ಕಲಬುರಗಿ : ಕಲಬುರಗಿ-ಬೆಂಗಳೂರು ಸಂಚಾರ ಜೂನ್ 10 ರಿಂದ ಪುನರಾರಂಭಗೊಳ್ಳುತ್ತಿದೆ. ಸ್ಟಾರ್ ಏರ್ ಸಂಸ್ಥೆಯ 76 ಸೀಟುಗಳ ವಿಮಾನ ವಾರದ 7 ದಿನ ಸಂಚಾರ ಮಾಡಲಿದೆ.
ಕಳೆದ ಎಂಟು ತಿಂಗಳಿನಿಂದ ಸ್ಥಗಿತಗೊಂಡಿದ್ದ ವಿಮಾನ ಸಂಚಾರ ಪುನರ್ ಆರಂಭವಾದಂತಾಗಲಿದೆ.ರಾಜ್ಯ ಸರ್ಕಾರವು ಆರ್ಥಿಕ ನೆರವು ವಿಸ್ತರಿಸಿದ ಬೆನ್ನಲ್ಲೇ ಸ್ಟಾರ್ ಏರ್ ಸಂಸ್ಥೆಯು ವಾರದ ಏಳೂ ದಿನಗಳೂ ಈ ಮಾರ್ಗದಲ್ಲಿ ವಿಮಾನ ಯಾನ ಸೇವೆ ನೀಡಲು ಮುಂದೆ ಬಂದಿದೆ.
ಪ್ರತಿದಿನ ಬೆಳಗ್ಗೆ 6:30ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನವು 7:40ಕ್ಕೆ ಕಲಬುರಗಿ ತಲುಪಲಿದೆ. ತದನಂತರ 30 ನಿಮಿಷಗಳ ಬಿಡುವಿನ ನಂತರ, ಬೆಳಗ್ಗೆ 8:10ಕ್ಕೆ ಕಲಬುರಗಿಯಿಂದ ಹೊರಟು ಬೆಂಗಳೂರಿಗೆ ವಾಪಸ್ ಆಗಲಿದೆ.
ಈ ಮುಂಜಾನೆಯ ಸಮಯದ ಸೇವೆಯು ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ತುರ್ತು ಕೆಲಸದ ನಿಮಿತ್ತ ರಾಜಧಾನಿಗೆ ತೆರಳುವ ಸಾರ್ವಜನಿಕರಿಗೆ ಭಾರಿ ಅನುಕೂಲ ಕಲ್ಪಿಸಲಿದೆ. 2020 ರಿಂದ 2025 ರ ಅವಧಿಯಲ್ಲಿ ಈ ಮಾರ್ಗದಲ್ಲಿ ಒಟ್ಟು 5,792 ಬಾರಿ ವಿಮಾನ ಸಂಚಾರ ನಡೆದಿದ್ದು, 2.83 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ.

