News Karnataka Kannada
Monday, April 29 2024
ಮಂಗಳೂರು

ಕರಾವಳಿಯಲ್ಲಿ 13 ಕೋಟಿ ರೂ. ಮೊತ್ತದಲ್ಲಿ ಡಾಲ್ಫಿನ್ ಸಂರಕ್ಷಣೆ ಕೇಂದ್ರ: ಡಾ.ದಿನೇಶ್ ಕುಮಾರ್ ವೈ.ಕೆ

Mng
Photo Credit :

ಮಂಗಳೂರು: ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಜೀವ ವೈವಿಧ್ಯದಷ್ಟೇ ಪ್ರಾಮುಖ್ಯಯಿರುವ ಅರಬೀ ಸಮುದ್ರದ ಜಲ ಜೀವ ವೈವಿಧ್ಯವನ್ನು ಸಂರಕ್ಷಿಸುವ ಉದ್ದೇಶದಿಂದ ಕರಾವಳಿ ಪ್ರದೇಶದಲ್ಲಿ 13 ಕೋಟಿ ರೂ. ಮೊತ್ತದಲ್ಲಿ ಡಾಲ್ಫಿನ್ ರೆಸ್ಕ್ಯೂ ಸೆಂಟರ್ ಸ್ಥಾಪಿಸಲಾಗುತ್ತಿದೆ ಎಂದು ಮಂಗಳೂರು ಅರಣ್ಯ ಉಪ ಸಂರಕ್ಷಣಾಧಿಕಾರಿ (ಡಿಸಿಎಫ್) ಡಾ.ದಿನೇಶ್ ಕುಮಾರ್ ವೈ.ಕೆ. ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ದಕ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮುದ್ರದಲ್ಲಿ 3680 ಬಗೆಯ ಮೀನಿನ ಸಂತತಿಗಳಿವೆ. ಇದರ ಶೇ.15ರಷ್ಟು ಸಂತತಿ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿವೆ. ಅದರಲ್ಲಿ 74 ಪ್ರಭೇದಗಳನ್ನು ಅನುಸೂಚಿತ ಎಂದು ಗುರುತಿಸಲಾಗಿದೆ. ಇವುಗಳ ಸಂರಕ್ಷಣಾ ಕೇಂದ್ರ ಸ್ಥಾಪನೆಯ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದು, ಆದ್ಯತೆ ನೀಡಲು ಪ್ರಧಾನ ಮಂತ್ರಿ ಆಸಕ್ತಿ ತೋರಿಸಿ ಅನುಮೋದನೆ ಸಿಕ್ಕಿದೆ ಎಂದರು.

ಡಾಲ್ಫಿನ್ ಸಂರಕ್ಷಣಾ ಕೇಂದ್ರದ ಪ್ರಮುಖ ಕಚೇರಿ ಮಂಗಳೂರಿನ ತಣ್ಣೀರುಬಾವಿಯಲ್ಲಿ ಸ್ಥಾಪನೆಯಾಗಲಿದೆ. ಅನುಸೂಚಿತ ಮೀನುಗಳ ಬಗ್ಗೆ ಜಾಗೃತಿ ಮೂಡಿಸುವುದು, ದಡಕ್ಕೆ ಬಂದು ಬಿದ್ದರೆ ಅವುಗಳ ರಕ್ಷಣೆ ಮತ್ತು ಚಿಕಿತ್ಸೆ, ಮೀನುಗಾರರ ಬಲೆಗೆ ಬಿದ್ದರೆ ಅವುಗಳನ್ನು ಮರಳಿ ಸಮುದ್ರಕ್ಕೆ ಬಿಡಲು ಸೂಚನೆ, ಹಾಗೆ ಸಮುದ್ರಕ್ಕೆ ಬಿಟ್ಟವರಿಗೆ ಪ್ರೋತ್ಸಾಹ ಇತ್ಯಾಗಿ ಉದ್ದೇಶ ಹೊಂದಿದೆ ಎಂದು ಅವರು ಹೇಳಿದರು.

ಕರಾವಳಿ ಪರಿಸರ ಸಂರಕ್ಷಣೆ: ಕರಾವಳಿಯಲ್ಲಿ ನಿರಂತರ ನಡೆಯುತ್ತಿರುವ ಕಡಲ್ಕೊರೆತ ತಡೆಯುವ ಉದ್ದೇಶದಿಂದ ಮರಳನ್ನು ಹಿಡಿದಿಟ್ಟುಕೊಳ್ಳುವ ಗಿಡ ಬೆಳೆಸಲು ಇಕೋ ರೆಸ್ಟೋರೇಶನ್ ಎಂಬ ಪರಿಸರ ಸಂರಕ್ಷಣೆ ಯೋಜನೆಗೆ ಸರಕಾರ ಮಂಜೂರಾತಿ ನೀಡಿದೆ. ಮಂಗಳೂರಿನ ಎರಡು ಮತ್ತು ಕುಂದಾಪುರದ ಎರಡು ಕಡೆ ಇಂಥ ಯೋಜನೆ ಮುಂದಿನ ವರ್ಷ ರೂಪಿಸಲಾಗುವುದು ಎಂದು ಹೇಳಿದರು.

ಶಾಶ್ವತ ನರ್ಸರಿ: ಜಿಲ್ಲೆಯ ಜನರು ವರ್ಷದ ಯಾವ ಸಂದರ್ಭದಲ್ಲಿ ಬಂದರೂ ಗಿಡ ಪೂರೈಕೆ ಮಾಡಲು ಬೇಕಾದ ಶಾಶ್ವತ ನರ್ಸರಿ ನಿರ್ಮಾಣಕ್ಕೆ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಇದಕ್ಕೆ ಸುಮಾರು 12 ಎಕರೆ ಜಾಗ, ನೀರಿನ ವ್ಯವಸ್ಥೆ, ಗ್ರೀನ್ ಹೌಸ್ ಇತ್ಯಾದಿಗಳ ಅಗತ್ಯವಿದೆ ಎಂದು ಅವರು ಹೇಳಿದರು.

ಹಣ್ಣು ನೆಡು ತೋಪು: ನಾಡಿನಲ್ಲಿ ಕಾಡು ಪ್ರಾಣಿಗಳ ಉಪಟಳ ತಪ್ಪಿಸಲು ಅರಣ್ಯದ ಪಕ್ಕದಲ್ಲೇ ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ಹಣ್ಣು ಹಂಪಲುಗಳ ನೆಡು ತೋಪು ಬೆಳೆಸಲು ನಿರ್ಧರಿಸಿದ್ದೇವೆ. ಪ್ರತೀ ತಾಲೂಕಿನಲ್ಲೂ ಹಣ್ಣು ಗಿಡ ಬೆಳೆಸಲು ನಿರ್ಧರಿದ್ದು, ಪೈಕಸ್, ಹಲಸು, ಮೈನರ್ ಫ್ರುಟ್ಸ್ ಗಿಡಗಳನ್ನು ನೆಡಲಾಗುವುದು. ಇವು ಪ್ರಾಣಿಗಳಿಗೆ ಹಣ್ಣು ನೀಡಲಿವೆ. ಒಮ್ಮೆ ಹಣ್ಣು ಸಿಕ್ಕಿದರೆ ಪ್ರತಿ ವರ್ಷ ಪ್ರಾಣಿಗಳು ಅದನ್ನು ಹುಡುಕಿಕೊಂಡು ಬರುತ್ತವೆ ಎಂದರು.

ಸ್ನೇಕ್ ಕ್ಯಾಚರ್ಸ್ ಕ್ಲಬ್: ಕರಾವಳಿಯ ಎರಡು ಜಿಲ್ಲೆಗಳಲ್ಲಿ ಹಾವುಗಳ ಸಂಖ್ಯೆ ಹೆಚ್ಚಿದ್ದು, ಅದನ್ನು ಹಿಡಿಯುವವರೂ ತುಂಬಾ ಇದ್ದಾರೆ. ಹಾವು ಹಿಡಿಯುವವರನ್ನು ಸಂಘಟಿಸಿ, ಅವರಿಗೆ ಸೂಕ್ತ ತರಬೇತಿ ಹಾಗೂ ಪ್ರಮಾಣಪತ್ರ ನೀಡಲು ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಎರಡು ಹಂತದ ಸಭೆ ನಡೆದಿದೆ ಎಂದರು.

ಬಿತ್ತನೆ ಅಭಿಯಾನ: ರಾಜ್ಯದಲ್ಲಿ ಪ್ರಥಮ ಬಾರಿ ವಿದ್ಯಾರ್ಥಿಗಳಿಗೆ ಬೀಜ ಬಿತ್ತನೆ ಅಭಿಯಾನವನ್ನು ಮುಂದಿನ ವಾರ ಆಯೋಜಿಸಲಾಗಿದೆ. ಶಾಲಾ ಮಕ್ಕಳಿಗೆ ಸಸ್ಯ ಬೆಳೆಸುವ ಬಗ್ಗೆ ಮಾಹಿತಿ ನೀಡುವುದು, ಮಕ್ಕಳಿಂದ ಬೀಜ ಸಂಗ್ರಹ, ಬಹುಮಾನ ವಿತರಣೆ ನಡೆಯಲಿದೆ ಎಂದರು.

ಕೃಷಿ ಅರಣ್ಯ ಪ್ರೋತ್ಸಾಹ: ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಮಂಗಳೂರು ವಲಯದಲ್ಲಿ 4.41 ಲಕ್ಷ ಗಿಡ ಬೆಳೆಸಿದ್ದು, ಜೂನ್ ತಿಂಗಳಲ್ಲಿ ವಿತರಣೆ ಮಾಡಲಾಗುವುದು. ರೈತರು ಅರಣ್ಯ ಇಲಾಖೆಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಂಡು ಆರ್‍ಟಿಸಿ, ಜಾಗದ ನಕ್ಷೆ ಸಹಿತ ಅರ್ಜಿ ಕೊಟ್ಟರೆ 1 ರೂ. ಮೊತ್ತಕ್ಕೆ ಗಿಡ ಕೊಡುತ್ತೇವೆ. ಗಿಡಗಳನ್ನು ಮೂರು ವರ್ಷ ಚೆನ್ನಾಗಿ ಬೆಳೆಸಿದರೆ ಮೂರು ವರ್ಷಗಳಲ್ಲಿ ಪ್ರತೀ ಗಿಡಕ್ಕೆ 125 ರೂ. ಪ್ರೋತ್ಸಾಹ ಧನ ಕೊಡುತ್ತೇವೆ ಎಂದು ಅವರು ಹೇಳಿದರು.

ದಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು