News Karnataka Kannada
Saturday, May 04 2024
ಕರಾವಳಿ

ಮೆಗಾ ಹಿಟ್ ರಮಾನಾಥ ರೈ ರೋಡ್ ಶೋ: ಹರಿದು ಬಂತು ಜನ ಸಾಗರ 

ರಮಾನಾಥ ರೈ ಹೊಸ
Photo Credit :

ಬಂಟ್ವಾಳ: ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಅವರ ಚುನಾವಣಾ ಪ್ರಚಾರದ ಭಾಗವಾಗಿ ಸೋಮವಾರ ಸಂಜೆ ನಡೆದ ಅಬ್ಬರದ ರೋಡ್ ಶೋದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದು, ಜನಸಾಗರವೇ ಹರಿದು ಬಂದಿದ್ದು, ಬಂಟ್ವಾಳದ ಕೇಂದ್ರ ಸ್ಥಾನ ಬಿ.ಸಿ.ರೋಡ್ ಕೇಸರಿ, ಬಿಳಿ, ಹಸಿರು ಬಣ್ಣದ ಕಾಂಗ್ರೆಸ್‍ನ ತ್ರಿವರ್ಣ ಧ್ವಜಗಳು ಎಲ್ಲೆಡೆ ಕಂಡುಬಂತು.
ರೈಯವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಮುಖ್ಯರಸ್ತೆಯಲ್ಲಿ ಹೆಜ್ಜೆ ಹಾಕುತ್ತಾ ಸಾಗಿ ಬಂದು, ಪೊಳಲಿ ದ್ವಾರದ ಕೈಕಂಬ ಬಳಿ ಹಾಕಿದ್ದ ವೇದಿಕೆಯಲ್ಲಿ ಕೊನೆಯ ಚುನಾವಣಾ ಪ್ರಚಾರಸಭೆ ನಡೆಯಿತು.

ಈ ಸಂದರ್ಭ ಮಾತನಾಡಿದ ಬಂಟ್ವಾಳ‌ಕ್ಷೇತ್ರದ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ,
ಐಶಾರಾಮಿ ಜೀವನ ನಡೆಸುವ ಆಸೆಯಿಂದ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿಲ್ಲ. ಜನಸೇವೆಯ ಉದ್ದೇಶದ ರಾಜಕಾರಣ ನನ್ನದು, ಕ್ಷೇತ್ರದಲ್ಲಿ ಆರು ಬಾರಿ ಗೆಲ್ಲಿಸಿ ಶಾಸಕ, ಸಚಿವನನ್ನಾಗಿ ಮಾಡಿದ್ದೀರಿ. ಮತ್ತೆ 9ನೇ ಬಾರಿಗೆ ಸ್ಪರ್ಧಿಸುವ ಅವಕಾಶವನ್ನು ನೀಡಿದ್ದೀರಿ. ಈ ಋಣವನ್ನು ನಾನು ನನ್ನ ಜನ್ಮಜನ್ಮಾಂತರಕ್ಕೂ ಮರೆಯಲು ಸಾಧ್ಯವಿಲ್ಲ. ಈ ಋಣವನ್ನು ತೀರಿಸುವುದಕ್ಕಾಗಿ ಮತ್ತು ನಿಮ್ಮೆಲ್ಲರ ಸೇವೆಗಾಗಿ ಹಾಗೂ ಕ್ಷೇತ್ರದ ಜನರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುವುದಕ್ಕಾಗಿ ಮತ್ತೊಮ್ಮೆ ಸ್ಪರ್ಧಿಸಿದ್ದೇನೆ ಎಂದರು.

ಕಳೆದ ಚುನಾವಣೆಯಲ್ಲಿ ಸತತವಾಗಿ ಅಪಪ್ರಚಾರದ ಮೂಲಕ ನನ್ನನ್ನು ಸೋಲಿಸಲಾಯಿತು. ಸೋತ ಬಗ್ಗೆ ಬೇಸರವಿಲ್ಲ. ಆದರೆ, ಸೋಲಿಸಿದ ವಿಧಾನದ ಬಗ್ಗೆ ಬೇಸರವಿದೆ ಎಂದು ಮತ್ತೊಮ್ಮೆ ಸ್ಮರಿಸಿದರು. ನನಗೆ ಏನೂ ಸಮಸ್ಯೆಯಿಲ್ಲ, ನಾನು ಆರಾಮವಾಗಿದ್ದೇನೆ ಎಂದು ಕೆಲವರು ಭಾವಿಸಿರಬಹುದು. ಆದರೆ, ನನಗೂ ಕಷ್ಟಗಳಿವೆ, ನಾನೂ ಕಷ್ಟದಲ್ಲಿದ್ದೇನೆ. ನಾನು ನನ್ನ ರಾಜಕೀಯ ಜೀವನದಲ್ಲಿ ಪ್ರಾಮಾಣಿಕತೆಗೆ ಹೆಚ್ಚು ಒತ್ತು ನೀಡಿದವನು. ಭ್ರಷ್ಟಾಚಾರ ರಹಿತ, ಕಳಂಕ ರಹಿತ ಜೀವನ ನಡೆಸಿದವನು ಎಂದು ರೈ ತಿಳಿಸಿದರು.

ಸ್ಟಾರ್ ಪ್ರಚಾರಕರಿಲ್ಲ! : ಯಾವುದೇ ಸ್ಟಾರ್ ಪ್ರಚಾರಕರು ಇಲ್ಲದೆಯೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನನ್ನೊಂದಿಗೆ ಹೆಜ್ಜೆ ಹಾಕಿದ್ದೀರಿ. ಅದಕ್ಕಾಗಿ ನಾನು ನಿಮಗೆ ಚಿರಋಣಿಯಾಗಿದ್ದೇನೆ. ನಾಮಪತ್ರ ಸಲ್ಲಿಕೆಯ ದಿನವೇ ಸಾವಿರಾರು ಸಂಖ್ಯೆಯಲ್ಲಿ ಬಂದು ನನಗೆ ಆಶೀರ್ವದಿಸಿದಿರಿ. ಇದೀಗ ಮತ್ತೆ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹರಸಿದ್ದೀರಿ. ಇನ್ನಿರುವ ಕೆಲವೇ ಗಂಟೆಗಳಲ್ಲಿ ಪ್ರತಿಯೊಬ್ಬರೂ ಶ್ರಮಪಟ್ಟು ಕಾಂಗ್ರೆಸ್ ಅನ್ನು ಬಂಟ್ವಾಳದಲ್ಲಿ ಮತ್ತೊಮ್ಮೆ ಗೆಲ್ಲಿಸಬೇಕು ಎಂದು ರೈ ವಿನಂತಿಸಿದರು.

ಚುನಾವಣೆಯಲ್ಲಿ ಗೆದ್ದಾಗ ನಾನು ಈ ಹಿಂದೆಯೂ ಬೆಂಗಳೂರಿನಲ್ಲಿ ಉಳಿಯದೆ ನಿಮ್ಮ ಜೊತೆಗೇ ಇದ್ದು ಜನಸೇವೆ ಮಾಡಿದ್ದೇನೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ ನೀವು ಪ್ರೀತಿಯಿಂದ ಆಹ್ವಾನ ಕೊಟ್ಟಾಗ ಎಷ್ಟೇ ಸಮಸ್ಯೆಯಿದ್ದರೂ, ನಿಮ್ಮ ಯಾವುದೇ ಕಾರ್ಯಕ್ರಮಗಳಿಗೆ ಬಂದು, ನಿಮ್ಮೆಲ್ಲರ ಕಷ್ಟ-ಸುಖದಲ್ಲಿ ಭಾಗಿಯಾಗಿದ್ದೇನೆ ಎಂದು ರೈ ತಿಳಿಸಿದರು.

ನಾನು ವ್ಯಾಪಾರಿ ಅಲ್ಲ: ನಾನು ವ್ಯಾಪಾರಿ ಅಲ್ಲ, ನನಗೆ ಯಾವುದೇ ವ್ಯವಹಾರಗಳಿಲ್ಲ. ನನ್ನ ವ್ಯವಹಾರಕ್ಕಾಗಿ ಯಾವುದೇ ಅಧಿಕಾರಿ ಮೇಲೆ ಪ್ರಭಾವ ಬೀರಲು ನನಗೆ ರಾಜಕಾರಣದ ಅಗತ್ಯವೂ ಇಲ್ಲ, ವ್ಯವಹಾರವನ್ನು ವೃದ್ಧಿಸಲೂ ನಾನು ರಾಜಕೀಯಕ್ಕೆ ಬಂದಿಲ್ಲ. ಬಂಟ್ವಾಳದ ಯಾವುದೇ ಗುತ್ತಿಗೆದಾರರನ್ನು ಬೇಕಾದರೆ ಕೇಳಿರಿ, ನಾನು ಅವರಿಂದ ಯಾವುದೇ ಪ್ರಯೋಜನ ಬಯಸಿದವನಲ್ಲ ಎಂದು ರೈ ಹೇಳಿದರು.

ಬ್ರಹ್ಮಶ್ರೀ ನಾರಾಯಣಗುರುಗಳ ಅನುಯಾಯಿ : ಚಿಕ್ಕ ವಯಸ್ಸಿನಿಂದಲೇ ಹಿರಿಯರ ಆಶೀರ್ವಾದದೊಂದಿಗೆ ಜನಸೇವೆ ಮಾಡಿಕೊಂಡು ಬಂದವನು. ಎಲ್ಲಾ ಜಾತಿ-ಧರ್ಮದ ಜನರ ಪ್ರೀತಿಯನ್ನು ಪಡೆದವನು. ಯಾವುದೇ ಜಾತಿ-ಧರ್ಮಗಳ ನಡುವೆ ಯಾವುದೇ ತಾರತಮ್ಯ ಮಾಡಿದವನಲ್ಲ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ವಿಚಾರವನ್ನು ಪ್ರತಿಪಾದಿಸಿದ ಬ್ರಹ್ಮಶ್ರೀ ನಾರಾಯಣಗುರುಗಳ ಅನುಯಾಯಿ ನಾನು. ಕುವೆಂಪು, ಅಂಬೇಡ್ಕರ್, ಬಸವಣ್ಣರ ಚಿಂತನೆಯಡಿ ಬದುಕಿ ತೋರಿಸಿದವನು. ಆ ನಿಟ್ಟಿನಲ್ಲಿ ಜನರನ್ನು ಪ್ರೀತಿಸಿದವನು ಎಂದು ರೈ ತಿಳಿಸಿದರು.
ಭಾಷಣ ಆರಂಭಿಸುತ್ತಿದ್ದಂತೆ, ನೆರೆದಿದ್ದ ಜನಸಮೂಹವನ್ನು ನೋಡಿ, ಜನರ ಪ್ರೀತಿ-ಭಾವನೆಗಳನ್ನು ಗಮನಿಸಿ ಮಾತನಾಡಲು ಆರಂಭಿಸಿದ ರೈಯವರು ಭಾವುಕರಾದರು. ಹಲವು ವಿಷಯಗಳನ್ನು ಮಾತನಾಡುವಾಗ ರೈಯವರು ಎರಡ್ಮೂರು ಬಾರಿ ಭಾವುಕರಾದುದು ಕಂಡು ಬಂತು. ಜನರ ನಡುವಿನಿಂದ ರೈಯವರಿಗೆ ಆಗಾಗ ಭರವಸೆಯ ಘೋಷಣೆಗಳು ಮೊಳಗಿದವು. ಸ್ಟಾರ್ ಪ್ರಚಾರಕರಿಲ್ಲದ ಬಗ್ಗೆ ಭರವಸೆಯ ಮಾತುಗಳನ್ನಾಡುತ್ತಿದ್ದ ಕಾರ್ಯಕರ್ತರು, ರೈಯವರೇ ನಮಗೆ ‘ಸ್ಟಾರ್’ ಎಂದು ಹೇಳುತ್ತಿದ್ದರು.

ವೇದಿಕೆಯಲ್ಲಿ ರಾಜಸ್ಥಾನದ ಕಾಂಗ್ರೆಸ್ ಮುಖಂಡ ಆಬಿದ್ ಕಾಗ್ಝಿ ಉಪಸ್ಥಿತರಿದ್ದರು. ಹಿರಿಯ ಮುಖಂಡರಾದ ಬಿ.ಎಚ್. ಖಾದರ್, ಅಶ್ವನಿ ಕುಮಾರ್ ರೈ, ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಸಪಲ್ಯ, ಪ್ರಮುಖರುಗಳಾದ ಪದ್ಮಶೇಖರ್ ಜೈನ್, ಮೊಹಮ್ಮದ್ ಶರೀಫ್, ಲುಕ್ಮಾನ್ ಬಂಟ್ವಾಳ್, ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಅಬ್ಬಾಸ್ ಅಲಿ, ಪಿ.ಎ. ರಹೀಂ, ಸುರೇಶ್ ಜೋರಾ, ಶಬೀರ್ ಸಿದ್ದಕಟ್ಟೆ, ಜಯಂತಿ ಪೂಜಾರಿ, ಲವೀನಾ ವಿಲ್ಮಾ ಮೊರಾಸ್, ಸುಭಾಶ್ ಕೊಲ್ನಾಡು, ಜನಾರ್ಧನ ಚೆಂಡ್ತಿಮಾರ್, ವಾಸು ಪೂಜಾರಿ, ಜೊಸ್ಪಿನ್ ಡಿಸೋಜ, ಜೆಸಿಂತಾ ಡಿಸೋಜಾ, ನವಾಝ್ ಬಡಕಬೈಲ್, ಮೊಹಮ್ಮದ್ ನಂದರಬೆಟ್ಟು, ಪರಮೇಶ್ವರ ಮೂಲ್ಯ, ನಾರಾಯಣ ನಾಯ್ಕ್, ಅಣ್ಣು ಖಂಡಿಗ, ಚಂದ್ರಹಾಸ್ ನಾಯ್ಕ್, ಸಂಪತ್ ಕುಮಾರ್ ಶೆಟ್ಟಿ, ಮೋಹನ್ ಶೆಟ್ಟಿ ಪಂಜಿಕಲ್ಲು, ಮೊಹಮ್ಮದ್ ನಂದಾವರ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು