ಮಂಗಳೂರು: ಭಾರೀ ಮಳೆಗೆ ಮಂಗಳೂರು ನಗರ ಹೊರವಲಯದ ತಲಪಾಡಿಯ ಕಿನ್ಯಾ ಗ್ರಾಮದ ಬೆಳರಿಂಗೆ ಸ.ಹಿ.ಪ್ರಾ.ಶಾಲೆ ಕಟ್ಟಡ ಕುಸಿದ ಘಟನೆ ನಡೆದಿದೆ. ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡ ರಾತ್ರಿ ವೇಳೆ ಕುಸಿದ ಪರಿಣಾಮ ಸಂಭಾವ್ಯ ಅಪಾಯವೊಂದು ತಪ್ಪಿದಂತಾಗಿದೆ.
ಈ ಶಾಲೆಯಲ್ಲಿ 127 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿರುವ ಬಗ್ಗೆ ಕಳೆದ ವರ್ಷವೇ ಶಿಕ್ಷಣಾಧಿಕಾರಿಗಳಿಗೆ ಶಾಲಾ ಅಭಿವೃದ್ಧಿ ಸಮಿತಿ ಹಲವಾರು ಬಾರಿ ದೂರು ನೀಡಿದೆ.
ಈ ವೇಳೆ ಪರಿಶೀಲನೆಗೆ ಸ್ಥಳಕ್ಕೆ ಬಂದಿದ್ದ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ನಿತಿನ್ ಎಂಬವರು ಶಾಲಾ ಕಟ್ಟಡ ಗಟ್ಟಿಮುಟ್ಟಾಗಿದೆ ಎಂದು ಸರ್ಟಿಫಿಕೇಟ್ ನೀಡಿ ಹೋಗಿದ್ದರು. ಆದರೆ ಇದೀಗ ಶಾಲೆ ಆರಂಭವಾದ ಕೆಲವೇ ದಿನಗಳಲ್ಲಿ ಸುರಿದ ಮಳೆಗೆ ಕಟ್ಟಡ ಸಂಪೂರ್ಣ ಕುಸಿದಿದೆ.