News Karnataka Kannada
Sunday, May 12 2024
ಬೀದರ್

ಈಶ್ವರ ಖಂಡ್ರೆ, ರಾಜಶೇಖರ ಪಾಟೀಲರಿಂದ ಪಾಪದ ಕೆಲಸ: ಸಚಿವ ಭಗವಂತ ಖೂಬಾ ಆರೋಪ

Ishwar Khandre, Rajashekar Patil commit sinful act: Minister Bhagwant Khuba
Photo Credit : News Kannada

ಬೀದರ್: ‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಕಾಂಗ್ರೆಸ್‌ ಮುಖಂಡ ರಾಜಶೇಖರ ಪಾಟೀಲ ಹುಮನಾಬಾದ್‌ ಅವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ನಿರ್ಲಜ್ಜತನ, ಸುಳ್ಳುಗಾರ, ಅಭಿವೃದ್ಧಿ ಶೂನ್ಯ, ಏನು ಕಿತ್ತಾನ, ಏನು ಹರಿದಾನ, ಏನು ಕಿಸ್‌ದಾನ ಎಂದೆಲ್ಲ ಹೇಳಿದ್ದಾರೆ.

ಈ ರೀತಿಯ ಪದಗಳನ್ನು ಬಳಸಿ ಬೀದರ್‌ ಜಿಲ್ಲೆಯ ಜನತೆ ರಾಜ್ಯದ ಜನರೆದುರು ತಲೆತಗ್ಗಿಸುವಂತಹ ನೀಚದ, ಪಾಪದ ಕೆಲಸ ಮಾಡಿದ್ದಾರೆ’ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡು ದಿನಗಳ ಹಿಂದೆ ನಾನು ಡಿಸಿಸಿ ಬ್ಯಾಂಕ್‌ ಕುರಿತು ಅಂಕಿ ಅಂಶ ಹಾಗೂ ನಿಜಾಂಶದೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ್ದೆ. ನಿನ್ನೆ ಖಂಡ್ರೆ, ಪಾಟೀಲ ಅವರು ಪತ್ರಿಕಾಗೋಷ್ಠಿಯಲ್ಲಿ ನನ್ನ ನಿಜಾಂಶಗಳಿಗೆ ಉತ್ತರಿಸಲಾಗದೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ’ ಎಂದರು.

‘ಕಳೆದ ವರ್ಷ ಡಿಸಿಸಿ ಬ್ಯಾಂಕಿನಿಂದ ಖಂಡ್ರೆ ಸಹೋದರ ಪಡೆದ ಸಾಲದ ಕುರಿತು ಸಭೆಯಲ್ಲಿ ಕೇಳಿದರೆ ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದರು. ಆದರೆ, ಅವರ ಸಹೋದರನನ್ನು ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಮಾಡಲು ಹೊರಟಿರುವುದು ನಿರ್ಲಜ್ಜತನವಲ್ಲವೇ? ನಾಚಿಕೆ ಪಡಬೇಕಾದವರು ಯಾರು? ಡಿಸಿಸಿ ಬ್ಯಾಂಕ್‌ಗೆ ಕಳೆದ 38 ವರ್ಷಗಳಿಂದ ಚುನಾವಣೆ ನಡೆದಿಲ್ಲ. ಇವರ ಸಹೋದರ ಕೂಡ ಎರಡು ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಆಗ ಪ್ರಜಾಪ್ರಭುತ್ವ ನೆನಪಿರಲಿಲ್ಲವೇ? ಇಂದು ಅಧ್ಯಕ್ಷರಾಗಲು ಬ್ಯಾಂಕಿಗೆ ಚುನಾವಣೆ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಡಿಸಿಸಿ ಬ್ಯಾಂಕಿಗೆ ಚುನಾವಣೆ ನಡೆಸುವ ಮೂಲಕ ಜನಸಾಮಾನ್ಯರು ಪ್ರವೇಶಿಸುತ್ತಾರೆ. ರಾಜಶೇಖರ ಪಾಟೀಲ ಸಹೋದರ ಜನಸಾಮಾನ್ಯನಾ? ಅವರ ಸಹೋದರನಿಗೆ ಉಪಾಧ್ಯಕ್ಷ ಮಾಡುವುದರ ಬದಲು ರೈತನ ಮಗನಿಗೆ ಮಾಡಬಹುದು. ಇವರ ನಿರ್ಲಜ್ಜತನ ಶಿಖರಕ್ಕೇರಿದೆ. ಕೋವಿಡ್‌ ಅತಿ ಭೀಕರವಾಗಿದ್ದಾಗ ಪ್ರತಿ ತಾಲ್ಲೂಕಿನ ಆಸ್ಪತ್ರೆಗಳಿಗೆ ಪಿಪಿಇ ಕಿಟ್‌ ಧರಿಸಿ, ರೋಗಿಗಳ ಬಳಿಗೆ ಈ ಭಗವಂತ ಖೂಬಾ ಹೋಗಿದ್ದ. ವೈದ್ಯರಿಗೆ ಬೇಕಾದ ಸವಲತ್ತು ಒದಗಿಸಿದವನು ನಾನು. ಅಲ್ಲಿನ ಕರ್ಮಚಾರಿಗಳಿಗೆ ಧೈರ್ಯ ತುಂಬಿದ್ದೆ. ಆಗ ನೀವು ಎಲ್ಲಿದ್ದೀರಿ? ನೀವು ಬಸವಕಲ್ಯಾಣ ಉಪಚುನಾವಣೆಯಲ್ಲಿ ಸೋಲುತ್ತೇವೆ ಎಂದು ಗೊತ್ತಾಗಿ ಬೆಂಗಳೂರಿನಲ್ಲಿ ಎರಡು ತಿಂಗಳಿದ್ದೀರಿ. ಭಾಲ್ಕಿ, ಬೀದರ್‌ಗೆ ಬರಲಿಲ್ಲ. ಇದು ಅವರ ನಿರ್ಲಜ್ಜತನವೇ? ಅಥವಾ ನನ್ನ ನಿರ್ಲಜ್ಜತನವೇ ಹೇಳಬೇಕು?’ ಎಂದು ಖಂಡ್ರೆಯವರನ್ನು ಪ್ರಶ್ನಿಸಿದರು.

