ಕಲಬುರಗಿ: ಕಂಪನಿಯ ನೇಮಕಾತಿಗಾಗಿ ಕಲಬುರಗಿಗೆ ಬಂದಿದ್ದ ಇಂಗ್ಲೆಂಡ್ ದೇಶದ ಪ್ರಜೆಯೊಬ್ಬ ಅತಿಯಾದ ಮದ್ಯ ಸೇವನೆಯಿಂದಾಗಿ ಬುಧವಾರ ಮೃತಪಟ್ಟಿದ್ದಾರೆ.
ಲೀ ಜೇಮ್ಸ್ ಪ್ಯಾಲಿನ್(53) ಮೃತರು. ಜೇಮ್ಸ್ ಅವರು ದುಬೈನ ಹೈಟಿ ರೈಡರ್ಸ್ ಟೆಕ್ನಿಕಲ್ ಸರ್ವಿಸ್ ಕಂಪನಿಯ ಆಪರೇಷನ್ ಮ್ಯಾನೇಜರ್ ಆಗಿದ್ದರು.ಇದೇ ಕಂಪನಿಯ ಸೇಫ್ಟಿ ವ್ಯವಸ್ಥಾಪಕ, ಕೇರಳ ಮೂಲದ ಜೀಯಾದ್ ಮೈದೀನ್ ಮತ್ತು ಮುಂಬೈನ ರದೀಶ್ ಕುಮಾರ್ ಅವರೊಂದಿಗೆ ಮಂಗಳವಾರ (ಅ.17) ಕಲಬುರಗಿಗೆ ಬಂದಿದ್ದರು.
ಮೂವರು ನಗರದ ಹೋಟೆಲ್ ವೊಂದರಲ್ಲಿ ತಂಗಿದ್ದರು. ಮಂಗಳವಾರ ತಡರಾತ್ರಿ ಬಾರ್ವೊಂದರಲ್ಲಿ ಅತಿಯಾಗಿ ಮದ್ಯ ಸೇವಿಸಿದ್ದರು. ಈ ವೇಳೆ ಜೇಮ್ಸ್ ಕುಸಿದು ಬಿದ್ದರು. ತಕ್ಷಣವೇ ಬಾರ್ ಸಿಬ್ಬಂದಿ ಗಾಲಿ ಕುರ್ಚಿ ಮೇಲೆ ಒಯ್ದು ಹೋಟೆಲ್ ಕೋಣೆಗೆ ಬಿಟ್ಟು ಬಂದರು. ಮರುದಿನ ಬೆಳಿಗ್ಗೆ ಸ್ನೇಹಿತರು ಜೇಮ್ಸ್ ಕೋಣೆಗೆ ಬಂದು ನೋಡಿದಾಗ ಅವರ ಮುಗಿನಿಂದ ರಕ್ತ ಸ್ರಾವ ಆಗುತ್ತಿತ್ತು. 108ರ ಆಂಬ್ಯುಲೆನ್ಸ್ ಸಿಬ್ಬಂದಿ ಪರೀಕ್ಷಿಸಿ, ಮೃತಪಟ್ಟಿದ್ದಾಗಿ ದೃಢಪಡಿಸಿದರು ಎಂದು ಪೊಲೀಸರು ಹೇಳಿದ್ದಾರೆ.
ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಜಿಮ್ಸ್’ ಶವಗಾರದಲ್ಲಿ ಅವರ ಶರೀರ ಇಡಲಾಗಿದೆ. ಈ ಕುರಿತು ಇಂಗ್ಲೆಂಡ್ ರಾಯಭಾರಿ ಕಚೇರಿಗೆ ಮಾಹಿತಿ ಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.