News Karnataka Kannada
Wednesday, May 01 2024
ಮಂಗಳೂರು

ಬೆಳ್ತಂಗಡಿ: ರೋಚಕ ಕಾರ್ಯಾಚರಣೆ – ನಾಪತ್ತೆಯಾಗಿದ್ದ ಚಾರಣಿಗ ಚಾರ್ಮಾಡಿ ಅರಣ್ಯದಲ್ಲಿ ಪತ್ತೆ

In a thrilling operation, a missing trekker was found in charmadi forest
Photo Credit : News Kannada

ಬೆಳ್ತಂಗಡಿ: ದ.ಕ ಮತ್ತು ಚಿಕ್ಕಮಗಳೂರು ಜಿಲ್ಲಾ ಗಡಿ ಪ್ರದೇಶದ ಚಾರ್ಮಾಡಿ ಅರಣ್ಯ ಪ್ರದೇಶಕ್ಕೆ ಚಾರಣಕ್ಕಾಗಿ ಬಂದಿಳಿದಿದ್ದ‌ ಮಹಾರಾಷ್ಟ್ರದ ನಾಗಪುರ ನಿವಾಸಿ, ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಪರೇಶ್ ಕಿಶಾನ್ ಲಾಲ್ ಅಗರ್ವಾಲ್ ಅವರನ್ನು ಆಹೋರಾತ್ರಿ ಕಾರ್ಯಾಚರಣೆಯ ಬಳಿಕ ಸ್ಥಳೀಯರ ತಂಡ ಪತ್ತೆಹಚ್ಚಿದ್ದು ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ರಾಣಿಝರಿ ಪಾಲ್ಸ್ ಕಡೆಯಿಂದ ಬಂಡಾಜೆ ಎರ್ಮಾಯಿ ಫಾಲ್ಸ್ ಅರಣ್ಯದ ಕಡೆಗೆ ಇಳಿದಿದ್ದ ಚಾರಣಿಗನನ್ನು ರಾತ್ರಿಯಾಗುತ್ತಿದ್ದಂತೆ ಹಸಿವಿನಿಂದ ನಿತ್ರಾಣಕ್ಕೊಳಗಾಗಿ ದಾರಿ ಕಾಣದೆ ಅರಣ್ಯದಲ್ಲಿ ಬಾಕಿಯಾಗಿದ್ದ.

ದಾರಿ ಕಾಣದೆ ಬೆಂಗಳೂರಿನ‌ ಸಹೋದ್ಯೋಗಿಗೆ ತಾನಿರುವ ಲೊಕೇಶನ್ ಕಳಿಸಿದ್ದ. ಅವರು ಪೊಲೀಸ್ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿದ್ದರು. ಅಲ್ಲದೆ ಆ ಸಂದೇಶವನ್ನು ಬೆಂಗಳೂರಿನ ಗ್ರೂಪಿನಲ್ಲಿ‌ ಹಂಚಿಕೊಂಡಿದ್ದರು. ಅದು ಸಂಜೆ ವೇಳೆಗೆ ಚಾರ್ಮಾಡಿಯ ಹೊಟೇಲ್ ಹನೀಫ್ ಅವರಿಗೆ ಗೊತ್ತಾಗಿ ಅವರು ಚಾರ್ಮಾಡಿಯ ಗ್ರೂಪಿಗೆ ಹಾಕಿದ್ದರು. ಇದನ್ನು ‌ನೋಡಿದ ಸಿನಾನ್ ಚಾರ್ಮಾಡಿ ಅವರು ಬಾಳೂರು ಪೊಲೀಸರು ಹಾಗೂ ಬೆಳ್ತಂಗಡಿಯ ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಚಾರ್ಮಾಡಿ ವ್ಯಾಪ್ತಿಯ ಸ್ಥಳೀಯರಾದ ಮುಬಾಶಿರ್(ಮುಬ್ಬು), ಕಾಜೂರಿನ ಎರ್ಮಾಲ್‌ಪಲ್ಕೆ,ಅಶ್ರಫ್, ಕಾಜೂರಿನ ಶಂಶು, ನಾಸೀರ್ ಕಾಜೂರ್ ಇವರ ತಂಡ ಸೇರಿ ಹುಡುಕಾಟ ಕಾರ್ಯಾಚರಣೆ ನಡೆಸಿದರು.

ಇತ್ತ ಸುಧೀರ್ ವಳಂಬ್ರ, ಜನಾರ್ದನ, ಪೊಲೀಸ್ ಇಲಾಖೆಯ ಶಶಿಧರ, ಆಸಿಫ್ ಸೋಮಂತಡ್ಕ, ಜೀವರಕ್ಷಕ ಆಂಬುಲೆನ್ಸ್ ಚಾಲಕ ಜಲೀಲ್ ಬಾಬಾ ಇವರುಗಳು ಸೇರಿ ಪತ್ತೆಗೆ ಸಾತ್ ಕೊಟ್ಟಿದ್ದಾರೆ.

ರಾತ್ರಿ ಇಡೀ ಕಾರ್ಯಾಚರಣೆ: ಸಿನಾನ್ ಚಾರ್ಮಾಡಿ ನೇತೃತ್ವದ ಒಂದು ತಂಡ ಮತ್ತು ಜಲೀಲ್, ಶಿಶಧರ ಅವರ ನೇತೃತ್ವದ ಎರಡು ತಂಡಗಳಾಗಿ ಪತ್ತೆ ಕಾರ್ಯಾಚರಣೆ ನಡೆದಿದೆ. ಸಂಜೆ 5 ಗಂಟೆಗೆ ಹೊರಟ ತಂಡ 12 ಗಂಟೆ ರಾತ್ರಿಗೆ ದಟ್ಟ ಅರಣ್ಯದಲ್ಲಿ ಆತ ನನ್ನು ಪತ್ತೆ ಹಚ್ಚಿದೆ. ಆವರಿಸಿದ ಕತ್ತಲೆ, ಜಾರುವ ಬಂಡೆಕಲ್ಲುಗಳ ಅಪಾಯಕಾರಿ ಇಳಿಜಾರು ಪ್ರದೇಶ, ಇಂಬಳಗಳ ತೀವ್ರ ಕಾಟ ಇದರ ಮಧ್ಯೆ ಮರಗಳ ಮೇಲೆ ಹತ್ತಿಕೊಂಡು ಸಾಹಸಮಯವಾಗಿ ತಂಡ ಅಲ್ಲಿ ತಲುಪುವಷ್ಟರಲ್ಲಿ ಟೆಕ್ಕಿ  ಹಸಿವು,ಮತ್ತು ಭಯದಿಂದ ತತ್ತರಿಸಿ ತೀವ್ರ ಬಸವಳಿದು ಹೋಗಿದ್ದ. ಬಿಸ್ಕೆಟ್ ಮತ್ತು ಪಾನೀಯ ಕುಡಿಸಿ ಸ್ವಲ್ಪ ಸುಧಾರಿಸಿಕೊಂಡು ಅಲ್ಲಿಂದ ಆತನನ್ನು ಹೊತ್ತುಕೊಂಡು ಬೆಳಗ್ಗೆ 4.30 ರ ವೇಳೆಗೆ ಕಾಜೂರಿಗೆ ಕರೆತರಲಾಯಿತು. ತಂಡಕ್ಕೆ ಅಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಷ್ಟರಲ್ಲಿ ಎಲ್ಲರೂ ದೈಹಿಕವಾಗಿ ಸೋತುಹೋಗಿದ್ದರು.

ಟೆಕ್ಕಿ ಸಿಲುಕಿಕೊಂಡಿದ್ದ‌ ಪ್ರದೇಶ‌ದಲ್ಲಿ ಸಮರ್ಪಕ ನೆಟ್ವರ್ಕ್ ಕೂಡ ಇರಲಿಲ್ಲ. ಆಗಾಗ ಅಲ್ಪ ಸ್ವಲ್ಪ ಸಂಪರ್ಕ ಬಳಸಿ ಕೊನೆಗೂ ಆತನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಎದುರಿಗೇ ಸಿಕ್ಕಿದ ಕಾಡಾನೆಯಿಂದ ತಂಡ ಪಾರು:  ಯನ್ನು ಸುರಕ್ಷಿತವಾಗಿ ಕರೆತರುವ ಮಧ್ಯೆ ಕಡಿರುದ್ಯಾವರ, ಮಿತ್ತಬಾಗಿಲು ಗ್ರಾಮದ ವ್ಯಾಪ್ತಿಗೆ ಬರುತ್ತಿದ್ದಂತೆ ಬೆಳಗ್ಗಿನ ಜಾವಾ 4 ಗಂಟೆಗೆ ಕಾಡಾನೆಯೊಂದು ತಂಡಕ್ಕೆ ಎದುರಾಯಿತು. ತಂಡದಲ್ಲಿದ್ದ ಜನಾರ್ದನ ಅವರಿಗೆ ಪೂರ್ವ ಮಾಹಿತಿ ಇದ್ದುದರಿಂದ ಸಂಭಾವ್ಯ ಅಪಾಯ ತಪ್ಪದೆ. ಇಳಿಜಾರಿಗೆ ಇಳಿದು ತಂಡ ಆನೆಯಿಂದ ರಕ್ಷಿಸಿಕೊಂಡೆವು ಎಂದು ತಂಡದಲ್ಲಿದ್ದ ಜಲೀಲ್ ಅವರು ಪ್ರತಿಕ್ರಿಯಿಸಿದ್ದಾರೆ.

ಆಂಬುಲೆನ್ಸ್ ಮೂಲಕ ಬಾಳುಪೇಟೆ ಠಾಣೆಗೆ ರವಾನೆ: ಪತ್ತೆಯಾದ ಚಾರಣಿಗ ಇಂಜಿನಿಯರ್ ಅನ್ನು ಉಪಚರಿಸಿ ಬಳಿಕ ಜಲೀಲ್ ಅವರ ಆಂಬುಲೆನ್ಸ್ ಮೂಲಕ ಅವರು ತಂಗಿದ್ದ ರೆಸಾರ್ಟ್‌ಗೆ ಕರೆದೊಯ್ಯಲಾಯಿತು. ಅಲ್ಲಿಂದ ಬ್ಯಾಗ್ ತೆಗೆದುಕೊಂಡು ಅವರು ಅರಣ್ಯಕ್ಕೆ ಪ್ರವೇಶಿಸಿದ್ದ ರಾಣಿಗೇರಿ ಗುಡ್ಡೆಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅವರ ಬೈಕ್ ಅನ್ನು ತೆಗೆದುಕೊಂಡು ಬಳಿಕ ಅವರನ್ನು ಬಾಳುಪೇಟೆ ಠಾಣೆಗೆ ಕರೆದೊಯ್ಯಲಾಯಿತು.

ಒಬ್ಬಂಟಿಯಾಗಿ ಚಾರಣಕ್ಕೆ ಬಂದಿದ್ದ ಇಂಜಿನಿಯರ್ ಬೆಳಗ್ಗೆ ಮ್ಯಾಗಿ ತಿಂದು ಕಾಡಿನ ಕಡೆಗೆ ಬಂದಿದ್ದ. ಸಂಜೆಯಾಗುತ್ತಿದ್ದಂತೆ ಹಸಿವಿನಿಂದ ಬಳಲಿ ದಾರಿ ಕಾಣದೆ ತೊರೆಯ ನೀರು ಸೇವಿಸಿ ಅಲ್ಪ ತ್ರಾಸ ನೀಗಿಸಿಕೊಂಡಿದ್ದ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು