News Karnataka Kannada
Tuesday, April 30 2024
ಮಂಗಳೂರು

ಬಂಟ್ವಾಳ: ವಿವಿಧತೆಯಲ್ಲಿ ಏಕತೆಯೇ ಈ‌ ಮಣ್ಣಿನ‌ ಮೂಲ ಗುಣ- ಶ್ರೀ ಮೋಹನದಾಸ ಸ್ವಾಮೀಜಿ

Bantwal: Unity in diversity is the basic quality of this soil: Sri Mohanadasa Swamiji
Photo Credit : By Author

ಬಂಟ್ವಾಳ: ವಿವಿಧತೆಯಲ್ಲಿ ಏಕತೆಯೇ ಈ‌ ಮಣ್ಣಿನ‌ ಮೂಲ ಗುಣ. ಆದರೆ ಅಧಿಕಾರ, ದುಡ್ಡು, ಲಾಲಸೆಯಲ್ಲಿ ನಾವು ಮುಳುಗಿ ಎಲ್ಲವನ್ನೂ ಮರೆಯುತ್ತಿದ್ದೇವೆ, ಸಾವಿನ ಹಂತದಲ್ಲೂ ಜೀಸಸ್ ಜಗತ್ತಿಗೆ ನೀಡಿದ‌ ಸಂದೇಶವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು.

ಕ್ರಿಸ್ಮಸ್ ಸೌಹಾರ್ದ ಸಂಭ್ರಮ ಸಮಿತಿ ಬಂಟ್ವಾಳ ಇವರ ಆಶ್ರಯದಲ್ಲಿ ಬಂಟ್ವಾಳ ಮತ್ತು ಪಾಣೆಮಂಗಳೂರು ಮಹಿಳಾ ಕಾಂಗ್ರೆಸ್ ಇದರ ಸಹಕಾರದೊಂದಿಗೆ ಮೊಡಂಕಾಪು ಚರ್ಚ್ ಮೈದಾನದಲ್ಲಿ ಮಂಗಳವಾರ ಸಂಜೆ ಆಯೋಜಿಸಲಾದ ಕ್ರಿಸ್ಮಸ್ ಸೌಹಾರ್ದ ಸಂಭ್ರಮ 2022 ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಶಿಲುಬೆಗೇರಿಸುವಂತಹಾ ಸಂಕಟ ಸಂಕಷ್ಟದ ಕ್ಷಣಗಳು ಆಗಾಗ್ಗೆ ಬರುತ್ತಿದೆ, ನಾವೆಲ್ಲರೂ ಜೀಸಸ್ ಕ್ರೈಸ್ತರು ಹೇಳಿದ ಆದರ್ಶದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು.ಧರ್ಮದ ಬೇಲಿಯನ್ನು ಹಾಕಿಕೊಳ್ಳದೆ, ಭಗವಂತನ ಗುಣಗಳನ್ನು ಮೈಗೂಡಿಸಿಕೊಂಡು ಮತ್ಸರದ, ಮತೀಯವಾದದ ಸಂಘರ್ಷಗಳನ್ನು ದೂರ ಮಾಡಿಕೊಳ್ಳಬೇಕಿದೆ ಎಂದವರು ಕರೆ ನೀಡಿದರು.

ಬಂಟ್ವಾಳ ವಲಯ ಪ್ರಧಾನ ಧರ್ಮಗುರು ವಂ| ವಲೇರಿಯನ್‌ ಡಿ’ಸೋಜ ಕಾರ್ಯಕ್ರಮವನ್ನು ಉದ್ಘಾಟಿಸಿಮಾತನಾಡಿ, ಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ಸೇವೆ ಮಾಡಿದರೆ ಭಗವಂತನ ದರ್ಶನವಾಗುತ್ತದೆ ಎಂದರು.

ಕಿನ್ನಿಗೋಳಿ ಇಮ್ಯಾಕುಲೇಟ್ ಕನ್ಸೆಪ್ಶನ್ ಚರ್ಚ್ ನ ಧರ್ಮಗುರು ವಂ। ಪಾವುಸ್ತಿನ್ ಲೋಬೊ ಮಾತನಾಡಿ, ವಿವಿಧತೆಯಲ್ಲಿ ಏಕತೆ ಅದು, ಜಗತ್ತಿನ ನಿಯಮ, ಅದನ್ನು ನಮ್ಮ ಬಾಳಿನಲ್ಲೂ ಅನುಷ್ಠಾನಗೊಳಿಸುವ ಮಾನವೀಯತೆ ನಮಗಿರಬೇಕು ಎಂದರು. ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕಜ| ಮೊಹಮ್ಮದ್ ಕುಂಞ ಸೌಹಾರ್ದ ಸಂದೇಶ ನೀಡಿದರು. ಧರ್ಮದ ಹೆಸರಿನಲ್ಲಿ ಕೋಮು ವಿಷಬೀಜಗಳನ್ನು ಬಿತ್ತುತ್ತಿರುವ ಈ ಸನ್ನಿವೇಶದಲ್ಲಿ ಮನಸ್ಸುಗಳನ್ನು ಒಂದಾಗಿಸುವ ಕೂಟ ಹಮ್ಮಿಕೊಂಡಿರುವುದು ಪ್ರಶಂಸನೀಯ. ದಾರ್ಶನಿಕರು ಹಾಕಿ‌ಕೊಟ್ಟ ಆದರ್ಶದ ಹಾದಿಯಲ್ಲಿ‌ ನಡೆದರೆ ಮಾತ್ರ ಸಂಘರ್ಷ ರಹಿತ ಮಾದರಿ‌ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಅವರು ಏಸುಕ್ರಿಸ್ತರು ನೀಡಿದ ಸಂದೇಶ ವರ್ತಮಾನ ಕಾಲದಲ್ಲಿ ಹೆಚ್ಚು ಅರ್ಥಪೂರ್ಣವಾಗಿ ಅನುಷ್ಠಾನವಾಗಬೇಕಿದೆ, ಅಸಹಿಷ್ಣುತೆ ನಮ್ಮೆಲ್ಲರ ನೆಮ್ಮದಿ ಕೆಡಿಸುತ್ತಿದೆ, ಜನಾಂಗೀಯ ಘರ್ಷಣೆ ನಡೆದ ದೇಶಗಳು ನಾಶವಾಗಿದೆ, ಹೀಗಾಗಿ ನಾವೆಲ್ಲರೂ ಪರಸ್ಪರ ಪ್ರೀತಿಸುವ ಮೂಲಕ ಒಂದು ಮಾನವೀಯ ಸಮಾಜವನ್ನು ಕಟ್ಟುವ ಸಂಕಲ್ಪ ಮಾಡಬೇಕು, ಇದಕ್ಕೆ ಇಂದಿನ ಕಾರ್ಯಕ್ರಮ ಹೆಚ್ಚು ಪೂರಕವಾಗಿದೆ. ದ್ವೇಷ ಮಾಡುವ ಮನಸ್ಸು ಕೊಡದೆ, ಪರಸ್ಪರ ಪ್ರೀತಿಸುವ ಮನಸ್ಸನ್ನು ದೇವರು ಎಲ್ಲರಿಗೂ ದಯಪಾಲಿಸಬೇಕು. ದ್ವೇಷಕ್ಕೆ ಪ್ರೀತಿ ಉತ್ತರವಾಗಲಿ, ಹಿಂಸೆಗೆ ಅಹಿಂಸೆ ಉತ್ತರವಾಗಬೇಕಿದೆ ಎಂದವರು ಆಶಯ ವ್ಯಕ್ತಪಡಿಸಿದರು.

ಬಂಟ್ವಾಳ ಬ್ಲಾಕ್ ಮಹಿಳಾ‌ಕಾಂಗ್ರೇಸ್ ಅಧ್ಯಕ್ಷೆ ಲವೀನಾ ವಿಲ್ಮಾ ಮೊರಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ರಿಸ್ಮಸ್ ಸೌಹಾರ್ದ ಸಂಭ್ರಮ ಸಮಿತಿ ಬಂಟ್ವಾಳ ಇದರ ಸಂಚಾಲಕ ಪಿಯೂಸ್ ಎಲ್ ರೊಡ್ರಿಗಸ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಮಾಜದಲ್ಲಿ ಶಾಂತಿನೆಲೆಯಾಗಲು ಸೌಹಾರ್ದತೆ ಅತೀ ಅಗತ್ಯವಾಗಿದ್ದು, ಕ್ರಿಸ್ಮಸ್ ನೀಡುವ ಸಂದೇಶದ ಮೂಲಕ ಸಮಾಜವನ್ನು ಜಾಗೃತ ಗೊಳಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದವರು ಹೇಳಿದರು.

ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿ, ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಜಯಂತಿ ಪೂಜಾರಿ ವಂದಿಸಿದರು.

ಕ್ರಿಸ್ಮಸ್ ಸೌಹಾರ್ದ ಸಂಭ್ರಮ ಸಭಾ ಕಾರ್ಯಕ್ರಮಕ್ಕೂ ಮುನ್ನ ಬಿಸಿರೋಡಿನ ಸರ್ಕಲ್ ಬಳಿಯಿಂದ ಸೌಹಾರ್ದ ಬೈಕ್ ರ್ಯಾಲಿ ಹಾಗೂ ಕ್ರಿಸ್ಮಸ್ ಸ್ತಬ್ಧ ಚಿತ್ರಗಳನ್ನೊಳಗೊಂಡ ವಾಹನ ಜಾಥವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿದರು. ಕ್ರಿಸ್ಮಸ್ ಸೌಹಾರ್ದ ಸಂಭ್ರಮ ಸಮಿತಿ ಬಂಟ್ವಾಳ ಇದರ ಸಂಚಾಲಕ ಪಿಯೂಸ್ ಎಲ್ ರೊಡ್ರಿಗಸ್, ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಅಬ್ಬಾಸ್ ಅಲಿ, ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು