ ಸಹಿತ ಹಲವಾರು ಮಂದಿ ತೆಂಗಿನ ಕಾಯಿ ಒಡೆದರು.

ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಮಾಜಿ ಸದಸ್ಯ ಯು.ಪಿ.ರಾಮಕೃಷ್ಣ, ಉತ್ಸವ ಸಮಿತಿಯ ಅಧ್ಯಕ್ಷ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್,ಜಗದೀಶ್‌ ಶೆಟ್ಟಿ ನೆಲ್ಲಿಕಟ್ಟೆ, ಸುದೇಶ್ ಶೆಟ್ಟಿ, ರವಿಪ್ರಸಾದ್‌ ಶೆಟ್ಟಿ, ನಳಿನಿ ಪಿ ಶೆಟ್ಟಿ, ಅಮರನಾಥ ಗೌಡ ಬಪ್ಪಳಿಗೆ, ಮುಖೇಶ್ ಕೆಮ್ಮಿಂಜೆ, ಪಿ.ವಿ.ದಿನೇಶ್, ಸುಭಾಷ್ ರೈ ಬೆಳ್ಳಿಪ್ಪಾಡಿ, ಮಹಾಬಲ ರೈ ಒಳತ್ತಡ್ಕ, ನಯನಾ ರೈ, ಗಣೇಶ್ ಶೆಟ್ಟಿ ಕೆ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕರುಣಾಕರ ರೈ, ನಿರಂಜನ್ ರೈ, ಉಮೇಶ್‌ ಆಚಾರಿ, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ತಿಮ್ಮಪ್ಪ ಗೌಡ, ಮಾಜಿ ಸದಸ್ಯ ಚಿದಾನಂದ ಬೈಲಾಡಿ, ಕುಂದಾಪುರ ತಾ.ಪಂ ಕಾರ್ಯನಿರ್ವಾಹಕ ಅಕಾರಿ ನವೀನ್ ಭಂಡಾರಿ, ಡಾ.ಸುರೇಶ್ ಪುತ್ತೂರಾಯ, ವಿಶ್ವಾಸ್ ಶೆಣೈ, ಸುದೇಶ್ ಚಿಕ್ಕಪುತ್ತೂರು, ಕಿಟ್ಟಣ್ಣ ಗೌಡ ಸಹಿತ ಹಲವಾರು ಮಂದಿ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು