News Karnataka Kannada
Monday, April 29 2024
ಕಲಬುರಗಿ

ಕಲಬುರಗಿ: 70 ಮಹಿಳೆಯರ ಬದುಕಿಗೆ ಆಸರೆಯಾದ ಶಿವಲೀಲಾ

ಒಂದು ಕಾಲದಲ್ಲಿ ಬೆಂಗಳೂರಿನ ಗಾರ್ಮೆಂಟ್‌ನಲ್ಲಿ ಕಾರ್ಮಿಕರಾಗಿದ್ದ ಶಿವಲೀಲಾ ಚನ್ನಬಸಪ್ಪ ಪಾಟೀಲ ಅವರು ಸ್ವಂತ ಜಮೀನು ಮಾರಾಟ ಮಾಡಿ ಗಾರ್ಮೆಂಟ್ಸ್‌ ಉದ್ಯಮ ಕಟ್ಟಿಬೆಳೆಸಿದ ಯಶೋಗಾಥೆ ಇದು. ಸ್ವಾವಲಂಬಿ ಬದುಕು ಸಾಗಿಸುವುದರ ಜೊತೆಗೆ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ 70 ಮಹಿಳೆಯರ ಬದುಕಿಗೆ ಆಸರೆಯಾಗಿದ್ದಾರೆ.
Photo Credit : News Kannada

ಕಲಬುರಗಿ: ಒಂದು ಕಾಲದಲ್ಲಿ ಬೆಂಗಳೂರಿನ ಗಾರ್ಮೆಂಟ್‌ನಲ್ಲಿ ಕಾರ್ಮಿಕರಾಗಿದ್ದ ಶಿವಲೀಲಾ ಚನ್ನಬಸಪ್ಪ ಪಾಟೀಲ ಅವರು ಸ್ವಂತ ಜಮೀನು ಮಾರಾಟ ಮಾಡಿ ಗಾರ್ಮೆಂಟ್ಸ್‌ ಉದ್ಯಮ ಕಟ್ಟಿಬೆಳೆಸಿದ ಯಶೋಗಾಥೆ ಇದು. ಸ್ವಾವಲಂಬಿ ಬದುಕು ಸಾಗಿಸುವುದರ ಜೊತೆಗೆ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ 70 ಮಹಿಳೆಯರ ಬದುಕಿಗೆ ಆಸರೆಯಾಗಿದ್ದಾರೆ.

ಕಲಬುರಗಿ ತಾಲ್ಲೂಕಿನ ಕಡಣಿ ಗ್ರಾಮದವರಾದ ಶಿವಲೀಲಾ ಅವರು ನಗರದ ಕಣ್ಣಿ ಮಾರ್ಕೆಟ್‌ ಪ್ರದೇಶದ ಜಿಡಿಎ ಲೇಔಟ್‌ನಲ್ಲಿ ‘ಎಸ್‌.ಎಸ್. ಪಾಟೀಲ ಗಾರ್ಮೆಂಟ್ಸ್‌’ ಉದ್ಯಮ ಸ್ಥಾಪಿಸಿದ್ದಾರೆ. 2023ರಲ್ಲಿ ಆರಂಭವಾದ ಉದ್ಯಮ ಕಳೆದ ಜನವರಿಗೆ ಒಂದು ವರ್ಷ ಪೂರೈಸಿದೆ. ಬೆಂಗಳೂರಿನ ರಿಲಯನ್ಸ್‌ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಬ್ರಾಂಡೆಡ್‌ ಬಟ್ಟೆಯ ಶರ್ಟ್ಸ್‌ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಬಾಡಿಗೆಯ ಮೂರು ಮಹಡಿಯಲ್ಲಿರುವ ಎಸ್‌.ಎಸ್.ಪಾಟೀಲ ಗಾರ್ಮೆಂಟ್ಸ್‌ನಲ್ಲಿ 120 ಹೊಲಿಗೆ ಯಂತ್ರಗಳಿವೆ. ಮೂವರು ಮೇಲ್ವಿಚಾರಕರಿದ್ದಾರೆ. ಹೀರಾಪುರ, ಸಿರಸಗಿ, ಗಬ್ಬೂರ್‌, ಮೇಳಕುಂದಿ, ವಾಡಿ, ಶಹಾಬಾದ್‌ ಸೇರಿದಂತೆ ವಿವಿಧೆಡೆಯ ಮಹಿಳೆಯರು ಇಲ್ಲಿ ಕೆಲಸಕ್ಕೆ ಬರುತ್ತಾರೆ. ಇವರಿಗೆ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ‘ಶಕ್ತಿ’ ಯೋಜನೆಯೂ ಆಸರೆಯಾಗಿರುವುದು ವಿಶೇಷ.

ಮೈರೂನ್‌, ರೇಖಾ, ಭಾಗ್ಯ, ಶೋಭಾ ಇಲ್ಲಿ ಕೇಳ್ರಿ… ಎಂದು ಕಾರ್ಮಿಕರಿಗೆ ಸಲಹೆ ನೀಡುತ್ತಿದ್ದ ಶಿವಲೀಲಾ ಸಿ.ಪಾಟೀಲ ಅವರನ್ನು ಸಂದರ್ಶಿಸಿದಾಗ, ‘ನಾನು ಇಂತಹವರ ಮಧ್ಯೆಯೇ ಕುಳಿತು ಕೆಲಸ ಮಾಡಿ ಜೀವನ ನಡೆಸಿದವಳು. ‘ಕುರ್ಚಿ’ ಬದಲಾದ ಮಾತ್ರಕ್ಕೆ ವರ್ತನೆ ಬದಲಾಗಿಲ್ಲ. ಈಗಲೂ ನಾನು ಕಾರ್ಮಿಕಳೇಮಾಲೀಕಳಲ್ಲ’ ಎಂದರು. ಇದು ಕಾರ್ಮಿಕರೊಂದಿಗೆ ಅವರಿಗಿದ್ದ ಸ್ನೇಹಭಾವವನ್ನು ತೋರಿಸಿತು.

‘ಮದುವೆಯಾದ ನಾಲ್ಕು ವರ್ಷಗಳಲ್ಲಿಯೇ 2004ರಲ್ಲಿ ಪತಿ ತೀರಿಕೊಂಡರು. ಆಗ ನಾನು ಗರ್ಭಿಣಿ. ಜೊತೆಗೆ 3 ವರ್ಷದ ಮಗಳಿದ್ದಳು. ಬಡತನದ ಹಿನ್ನೆಲೆ ಜೀವನ ಸಾಗಿಸುವುದು ಕಷ್ಟವಾಯಿತು. ಈ ಮಧ್ಯೆ ಮತ್ತೊಬ್ಬ ಮಗಳು ಹುಟ್ಟಿದಳು. ಇಬ್ಬರು ಹೆಣ್ಣುಮಕ್ಕಳನ್ನು ಬೆಳೆಸುವ ಜವಾಬ್ದಾರಿ ನನ್ನ ಮೇಲೆ ಬಿತ್ತು. ಜೀವನ ನಡೆಸಲು 2009ರಲ್ಲಿ ಬೆಂಗಳೂರಿಗೆ ಹೋಗಿ ಗಾರ್ಮೆಂಟ್ಸ್‌ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಆಗ ನನಗೆ ತಿಂಗಳಿಗೆ ₹1,800 ಸಂಬಳ. 2022ರಲ್ಲಿ ಕೆಲಸ ಬಿಡುವಾಗಿನ ವೇತನ ₹9,000 ಇತ್ತು’ ಎಂದು ತಮ್ಮ ಕಷ್ಟದ ದಿನಗಳನ್ನು ಸ್ಮರಿಸಿದರು.

‘ಸ್ವಯಂ ಉದ್ಯಮ ಆರಂಭಿಸುವ ಆಲೋಚನೆ ಯಾವತ್ತೂ ಕಾಡುತ್ತಿತ್ತು. ಆದರೆ, ಅದಕ್ಕೆ ಛಲದ ಜೊತೆಗೆ ಆರ್ಥಿಕ ಶಕ್ತಿ ಬೇಕು ಎಂದು ಸುಮ್ಮನಾಗುತ್ತಿದ್ದೆ. ಕೊನೆಗೆ ನಮ್ಮ 5 ಎಕರೆ ಹೊಲ ಮಾರಾಟ ಮಾಡಿ ₹40 ಲಕ್ಷದಲ್ಲಿ ಗಾರ್ಮೆಂಟ್ಸ್‌ ಉದ್ಯಮ ಸ್ಥಾಪಿಸಿದೆ. ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯಡಿ ಬ್ಯಾಂಕ್‌ ಸಾಲ ದೊರೆಯಿತು. ಅಂಬೆಗಾಲಿಡುತ್ತಿರುವ ಈ ಉದ್ಯಮದಲ್ಲಿ ಲಾಭ ಬರದಿದ್ದರೂ ನಷ್ಟವಂತೂ ಆಗಿಲ್ಲ. ಸಮಯಕ್ಕೆ ಸರಿಯಾಗಿ ಕಾರ್ಮಿಕರಿಗೆ ಸಂಬಳ ನೀಡಿ ಸಮತೋಲಿತವಾಗಿ ಸಾಗುತ್ತಿದೆ’ ಎಂದರು.

ಗಾರ್ಮೆಂಟ್ಸ್‌ನಲ್ಲಿ ತಿಂಗಳಿಗೆ 15 ಸಾವಿರ ಶರ್ಟ್ಸ್‌ ತಯಾರಾಗುತ್ತಿವೆ. ಮುಂದೆ 25 ಸಾವಿರದಿಂದ 30 ಸಾವಿರ ಶರ್ಟ್ಸ್‌ ಸಿದ್ಧಪಡಿಸುವ ಗುರಿಯಿದೆ. ಇಲ್ಲಿಯೇ ಸಿದ್ಧಪಡಿಸುವ ಶರ್ಟ್ಸ್‌ಗಳನ್ನು ವಾಷಿಂಗ್‌ ಮತ್ತು ಫಿನಿಷಿಂಗ್‌ ಮಾಡುವ ಯೋಜನೆ ಕೂಡ ಇದೆ’ ಎನ್ನುತ್ತಾರೆ ಮೇಲ್ವಿಚಾರಕರಾದ ಬಾಬುರಾವ್‌ ಮತ್ತು ಕುಮಾರ್‌.

‘ನನ್ನಲ್ಲಿ ಕೆಲಸ ಕೇಳಿಕೊಂಡು ಬರುವ ಮಹಿಳೆಯರಿಗೆ ಶಿಕ್ಷಣ, ಅಂಕಪಟ್ಟಿ ಕೇಳುವುದಿಲ್ಲ. ನಾನೂ ಕೂಡ ಎಸ್ಸೆಸ್ಸೆಲ್ಸಿವರೆಗೆ ಮಾತ್ರ ಓದಿದ್ದೇನೆ. ಕೆಲಸ ಮಾಡುವ ಆಸಕ್ತಿ ಇದೆಯಾ? ಬಂದು- ಹೋಗುವುದಕ್ಕೆ ಸಾರಿಗೆ ಅನುಕೂಲ ಇದೆನಾ? ಎಂದಷ್ಟೇ ಕೇಳುತ್ತೇನೆ. ಅನುಭವವೂ ಬೇಕಿಲ್ಲ. 10 ದಿನ ನಾವೇ ತರಬೇತಿ ನೀಡಿ ಕೆಲಸ ಕೊಡುತ್ತೇವೆ’ ಎಂದು ಶಿವಲೀಲಾ ಪಾಟೀಲ ಹೇಳುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು