ಕಲಬುರ್ಗಿ: ಹೆಸರು ಮತ್ತು ಉದ್ದು ಬೆಳೆಯಲ್ಲಿ ಕ್ಷೇತ್ರೋತ್ಸವ ಕೃಷಿ ವಿಜ್ಞಾನ ಕೇಂದ್ರ ರದ್ದೇವಾಡಗಿ ಮತ್ತು ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ ಚಿತ್ತಾಪುರ ಇವರ ಸಹಭಾಗಿತ್ವದಲ್ಲಿ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮರಗೋಳ ಗ್ರಾಮದಲ್ಲಿ ಆ 26 ರಂದು ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿಯಲ್ಲಿ ರೈತರ ಹೊಲದಲ್ಲಿ ಹೆಸರು ಮತ್ತು ಉದ್ದು ಬೆಳೆಯಲ್ಲಿ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಯಿತು.
Whatsapp Image 2024 08 26 At 10.44.46 Am

ಈ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಶ್ರೀ. ರವೀಂದ್ರಕುಮಾರ ಮಾತನಾಡಿ ಬಿತ್ತನೆ ಬೀಜ ವಿತರಣೆ ಮಾಡಿ, ಸುಧಾರಿತ ಬೇಸಾಯ ಕ್ರಮಗಳು, ಸಮಗ್ರ ಪೀಡೆ ಮತ್ತು ಪೋಷಕಾಂಶಗಳ ನಿರ್ವಹಣೆಯಿಂದ ಹೆಚ್ಚಿನ ಇಳುವರಿಯನ್ನು ಪಡೆದ ರೈತರಿಂದ ಇನ್ನುಳಿದ ರೈತರಿಗೆ ಸಮಗ್ರ ಮಾಹಿತಿ ಕೊಡಮಾಡಲಾಯಿತು.

ಸಾಮಾನ್ಯವಾಗಿ ಈ ಭಾಗದಲ್ಲಿ ಎಕರೆಗೆ 2 ರಿಂದ 3 ಕ್ವಿಂಟಾಲ್ ಬರುತ್ತಿದ್ದು ರೈತರಾದ ಶ್ರೀ. ಭಿಮಾಶಂಕರ್ ಬಡಿಗೇರ್ ಅವರು 3 ಎಕರೆ 20 ಗುಂಟೆಯಲ್ಲಿ 17 ಕ್ವಿಂಟಾಲ್ ಹೆಸರು ಬೆಳೆಯನ್ನು ಪಡೆದು ಇನ್ನುಳಿದ ರೈತರಿಗೆ ಮಾದರಿಯಾಗಿರುತ್ತಾರೆ. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಮಲ್ಲಪ್ಪ (ಬೇಸಾಯಶಾಸ್ತ್ರ ವಿಜ್ಞಾನಿ)ರವರು ಮಾತನಾಡಿ ಸಮಗ್ರ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ರೈತರು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು.

ಅದೇ ರೀತಿ ಡಾ.ಚಂದ್ರಕಾಂತ (ಮಣ್ಣು ವಿಜ್ಞಾನಿ)ರವರು ಮಣ್ಣಿನ ಫಲವತ್ತತೆಗಣುಗುಣವಾಗಿ ಬೆಳೆಗಳು ಬೆಳೆಯುವುದು, ಮಣ್ಣಿನ ಸಂರಕ್ಷಣೆ ಮತ್ತು ಸಮಗ್ರ ಪೋಷಕಾಂಶ ನಿರ್ವಹಣೆ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದೆಂದು ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮದಲ್ಲಿ ಗ್ರಾಮದ ರೈತರು. ಕೃಷಿ ಸಖಿಯರು, ಬಿಟಿಎಮ್ ಮತ್ತು ಎನ್‍ಆರ್‍ಎಲ್‍ಎಮ್ ಸಂಯೋಜಕರು ಭಾಗವಹಿಸಿದ್ದರು.

2024-25ರ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿಜಿಎಸ್-9 ಹೆಸರಿನ ತಳಿಯನ್ನು ಬಿತ್ತಿದ್ದು, ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡು ಎಕರೆಗೆ 5 ಕ್ವಿಂಟಾಲ್ ಇಳುವರಿಯನ್ನು ಪಡೆದುಕೊಂಡಿರುತ್ತೇನೆ ಎಂದು ಶ್ರೀ. ಭಿಮಾಶಂಕರ್ ಬಡಿಗೇರ್ ಅಭಿಪ್ರಾಯ ಪಟ್ಟರು.