ಕಲಬುರಗಿ: ಅಫಜಲಪುರ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ನೂರಾರು ಗ್ರಾಮೀಣ ಪ್ರದೇಶದ ಮಕ್ಕಳು ವಾಸವಾಗಿದ್ದು, ಪಟ್ಟಣದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿದೆ. ಸುಸಜ್ಜಿತ ಕಟ್ಟಡ ವ್ಯವಸ್ಥೆ ಇದೆಯಾದರೂ ವಸತಿ ನಿಲಯಕ್ಕೆ ತೆರಳಲು ರಸ್ತೆಯೇ ಇಲ್ಲ. ಕೆಸರು ಮುಳ್ಳಿನ ಹಾಸಿನಲ್ಲಿ ಮಕ್ಕಳು ನಿಲಯಕ್ಕೆ ತೇರಳುವ ಪರಸ್ಥಿತಿ ಇದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಗುರುದೇವ ಪೂಜಾರಿ ನೂತನ ಕಟ್ಟಡ ನಿರ್ಮಾಣವಾದಾಗಿನಿಂದ ವಸತಿ ನಿಲಯಕ್ಕೆ ಸೂಕ್ತ ರಸ್ತೆಯೇ ಇಲ್ಲ.ಇದನ್ನು ಹತ್ತಾರು ಬಾರಿ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪರಿಹಾರವಾಗುತ್ತಿಲ್ಲ.
ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಹಾಸ್ಟೆಲ್ ವ್ಯವಸ್ಥೆ ಮಾಡಿಕೊಂಡ ಬಂದರೆ ಕಷ್ಟದಲ್ಲೇ ಕಾಲಕಳೆಯುವ ಪರಸ್ಥಿತಿ ನಿರ್ಮಾಣವಾಗಿದೆ. ಸುಮಾರು ಸಾವಿರ ಮೀಟರ ಕೆಸರು ಗದ್ದೆಯಲ್ಲಿ ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿದ್ದಾರೆ.
ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ರಸ್ತೆ ವ್ಯವಸ್ಥೆ ಮಾಡದೆ ಹೋದರೆ ವಸತಿ ನಿಲಯದ ಮಕ್ಕಳೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಸೇರಿದಂತೆ ಜನಪ್ರತಿನಿಧಿಗಳ ಕಚೇರಿಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದರು.

