ಕಲಬುರಗಿ: ಜಿಲ್ಲೆಯಲ್ಲಿ ಏಕ ಬೆಳೆ ಪದ್ಧತಿ ಅನುಸರಿಸುವುದರಿಂದ ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ ಕಾಣಿಸುವುದರೊಂದಿಗೆ ಬೆಳೆಗಳ ಇಳುವರಿ ಕುಂಠಿತವಾಗುತ್ತಿರುವುದು ಕಂಡುಬಂದಿರುತ್ತಿದೆ.

ಇದಕ್ಕೆ ನಿರ್ವಹಣಾ ಕ್ರಮವಾಗಿ ಜಿಲ್ಲೆಯ ರೈತರ ಅನುಕೂಲಕ್ಕಾಗಿ ಇರುವ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಕಲಬುರಗಿ-2 (ರದ್ದೇವಾಡಗಿ)ಯ ಮಣ್ಣು ಮತ್ತು ನೀರು ಪರೀಕ್ಷಾ ಕೇಂದ್ರದಲ್ಲಿ ಕಳೆದ ಒಂದು ವರ್ಷದಲ್ಲಿ ಇಲ್ಲಿಯವರೆಗೆ ಜಿಲ್ಲೆಯ ಹಲವು ಮಣ್ಣು ಮತ್ತು ನೀರು ಮಾದರಿಗಳನ್ನು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಕಲಬುರಗಿ-2 (ರದ್ದೇವಾಡಗಿ)ಯಲ್ಲಿ ಪರೀಕ್ಷೆ ಮಾಡಿ, ಮಣ್ಣು ಪರೀಕ್ಷೆಯ ಆಧಾರದ ಮೇಲೆ ಹೆಚ್ಚಿನ ಇಳುವರಿಗಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ರೈತರಿಗೆ ಮಣ್ಣು ಆರೋಗ್ಯ ಚೀಟಿ ನೀಡುವ ಮೂಲಕ ತಿಳಿಸಲಾಗುತ್ತಿದೆ.

ಇದರ ಪ್ರಯೋಜನ ಪಡೆದುಕೊಂಡು ಕೃಷಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವಂತೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಪಿ. ವಾಸುದೇವ್ ನಾಯ್ಕ್ರವರು ರೈತರಿಗೆ ಸಲಹೆ ನೀಡಿದ್ದಾರೆ.

ಈಗಾಗಲೇ ಜಿಲ್ಲೆಯಲ್ಲಿ ಬೆಳೆಯಲಾಗುವ ಹಲವು ಬೆಳೆಗಳಲ್ಲಿ ಲಘು ಪೋಷಕಾಂಶಗಳ ಕೊರತೆ ಕಂಡುಬಂದಿದೆ. ಹೆಚ್ಚು ರಾಸಾಯನಿಕ ಗೊಬ್ಬರಗಳ ಅವಲಂಬನೆಯಿಂದಾಗಿ ಹಾಗೂ ಸಾವಯವ ವಸ್ತುಗಳ (ತಿಪ್ಪೆಗೊಬ್ಬರ, ಎರೆಗೊಬ್ಬರ, ಕಾಂಪೋಷ್ಟ, ಹಸಿರೆಲೆಗೊಬ್ಬರ ಇತ್ಯಾದಿ) ಕಡಿಮೆ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಆದ್ದರಿಂದ ರೈತರು ತಮ್ಮ ಜಮೀನಿನ ಮಣ್ಣಿನ ಮಾದರಿಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಮಣ್ಣು ಪರೀಕ್ಷಾ ಫಲಿತಾಂಶದ ಮೇಲೆ ಬೆಳೆ ಆಯ್ಕೆ ಮತ್ತು ಬೆಳೆಗಳಿಗೆ ಅವಶ್ಯಕತೆಗೆ ತಕ್ಕಂತೆ ಗೊಬ್ಬರಗಳ ಪ್ರಮಾಣವನ್ನು ನಿರ್ಧರಿಸಬಹುದು.

ಅಲ್ಲದೇ ಬೆಳೆಗಳಿಗೆ ಸಮತೋಲನ ಗೊಬ್ಬರಗಳ ಬಳಕೆ ಹಾಗೂ ಉತ್ಪಾದಕತೆಯನ್ನು ಅಂದರೆ ಮಣ್ಣು ಆರೋಗ್ಯವನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ ಜೊತೆಗೆ ಪೋಷಕಾಂಶಗಳ ಶಿಫಾರಸ್ಸು ಮಾಹಿತಿಗಳನ್ನು ಮಣ್ಣು ಆರೋಗ್ಯ ಚೀಟಿ ರೂಪದಲ್ಲಿ ರೈತರಿಗೆ ವಿತರಣೆ ಮಾಡಲಾಗುವುದು. ಇದಲ್ಲದೆ ಭೂಮಿಯಲ್ಲಿ ಲಭ್ಯವಿರುವ ನೀರಿನ ಗುಣಮಟ್ಟ ಕೃಷಿಯಲ್ಲಿ ಮುಖ್ಯವಾಗಿದೆ. ಬೋರವೆಲ್ ಅಥವಾ ಬಾವಿಯ ಮೂಲಕ ನೀರಾವರಿ ಕೈಗೊಳ್ಳುತ್ತಿದ್ದರೆ ಒಮ್ಮೆಯಾದರೂ ಆ ನೀರಿನ ಪರೀಕ್ಷೆ ಮಾಡಿಸುವುದು ಉತ್ತಮ.

ಇಂದಿನ ದಿನಗಳಲ್ಲಿ ಪೋಷಕಾಂಶಗಳ ನಿರ್ವಹಣೆ, ಅಗತ್ಯವಿದ್ದಷ್ಟು ಗೊಬ್ಬರಗಳನ್ನು ಕೊಡುವುದರಿಂದ ಇಳುವರಿ ಜೊತೆಗೆ ಕಡಿಮೆ ಖರ್ಚಿನ ಬೇಸಾಯವನ್ನು ಕೈಗೊಂಡು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳವುದಲ್ಲದೇ ಮಣ್ಣಿನ ಹಾಗೂ ಜನರ ಆರೋಗ್ಯದ ದೃಷ್ಟಿಯಿಂದಲೂ ಸಹ ಲಾಭದಾಯಕವಾಗಿದೆ. ಜಿಲ್ಲೆಯ ರೈತರು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ಮತ್ತು ನೀರು ಪರೀಕ್ಷಾ ಕೇಂದ್ರದ ಹಾಗೂ ವಿಜ್ಞಾನಿಗಳ ಸಲಹೆಯ ಪ್ರಯೋಜನ ಪಡೆದುಕೊಂಡು ಮಣ್ಣಿನ ಫಲವತ್ತತೆಯನ್ನು ರಕ್ಷಿಸಿ ಕೃಷಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ ಕಲಬುರಗಿ-2 (ರದ್ದೇವಾಡಗಿ)ಯ ಮಣ್ಣು ವಿಜ್ಞಾನಿ ಡಾ. ಚಂದ್ರಕಾAತ ರವರನ್ನು ಸಂಪರ್ಕಿಸಬಹುದು.