News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಕನಕ ಸಾಹಿತ್ಯ ಸಮ್ಮೇಳನದಲ್ಲಿ ಪ್ರೊ. ಎ.ವಿ. ನಾವಡ

Mangaluru: At the Kanaka Sahitya Sammelana, Prof. A.V. Navada
Photo Credit : News Kannada

ಮಂಗಳಗಂಗೋತ್ರಿ: ಕನಕರ ಕೀರ್ತನೆಗಳನ್ನೂ ಒಳಗೊಂಡಂತೆ ಇಡೀ ದಾಸ ಸಾಹಿತ್ಯವನ್ನು ಊರೂರುಗಳಲ್ಲಿ ಪ್ರಸರಣ ಮಾಡಿದ ಭಜನೆ ಸಾಹಿತ್ಯದ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಅಂಶಗಳ ಕುರಿತು ಅಧ್ಯಯನಗಳು ನಡೆಯಬೇಕು ಎಂದು ವಿದ್ವಾಂಸ ಪ್ರೊ.ಎ ವಿ ನಾವಡ ಹೇಳಿದರು.

ಅವರು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ಮತ್ತು ಕನಕದಾಸ ಸಂಶೋಧನಾ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಎರಡು ದಿನಗಳ ಕನಕ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.

ದಾರ್ಶನಿಕತೆ ಮತ್ತು ವೈಚಾರಿಕತೆಯ ಮೂರ್ತಿರೂಪವಾಗಿದ್ದ ಕನಕದಾಸರು ಎಲ್ಲಾ ಕಾಲಕ್ಕೂ ಪ್ರಸ್ತುತರು. ಎರಡು ದಿವಸದ ಈ ಸಮ್ಮೇಳನವು ಕನಕದಾಸರ ಸಾಹಿತ್ಯದ ಕುರಿತಾದ ಹೊಸ ಚಿಂತನೆಗಳನ್ನು ಹೊಸ ಹೊಳಹುಗಳನ್ನು ಬಿತ್ತುವಲ್ಲಿ ಯಶಸ್ವಿಯಾಗಿದೆ. ಕನಕದಾಸರ ಕುರಿತಾದ ಅಧ್ಯಯನದ ವೈಧಾನಿಕತೆಯಲ್ಲಿ ಇನ್ನಷ್ಟು ಬದಲಾವಣೆಗಳಾಗಬೇಕು. ಕನಕದಾಸರನ್ನು ಮಾತ್ರವಲ್ಲದೆ ಪುರಂದರ, ವಾದಿರಾಜರಂತಹ ಎಲ್ಲಾ ದಾಸರನ್ನೂ ಒಳಗೊಳ್ಳುವಂತೆ ಸಮಗ್ರ ದಾಸ ಸಾಹಿತ್ಯದ ಅಧ್ಯಯನವಾಗಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ. ಸೋಮಣ್ಣ ಹೊಂಗಳ್ಳಿ ಅವರು ಕನಕದಾಸರು ಸಮಾಜದಲ್ಲಿ ಸಮಾನತೆಯನ್ನು ಬಿತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬ್ರಾಹ್ಮಣರು ಬದಲಾಗಬೇಕು, ಪಂಕ್ತಿಭೇದ ಬೇಡ. ಮತಬ್ಯಾಂಕ್ ಕಾರಣಕ್ಕೆ ಕನಕ ಚಿಂತನೆಗಳು ದಾರಿತಪ್ಪದಿರಲಿ ಎಂದರು. ದಕ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಜಯಂತಿಯ ದಿನ ಮಾತ್ರ ಕನಕನ ನೆನಪು ಮಾಡುವುದಲ್ಲ. ಮತ್ತೆ ಮತ್ತೆ ಕನಕ ಚಿಂತನೆಗಳು ನಡೆಯಬೇಕು ಎಂದರು.

ಕನಕನ ಭಾಷೆ ಕವಿಗಳಿಗೆ ಮಾದರಿ : ವಸಂತ ಭಾರದ್ವಾಜ

ಸಂಕ್ಷೇಪವಾಗಿ ಗರ್ಭೀಕರಿಸಿ ಹೇಳುವುದು ಕಾವ್ಯದ ದಾರಿ. ಇಂತಹ ಅನೇಕ ಮೇರು ಕಾವ್ಯಗಳನ್ನು ರಚಿಸಿರುವ ಮಹಾ ಕವಿಪ್ರತಿಭೆಯಾಗಿರುವ ಕನಕನ ಭಾಷೆ ಕವಿಗಳಿಗೆ ಅಭ್ಯಾಸ ಯೋಗ್ಯ. ಕನಕದಾಸರಂತೆಯೇ ನವೋದಯದ ಆಚಾರ್ಯಪುರುಷರ ಕವಿತೆಗಳ ಅಧ್ಯಯನವಾಗಬೇಕು” ಎಂದು ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರಾದ ಡಾ. ಕಭ್ಬಿನಾಲೆ ವಸಂತ ಭಾರಧ್ವಾಜ ಹೇಳಿದರು.

ಕನಕ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕವಿಗಳಾಗಿ ಡಾ. ವಸಂತಕುಮಾರ್ ಪೆರ್ಲ, ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ರಾಧಾಕೃಷ್ಣ ಉಳಿಯತ್ತಡ್ಕ, ಟಿ. ಎ. ಎನ್. ಖಂಡಿಗೆ ಮತ್ತು ಡಾ. ಸತ್ಯಮಂಗಲ ಮಹಾದೇವ ತಮ್ಮ ಕವಿತೆಗಳನ್ನು ವಾಚಿಸಿದರು. ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಕೇಂದ್ರದ ಸಮನ್ವಯಾಧಿಕಾರಿ ಎಂ.ಆರ್ ಸತ್ಯನಾರಾಯಣ, ಮಂಗಳೂರು ವಿವಿಯ ಕನಕ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಉಪಸ್ಥಿತರಿದ್ದರು.

ಸಮ್ಮೇಳನದಲ್ಲಿ ಕನಕ ಸಾಹಿತ್ಯದ ನೃತ್ಯ ಸಾಧ್ಯತೆಯ ಕುರಿತು ಪ್ರಸಿದ್ಧ ನೃತ್ಯವಿದುಷಿ ಡಾ. ಕೆ.ಎಸ್ ಪವಿತ್ರ ಸೋದಾಹರಣ ಉಪನ್ಯಾಸ ನೀಡಿದರು. ಮಂಜುಳಾ ಜಿ ರಾವ್ ಇರಾ ಮತ್ತು ಕೊಳಲು ಸಂಗೀತ ವಿದ್ಯಾಲಯದ ತಂಡದಿಂದ ಕನಕ ಸಂಗೀತ ಹಾಗೂ ಡಾ. ಶಿವಕುಮಾರ್ ಬೇಗಾರ್ ಮತ್ತು ಬಳಗದವರಿಂದ ಕನಕ ನಳಚರಿತ್ರೆ ಯಕ್ಷಗಾನ ನಡೆಯಿತು.

ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಸ್ವಾಗತಿಸಿದರು. ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಕೇಂದ್ರದ ಸಮನ್ವಯಾಧಿಕಾರಿಗಳಾದ ಎಂ. ಆರ್. ಸತ್ಯನಾರಾಯಣ ವಂದಿಸಿದರು. ನವ್ಯಶ್ರೀ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು