News Karnataka Kannada
Sunday, April 28 2024
ಕಲಬುರಗಿ

ನೀರಿನಂತೆ ಹಣ ಹರಿದರೂ ತುಂಬದ ಕೆರೆ ಕಟ್ಟೆಗಳು

'ದನ, ಕರುಗಳು, ರೈತರ ಹೊಲಗಳಿಗೆ ಆಸರೆಯಾಗಿದ್ದ ಕೆರೆಯಲ್ಲಿ ಹೆಚ್ಚೆಂದ್ರ ಇನ್ನೊಂದ ತಿಂಗಳ ತನಕ ನೀರು ಸಿಗಬಹುದು. ಪೂರ್ತಿ ಬತ್ತಿ ಹೋದ ಮ್ಯಾಲ ನೀರ ಕುಡಿಸಲು ದನಗಳನ್ನ ಎಲ್ಲಿಗೆ ಒಯ್ಯಬೇಕು ಅದ ಗೊತ್ತಾಗ್ತಾ ಇಲ್ರಿ. ಕಟುಕರಿಗೆ ಮಾರಾಕೂ ಮನಸ್ಸು ಬರ್ತಾ ಇಲ್ರಿ.ಕಲಬುರಗಿ ತಾಲ್ಲೂಕಿನ ಕುಮಸಿ ಗ್ರಾಮದ ಕೆರೆಯಂಗಳದಲ್ಲಿ ಜಾನುವಾರು ಮೇಯಿಸುತ್ತಿದ್ದ ರೈತ ನಾಗನಗೌಡ ಕೋಳೂರ ಅವರ ಈ ಮಾತು ರಾಜ್ಯದ ಹಲವು ಗ್ರಾಮಗಳ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತದೆ.
Photo Credit : News Kannada

ಕಲಬುರಗಿ:  ‘ದನ, ಕರುಗಳು, ರೈತರ ಹೊಲಗಳಿಗೆ ಆಸರೆಯಾಗಿದ್ದ ಕೆರೆಯಲ್ಲಿ ಹೆಚ್ಚೆಂದ್ರ ಇನ್ನೊಂದ ತಿಂಗಳ ತನಕ ನೀರು ಸಿಗಬಹುದು. ಪೂರ್ತಿ ಬತ್ತಿ ಹೋದ ಮ್ಯಾಲ ನೀರ ಕುಡಿಸಲು ದನಗಳನ್ನ ಎಲ್ಲಿಗೆ ಒಯ್ಯಬೇಕು ಅದ ಗೊತ್ತಾಗ್ತಾ ಇಲ್ರಿ. ಕಟುಕರಿಗೆ ಮಾರಾಕೂ ಮನಸ್ಸು ಬರ್ತಾ ಇಲ್ರಿ.ಕಲಬುರಗಿ ತಾಲ್ಲೂಕಿನ ಕುಮಸಿ ಗ್ರಾಮದ ಕೆರೆಯಂಗಳದಲ್ಲಿ ಜಾನುವಾರು ಮೇಯಿಸುತ್ತಿದ್ದ ರೈತ ನಾಗನಗೌಡ ಕೋಳೂರ ಅವರ ಈ ಮಾತು ರಾಜ್ಯದ ಹಲವು ಗ್ರಾಮಗಳ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತದೆ.

ರಾಜ್ಯದ ಬಹುತೇಕ ತಾಲ್ಲೂಕುಗಳಲ್ಲಿ ಈ ಬಾರಿ ಬರಗಾಲದ ಛಾಯೆ ಆವರಿಸಿದೆ. ಬಯಲುಸೀಮೆ ಅಷ್ಟೇ ಅಲ್ಲ; ಮಲೆನಾಡ ಸೆರಗಿನ ಜಿಲ್ಲೆಗಳಲ್ಲಿನ ಕೆರೆಗಳೂ ಬತ್ತುವ ಹಂತ ತಲುಪಿವೆ. ಗ್ರಾಮದ ಕೆರೆಗಳಿಗೆ ಕಾಯಕಲ್ಪ ನೀಡಲು ರಾಜ್ಯದ ಪ್ರಮುಖ ನದಿಗಳಾದ ಕೃಷ್ಣಾ, ಕಾವೇರಿ, ತುಂಗಭದ್ರಾ, ಮಲಪ್ರಭಾ, ಭೀಮಾ, ಕಬಿನಿ, ವರದಾ, ಬೋರಿಹಳ್ಳ, ಬೆಣ್ಣೆತೊರಾ, ನಾಗರಾಳ ಜಲಾಶಯಗಳಿಂದ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಗಳನ್ನು ಸಣ್ಣ ನೀರಾವರಿ ಇಲಾಖೆ ಕೈಗೆತ್ತಿಕೊಂಡಿದೆ. ಆದರೆ, ಕಳಪೆ ಸಾಮಗ್ರಿ ಬಳಕೆ, ಸಕಾಲಕ್ಕೆ ಅನುದಾನ ಬಿಡುಗಡೆಯಾಗದಿರುವುದು, ಯೋಜನೆ ಪೂರ್ಣಗೊಳಿಸುವಲ್ಲಿ ಬದ್ಧತೆಯ ಕೊರತೆಯಿಂದಾಗಿ ಹಲವೆಡೆ ಯೋಜನೆಗಳು ವಿಫಲವಾಗಿವೆ. ರಾಜ್ಯದಪ್ರಮುಖ ಕೆರೆಗಳನ್ನು ತುಂಬಿಸುವ ಸರ್ಕಾರದ ಆಶಯ ‍ಪರಿಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ.

ಉದಾಹರಣೆಗೆ, ಭದ್ರಾ ಮತ್ತು ತುಂಗಾ ಜಲಾಶಯಗಳಿಂದ ನಾಲೆಗೆ ನೀರು ಹರಿಸಲು ‘ಭದ್ರಾ ಮೇಲ್ದಂಡೆ’ ಯೋಜನೆ ರೂಪಿಸಿ ಎರಡು ದಶಕಗಳೇ ಕಳೆದಿವೆ. ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಯ 367 ಕೆರೆಗಳ ಒಟ್ಟು ಸಾಮರ್ಥ್ಯದ ಶೇ 50ರಷ್ಟು ತುಂಬಿಸುವುದಾಗಿ ರೈತರಿಗೆ ಆಶ್ವಾಸನೆ ನೀಡಲಾಗಿತ್ತು. ತರೀಕೆರೆ, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಕೆರೆಗಳಿಗೆ ಭದ್ರೆಯ ನೀರು ಹರಿಸುವ ಕಾಮಗಾರಿ ಇನ್ನೂಪ್ರಗತಿಯಲ್ಲಿದೆ. ಈವರೆಗೆ ₹ 6 ಸಾವಿರ ಕೋಟಿ ಸುರಿದರೂ ಬಯಲುಸೀಮೆ ಕೆರೆಗಳಿಗೆ ನೀರು ಬಂದಿಲ್ಲ!

ತುಮಕೂರು ಜಿಲ್ಲೆಯಲ್ಲಿ ಹೇಮಾವತಿ ನದಿಯಿಂದ ಏತ ನೀರಾವರಿಯ ಮೂರು ಯೋಜನೆಗಳು ಜಾರಿಗೊಂಡಿವೆ. ಅದ ರಲ್ಲಿ ಗೂಳೂರು-ಹೆಬ್ಬೂರು ಹಾಗೂ ಹೊನ್ನವಳ್ಳಿ ಯೋಜನೆ ಪೂರ್ಣಗೊಂಡಿದ್ದರೆ, ಶ್ರೀರಂಗ ಏತ ನೀರಾವರಿ ಯೋಜನೆ 8 ವರ್ಷಗಳಿಂದ ಕುಂಟುತ್ತಾ ಸಾಗಿದೆ.ಕುಣಿಗಲ್ ಹಾಗೂ ಮಾಗಡಿ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಶ್ರೀರಂಗ ಏತ ನೀರಾವರಿ ಯೋಜನೆ 2015ರಲ್ಲಿ ಆರಂಭವಾಗಿದ್ದು, 8 ವರ್ಷ ಕಳೆದಿದ್ದರೂ ತೆವಳುತ್ತಾ ಸಾಗಿದೆ. ಕುಣಿಗಲ್ ತಾಲ್ಲೂಕಿನ 17 ಕೆರೆ, ಮಾಗಡಿ ತಾಲ್ಲೂಕಿನ 66 ಕೆರೆ ಸೇರಿ ಒಟ್ಟು 83 ಕೆರೆಗಳಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ.

‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಹಲವು ಕೆರೆ ತುಂಬಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಕೇಂದ್ರದಿಂದ ಇದಕ್ಕಾಗಿ ₹ 2,300 ಕೋಟಿ ಬಾಕಿ ಬರಬೇಕಿದೆ’ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್. ಬೋಸರಾಜು ತಿಳಿಸಿದರು. ‘ಕೇಂದ್ರದಿಂದಲೂ ಹಣ ಕೊಡಿಸುವಂತೆ ಸಚಿವರಾದ ಪ್ರಲ್ಹಾದ ಜೋಶಿ, ಭಗವಂತ ಖೂಬಾ ಅವರಿಗೆ ಮನವಿ ಸಲ್ಲಿಸಿದ್ದೇನೆ’ ಎಂದರು. ‘ಕೃಷ್ಣಾ, ಕಾವೇರಿ, ನೇತ್ರಾವತಿ ಸೇರಿದಂತೆ ವಿವಿಧ ನದಿಗಳಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಕೆರೆಯ ಸುತ್ತಲಿನ ಅಂತರ್ಜಲ ಹೆಚ್ಚಾಗಲಿದೆ. ಅದರಲ್ಲೂ ಬರಗಾಲದ ಈ ಸಂದರ್ಭದಲ್ಲಿನೀರು ತುಂಬಿಸುವ ಯೋಜನೆ ಅತ್ಯಂತ ಅಗತ್ಯವಾಗಿದೆ. ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಹೇಳಿದರು.’ಕೇಂದ್ರದಿಂದ ₹ 2,300 ಕೋಟಿ ಬಾಕಿ’

ಆಮೆ ವೇಗದ ಕೆಲಸದಿಂದ ಯೋಜನಾ ವೆಚ್ಚ ₹ 324 ಕೋಟಿಯಿಂದ ₹378 ಕೋಟಿಗೆ ಹೆಚ್ಚಳವಾಗಿದೆ. ಆರಂಭದಲ್ಲಿ ರೈತರ ಜಮೀನಿನ ಮೂಲಕ ಕೊಳವೆ ಮಾರ್ಗ ಅಳವಡಿಸಲು ಉದ್ದೇಶಿಸಲಾಗಿತ್ತು. ಕೆಲವು ಕಡೆ ಭೂಸ್ವಾಧೀನ ಪೂರ್ಣಗೊಂಡಿದ್ದರೂ ಪರಿಹಾರ ವಿತರಣೆಯಾಗಿಲ್ಲ. ಯೋಜನೆ ಕೈಗೆತ್ತಿಕೊಂಡಿರುವ ಕಾವೇರಿ ನೀರಾವರಿ ನಿಗಮ ಸಕಾಲದಲ್ಲಿ ಪರಿಹಾರ ನೀಡದಿರುವುದು ಸಹ ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.

ಕಲಬುರಗಿ ದಕ್ಷಿಣ ಹಾಗೂ ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 13 ಕೆರೆಗಳನ್ನು ಬೆಣ್ಣೆತೊರಾ ಜಲಾಶಯದಿಂದ ತುಂಬಿಸುವ ₹ 197 ಕೋಟಿ ವೆಚ್ಚದ ಯೋಜನೆಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದ ಜೆ.ಸಿ. ಮಾಧುಸ್ವಾಮಿ ಚಾಲನೆ ನೀಡಿದ್ದರು. ಆದರೆ, ಇನ್ನೂ ಯೋಜನೆ ಪೂರ್ಣಗೊಂಡಿಲ್ಲ. ಯೋಜನೆಯಡಿ ಕೆರೆ ತುಂಬಬೇಕಿದ್ದ ಹತಗುಂದಿ, ಕುಮಸಿ, ಯಳವಂತಗಿ, ಹುಣಸಿ ಹಡಗಿಲ, ಕೆರಿಬೋಸಗಾ, ಹರಸೂರು, ಸೈಯದ್ ಚಿಂಚೋಳಿ, ಮೇಳಕುಂದಾ, ಖಾಜಾ ಕೋಟನೂರು ಗ್ರಾಮಗಳ ಕೆರೆಗಳಲ್ಲಿ ನೀರು ಬತ್ತಿ ಹೋಗುವ ಹಂತ ತಲುಪಿದೆ.

‘ತುಂಬಿಸಬೇಕಾದ ಕೆರೆಯ ಹೂಳನ್ನು ತೆಗೆಯದೇ ಯೋಜನೆ ಅನುಷ್ಠಾನಕ್ಕೆ ಮುಂದಾದರೆ ಯೋಜನೆಗಳು ವಿಫಲವಾಗುವ ಸಾಧ್ಯತೆಗಳೇ ಹೆಚ್ಚು. ಸರ್ಕಾರವು ಹೆಚ್ಚು ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದು ಎಚ್ಚರಿಸುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು