ಯಾದಗಿರಿ: ವೈದ್ಯರ ನಿರ್ಲಕ್ಷ್ಯದ ಕಾರಣ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ವಾಂತಿ ಮತ್ತು ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವನದುರ್ಗ ಗ್ರಾಮದ ಭೀಮರಾಯ (60) ಎಂಬುವವರನ್ನು ಕುಟುಂಬಸ್ಥರು ಶಹಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು.
ವೈದ್ಯರು ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗೆ ಯಾದಗಿರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ಸೂಚನೆ ನೀಡಿದ್ದಾರೆ. ಅದರಂತೆ ರೋಗಿ ಭೀಮರಾಯ ಅವರ ಪುತ್ರ ತಕ್ಷಣವೇ ಯಾದಗಿರಿ ಜಿಲ್ಲಾಸ್ಪತ್ರೆಗೆ ತಂದೆಯನ್ನು ಕರೆದುಕೊಂಡು ಬಂದು ಸೇರಿಸಿದ್ದಾರೆ.
ರೋಗಿ ಆಸ್ಪತ್ರೆಯಲ್ಲಿ ದಾಖಲಾಗಿ ಎರಡು ಗಂಟೆ ಕಳೆದರೂ ವೈದ್ಯರು ಚಿಕಿತ್ಸೆ ನೀಡಿಲ್ಲ. ಕಾಲಿಗೆ ಬಿದ್ದು ಅಂಗಲಾಚಿದರೂ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ. ಕೊನೆಗೆ ರೋಗಿ ನರಳಿ ನರಳಿ ಆಸ್ಪತ್ರೆಯಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ಚಿಕಿತ್ಸೆ ನೀಡದೆ ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆಂದು ಭೀಮರಾಯ ಅವರ ಪುತ್ರ ಆರೋಪಿಸಿದ್ದಾರೆ. ಯಾದಗಿರಿ ಜಿಲ್ಲಾಸ್ಪತ್ರೆಯ ಮುಂದೆ ಶವವಿಟ್ಟು ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಯಾದಗಿರಿ ಜಿಲ್ಲಾಸ್ಪತ್ರೆ ವೈದ್ಯರ ನಡೆ ವಿರುದ್ಧ ಸಾರ್ವಜನಿಕರು ಕೂಡ ಆಕ್ರೋಶ ಹೊರ ಹಾಕಿದ್ದು ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.