ಬಂಟ್ವಾಳ: ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನ ಮಕ್ಕಳಿಂದ ಮುಖ್ಯ ಶಿಕ್ಷಕಿಯೊಬ್ಬರು ಸಾವರ್ಕರ್ ಗೆ ಜೈ ಘೋಷ ಹಾಕಿಸಿದ್ದಕ್ಕೆ ವಿವಾದ ಹುಟ್ಟಿಕೊಂಡಿತ್ತು.
ಸ್ವಾತಂತ್ರ್ಯೋತ್ಸವ ದಿನ ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರಿಗೆ ಜೈಕಾರ ಹಾಕಿದ್ದರು. ಈ ವೇಳೆ ಶಾಲೆಯ ಮುಖ್ಯ ಶಿಕ್ಷಕಿ ಘೋಷಣೆಯಂತೆ ವೀರ ಸಾವರ್ಕರ್ ಗೂ ಜೈಕಾರ ಹಾಕಿಸಿದ್ದರು. ಜೈಕಾರ ಹಾಕಿಸಿದ್ದ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬರು ವೈರಲ್ ಮಾಡಿದ್ದರು.
ಇದರಿಂದ ಶಿಕ್ಷಕಿ ಕ್ಷಮೆ ಕೇಳುವಂತೆ ಕೆಲವರು ಗಲಾಟೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಶಾಲೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಸಭೆ ಕರೆಯಲಾಗಿತ್ತು. ಕೆಲ ಪೋಷಕರು ಹಾಗೂ ರಾಜಕೀಯ ಮುಖಂಡರು ಸಭೆಯಲ್ಲಿ ಮುಖ್ಯ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಶಿಕ್ಷಕಿ ಮನನೊಂದು ಕ್ಷಮೆಯಾಚಿಸಿದ್ದಾರೆ. ಅಲ್ಲದೆ ವಿಡಿಯೋ ಮಾಡಿ ಹರಿಬಿಟ್ಟವರ ವಿರುದ್ಧ ಶಿಕ್ಷಕಿ ಅಸಮಾಧಾನ ಹೊರ ಹಾಕಿದ್ದಾರೆ. ಜತೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.