ಇಂದು ಡಿಸಿಸಿ ಬ್ಯಾಂಕ್‌ ಉಳಿಸುವ ಮಾತುಗಳನ್ನು ಆಡುತ್ತಿದ್ದಾರೆ. ಇವರು ಜೀವನದಲ್ಲಿ ಎಂದಾದರೂ ಪಾರದರ್ಶಕವಾಗಿ ನಡೆದುಕೊಂಡಿದ್ದಾರಾ? ಇವರ ರಾಜಕೀಯ ಜೀವನವೇ ಅಪಾರದರ್ಶಕ. ಅಧಿಕಾರ ಇದ್ದಾಗಲೆಲ್ಲಾ ಅಧಿಕಾರಿಗಳಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡು ಬಡವರನ್ನು, ವಿರೋಧಿಗಳನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಅದಕ್ಕೆ ಸಾವಿರಾರು ಉದಾಹರಣೆಗಳಿವೆ ಎಂದರು.

ಸತ್ತಿದ್ದಾರೆ ಎಂದವರು ಯಾರು?:

ನಾನು ಸೋತಿದ್ದೇನೆ, ಸತ್ತಿಲ್ಲ ಎಂದು ರಾಜಶೇಖರ ಪಾಟೀಲ ಹೇಳಿದ್ದಾರೆ. ಸತ್ತಿದ್ದಾರೆ ಎಂದು ಹೇಳಿದವರು ಯಾರು? ಜೀವಂತ ಇದ್ದವರಷ್ಟೇ ಪತ್ರಿಕಾಗೋಷ್ಠಿ ನಡೆಸಬಹುದು. ಆದರೆ, ಅವರು ಸೋತು ಸುಣ್ಣವಾಗಿದ್ದು ಖರೇ. ಇವರು ಸೋತ ಮೇಲೆ ಈಶ್ವರ ಖಂಡ್ರೆ ಮಂತ್ರಿಯಾಗಿದ್ದಾರೆ. ಅದನ್ನು ಇವರು ಸಹಿಸಲ್ಲ. ಇಬ್ಬರು ಬದ್ಧ ವೈರಿಗಳು. ಸುಳ್ಳರು, ಕಳ್ಳರು, ಮೋಸಗಾರರು, ಲೂಟಿಕೋರರು, ಅವಕಾಶವಾದಿಗಳು ನನ್ನಂತಹವನ ವಿರುದ್ಧ ಒಂದಾಗುವುದು ಸೃಷ್ಟಿ ನಿಯಮ, ಸಹಜ. ನನ್ನ ಒಬ್ಬನ ವಿರುದ್ಧ ಎಲ್ಲರೂ ಮುಗಿಬೀಳುತ್ತಿದ್ದಾರೆ. ಭಗವಂತ ಖೂಬಾನ ಪ್ರಾಮಾಣಿಕತೆ ಏನು ಎನ್ನುವುದು ಇವರೇ ಹೇಳಿದಂತಾಗಿದೆ. ಎಲ್ಲ ವಿರೋಧಿಗಳು ರಾಜನ ಮೇಲೆ ಮುಗಿ ಬಿದ್ದರೆ ಅವರು ಪ್ರಾಮಾಣಿಕ ಎಂದರ್ಥ. ಖಂಡ್ರೆ, ಪಾಟೀಲ ಅವರು ಒಂದೇ ವೇದಿಕೆಗೆ ಬಂದರೆ ಇಬ್ಬರು ಒಂದಾದರೂ ಎಂದರ್ಥ ಅಲ್ಲ ಎಂದರು.

‘ಖಂಡ್ರೆ ಸಂಚರಿಸುವ ವಿಮಾನ ಆರಂಭಿಸಿದ್ದು ಖೂಬಾ’

‘ಭಗವಂತ ಖೂಬಾ ಅವರು 9 ವರ್ಷಗಳಲ್ಲಿ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಈಶ್ವರ ಖಂಡ್ರೆ ಆರೋಪಿಸಿದ್ದಾರೆ. ಬೀದರ್‌-ಭಾಲ್ಕಿ ನಡುವೆ 120 ಕಿ.ಮೀ ವೇಗದಲ್ಲಿ ಹೋಗುವ ಹೆದ್ದಾರಿ ಆಗಿದ್ದು ನನ್ನ ಕಾಲದಲ್ಲಿ. ಬೀದರ್‌ನಿಂದ ಬೆಂಗಳೂರಿಗೆ ಖಂಡ್ರೆ ಸಂಚರಿಸುವ ವಿಮಾನ ಆರಂಭಿಸಿದ್ದು ಖೂಬಾ. ಸೈನಿಕ ಶಾಲೆ ಮಂಜೂರಾಗಿದ್ದಕ್ಕೆ ರಾಜ್ಯದ ಎಲ್ಲೆಡೆ ಚರ್ಚೆಗಳಾಗುತ್ತಿದೆ’ ಎಂದು ಸಚಿವ ಭಗವಂತ ಖೂಬಾ ಹೇಳಿದರು.

ಜಿಲ್ಲೆಯ ನೀರಾವರಿ ಯೋಜನೆಗಳ ಕುರಿತು ನಾನು ಸಿಎಂ, ಡಿಸಿಎಂ ಅವರನ್ನು ಭೇಟಿಯಾಗಿ ಚರ್ಚಿಸಿದ ನಂತರ ಖಂಡ್ರೆಯವರು ಹೋಗಿ ಅದಕ್ಕೆ ಅನುದಾನ ಕೋರಿದ್ದಾರೆ. ನನಗೆ ಅದರ ಶ್ರೇಯಸ್ಸು ಸಿಗುತ್ತದೆ ಎಂದು ಹೀಗೆ ಮಾಡಿದ್ದಾರೆ ಎಂದರು.

ಡೀಪ್‌ ಲವ್‌ ಅಲ್ಲ, ನನ್ನ ಕರ್ತವ್ಯ’

‘ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರು ಉತ್ತಮ ರೀತಿಯಲ್ಲಿ ಬ್ಯಾಂಕ್‌ ನಡೆಸಿಕೊಂಡು ಹೋಗುತ್ತಿದ್ದಾರೆ. ಅದಕ್ಕಾಗಿ ಅವರ ಮೇಲೆ ಪ್ರೀತಿ. ಅವರಿಗೆ ವೈಯಕ್ತಿಕವಾಗಿ ಬೆಂಬಲ ಸೂಚಿಸಿದ್ದೇನೆ. ಅವರ ಮೇಲೆ ನನಗೆ ಡೀಪ್‌ ಲವ್‌ ಅಲ್ಲ, ಉತ್ತಮರಿಗೆ ಬೆಂಬಲಿಸುವುದು ನನ್ನ ಕರ್ತವ್ಯ. ಆದರೆ,ಚುನಾವಣೆ ಪೂರ್ವದಲ್ಲಿ ಈಶ್ವರ ಖಂಡ್ರೆ ಹಾಗೂ ರಾಜಶೇಖರ ಪಾಟೀಲ ನಡುವೆ ಡೀಪ್‌ ಲವ್‌ ಎಲ್ಲಿತ್ತು? ಸೂರ್ಯಕಾಂತ ನಾಗಮಾರಪಳ್ಳಿಗೆ ನಾನು ಟಿಕೆಟ್‌ ತಪ್ಪಿಸಿಲ್ಲ. ಅದು ಪಕ್ಷದ ನಿರ್ಧಾರ. ಬೇಕಾದರೆ ಅದನ್ನು ಸೂರ್ಯಕಾಂತ ನಾಗಮಾರಪಳ್ಳಿಗೆ ಕೇಳಬಹುದು ಎಂದರು.

ರಾಹುಲ್‌ ಗಾಂಧಿ, ಖಂಡ್ರೆ ಸ್ಪರ್ಧಿಸಿದರೂ ಸೋಲಿಸುವೆ’

‘2024ರ ಲೋಕಸಭೆ ಚುನಾವಣೆಯಲ್ಲಿ ಬೀದರ್‌ ಕ್ಷೇತ್ರದಿಂದ ನನ್ನ ವಿರುದ್ಧ ಕಾಂಗ್ರೆಸ್‌ ಮುಖಂಡ ರಾಜಶೇಖರ ಪಾಟೀಲ ಹುಮನಾಬಾದ್‌ ಅಲ್ಲ, ಸಚಿವ ಈಶ್ವರ ಬಿ. ಖಂಡ್ರೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸ್ಪರ್ಧಿಸಿದರೂ ಸೋಲಿಸುವೆ’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

‘ನಾನು ಗ್ರಾಮ ಪಂಚಾಯಿತಿ ಸದಸ್ಯನಾಗಲು ಅರ್ಹನಲ್ಲ’ ಎಂದು ರಾಜಶೇಖರ ಪಾಟೀಲ, ಖಂಡ್ರೆ ಹೇಳಿದ್ದಾರೆ. ಇವರಂತಹ ಕನಿಷ್ಠ ವಿಚಾರವಂತರನ್ನು ನಾನು ಎಲ್ಲೂ ನೋಡಿಲ್ಲ. ಬಿಜೆಪಿ ನನಗೆ ಟಿಕೆಟ್‌ ಕೊಟ್ಟು ಜಿಲ್ಲೆಯ ಸಂಸದನಾಗಿ ಮಾಡಿದೆ. ಕಾರ್ಯಕರ್ತರ ಪರಿಶ್ರಮ, ಜನರ ಆಶೀರ್ವಾದದಿಂದ ಗೆದ್ದಿದ್ದೇನೆ. 2014ರ ಚುನಾವಣೆಯಲ್ಲಿ ನಾನು ಲಕ್ಷ ಮತಗಳ ಅಂತರದಿಂದ ಗೆದ್ದಿದೆ. ಆಗ ಬಿಜೆಪಿಯ ಒಬ್ಬ ಶಾಸಕರಿದ್ದರು. 2019ರಲ್ಲಿ ಇಬ್ಬರು ಬಿಜೆಪಿ ಎಂಎಲ್‌ಎಗಳಿದ್ದರು. ಆಗ ಖಂಡ್ರೆ ನನ್ನ ಎದುರಾಳಿ. ಕಾಂಗ್ರೆಸ್‌ ಜೆಡಿಎಸ್‌ ಸರ್ಕಾರ ಇತ್ತು. ಸಿ.ಎಂ. 18 ಜನ ಸಚಿವರು ನಾಮಿನೇಷನ್‌ಗೆ ಬಂದಿದ್ದರು.

ಖಂಡ್ರೆಯವರಿಗೆ 1.25 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದೆ. ಈಗ ಬೀದರ್‌ ಲೋಕಸಭೆ ವ್ಯಾಪ್ತಿಯಲ್ಲಿ ಬಿಜೆಪಿಯ ಐದು ಜನ ಶಾಸಕರಿದ್ದಾರೆ. 2024ರ ಚುನಾವಣೆಯಲ್ಲಿ ಪುನಃ ಗೆಲ್ಲುವೆ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಭರವಸೆ ವ್ಯಕ್ತಪಡಿಸಿದರು.

ರಾಜಶೇಖರ ಪಾಟೀಲ ಅವರು ಚುನಾವಣೆಗೆ ಸ್ಪರ್ಧಿಸುವ ಮಾತುಗಳನ್ನು ಆಡಿದ್ದಾರೆ. ಆದರೆ, ಅವರಿಗೆ ಖಂಡ್ರೆಯವರು ಟಿಕೆಟ್‌ ಕೊಡಲು ಬಿಡ್ತಾರಾ? ಖಂಡ್ರೆಯವರೇ ಸ್ಪರ್ಧಿಸಲಿ, ರಾಹುಲ್‌ ಗಾಂಧಿಯವರೇ ನನ್ನ ವಿರುದ್ಧ ಸ್ಪರ್ಧಿಸಲಿ ಎರಡು ಲಕ್ಷ ಮತಗಳ ಅಂತರದಿಂದ ಅವರನ್ನು ಸೋಲಿಸುತ್ತೇನೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು