News Karnataka Kannada
Monday, April 29 2024
ಬೀದರ್

ಸಿದ್ದಪ್ಪನ ಕೈಹಿಡಿದ ‘ಸೇವಂತಿ’: ಅರ್ಧ ಎಕರೆಗೆ ₹75 ಸಾವಿರ ಆದಾಯ

ಇಲ್ಲಿನ ರೈತ ಸಿದ್ಧಪ್ಪ ಬೆಳಕೇರಿ ತಮ್ಮ ಅರ್ಧ ಎಕರೆಯಲ್ಲಿ ಬೆಳೆದ 'ಬಿಜಲಿ ತಳಿಯ ಸೇವಂತಿ ಹೂವು ಉತ್ತಮ ಆದಾಯ ನೀಡುವುದರೊಂದಿಗೆ ಕೃಷಿಯಲ್ಲಿ ಸಕ್ರಿಯವಾಗಿ ತೊಡಗುವಂತೆ ಪ್ರೇರೇಪಿಸಿದೆ.
Photo Credit : News Kannada

ಖಟಕಚಿಂಚೋಳಿ: ಇಲ್ಲಿನ ರೈತ ಸಿದ್ಧಪ್ಪ ಬೆಳಕೇರಿ ತಮ್ಮ ಅರ್ಧ ಎಕರೆಯಲ್ಲಿ ಬೆಳೆದ ‘ಬಿಜಲಿ ತಳಿಯ ಸೇವಂತಿ ಹೂವು ಉತ್ತಮ ಆದಾಯ ನೀಡುವುದರೊಂದಿಗೆ ಕೃಷಿಯಲ್ಲಿ ಸಕ್ರಿಯವಾಗಿ ತೊಡಗುವಂತೆ ಪ್ರೇರೇಪಿಸಿದೆ.

ಸಿದ್ಧಪ್ಪ ಅವರು ತಮ್ಮ ಎರಡು ಎಕರೆ ಪ್ರದೇಶದಲ್ಲಿ ಸೇವಂತಿ ಹೂವು, ಟೊಮೆಟೊ, ಮೆಣಸಿನಕಾಯಿ, ಪಪ್ಪಾಯಿ ಸೇರಿದಂತೆ ಕಾಲಕಾಲಕ್ಕೆ ವಿವಿಧ ಬಗೆಯ ತರಕಾರಿಗಳನ್ನು ಬೆಳೆಯುತ್ತಾರೆ.

ಸದ್ಯ ಸೇವಂತಿಗೆ ಬೆಳೆಯಿಂದ ಆದಾಯ ಪಡೆಯುತ್ತಿದ್ದಾರೆ. ಹೀಗೆ ಅವರು ಒಂದಿಲ್ಲೊಂದು ಬೆಳೆಯಲ್ಲಿ ಆದಾಯ ಕಾಣುತ್ತಿದ್ದಾರೆ.

‘ಕೇವಲ 60 ದಿನಗಳಲ್ಲಿ ಕಟಾವಿಗೆ ಬರುವ ಸೇವಂತಿ ಸಸಿಗಳ ಬೆಲೆ, ಗೊಬ್ಬರ, ರಾಸಾಯನಿಕ ಔಷಧಿ ಸಿಂಪಡಣೆ ಸೇರಿ ಸುಮಾರು ₹ 20 ಸಾವಿರ ವೆಚ್ಚವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಸೇವಂತಿಗೆ ಪ್ರತಿ ಕೆಜಿಗೆ ₹ 50 ರಂತೆ ಮಾರಾಟವಾಗುತ್ತಿದೆ. ಹೀಗೆ ವಾರಕ್ಕೆ ಎರಡು ಬಾರಿ ಕಟಾವು ಮಾಡುತ್ತಿದ್ದೇವೆ. ಪ್ರತಿ ಬಾರಿ 20-25 ಕೆಜಿ ಇಳುವರಿ ಬರುತ್ತಿದೆ. ಸದ್ಯ ₹ 65 ಸಾವಿರ ಆದಾಯ ಬಂದಿದೆ. ಮತ್ತೆರಡು ತಿಂಗಳಲ್ಲಿ ಇನ್ನಷ್ಟು ಆದಾಯ ಬರುವ ನಿರೀಕ್ಷೆಯಲ್ಲಿದ್ದೇನೆ’ ಎನ್ನುತ್ತಾರೆ ರೈತ.

‘ಇದೇ ಮೊದಲ ಬಾರಿಗೆ ಹೊಸ ಪ್ರಯತ್ನ ಎನ್ನುವಂತೆ ಪರಿಚಯಸ್ಥರ ಹತ್ತಿರ ಒಂದು ರೂಪಾಯಿಗೆ ಒಂದು ಸಸಿಯಂತೆ ಸಾವಿರ ಸಸಿಗಳನ್ನು ತಂದು ನಾಟಿ ಮಾಡಿದ್ದೇನೆ. ಇದಕ್ಕೆ ಯಾವುದೇ ರೀತಿಯ ಹೆಚ್ಚಿನ ಖರ್ಚು ಬಂದಿಲ್ಲ . ಮುಂದಿನ ದಿನಗಳಲ್ಲಿ ಎರಡು ಎಕರೆಯಲ್ಲಿ ಸೇವಂತಿಗೆ ಬೆಳೆಯುವ ಆಸೆ ನನ್ನದಾಗಿದೆ’ ಎಂದು ಹುಮ್ಮಸ್ಸಿನಿಂದ ಹೇಳುತ್ತಾರೆ.

ಹೂಗಳಲ್ಲಿ ಸೇವಂತಿ ಬೆಳೆಯುವುದು ಅತ್ಯಧಿಕ ಲಾಭದಾಯಕ ಕೃಷಿಯಾಗಿದೆ. ಕಡಿಮೆ ಖರ್ಚಿನಲ್ಲಿ ಕೆಲವೇ ತಿಂಗಳುಗಳ ಅಂತರದಲ್ಲಿ ಅಧಿಕ ಇಳುವರಿಯನ್ನು ಸೇವಂತಿ ನೀಡುತ್ತದೆ’ ಎಂದು ರೈತ ಸಂತಸ ವ್ಯಕ್ತಪಡಿಸುತ್ತಾರೆ.

ಜಿಲ್ಲೆಯಲ್ಲಿ ಹೂವು ಮಾರುಕಟ್ಟೆ ಇದ್ದಿದ್ದರೆ ನಮ್ಮಲ್ಲಿನ ಸೇವಂತಿಗೆ ಇನ್ನೂ ಹೆಚ್ಚಿನ ಬೆಲೆ ದೊರೆಯುತ್ತಿತ್ತು. ಆದರೆ ಇಲ್ಲಿ ಸೂಕ್ತ ಹೂವಿನ ಮಾರುಕಟ್ಟೆ ಸಿಗುತ್ತಿಲ್ಲ. ಹೀಗಾಗಿ ನೆರೆಯ ರಾಜ್ಯ ಹೈದರಾಬಾದ್ ಮಾರುಕಟ್ಟೆಗೆ ಕಳುಹಿಸಿದರೆ ಉತ್ತಮ ಬೆಲೆ ಸಿಗುತ್ತದೆ. ಸದ್ಯ ಬೆಲೆ ಕಡಿಮೆ ಇದೆ. ಹಬ್ಬ, ಹರಿದಿನಗಳು ಬಂದ ವೇಳೆ ದರ ಹೆಚ್ಚಾಗುತ್ತದೆ’ ಎಂದು ರೈತ ಸಿದ್ಧಪ್ಪ ತಿಳಿಸುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು